ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಪ್ತಿಯಾದ ಮದ್ಯ ಬಾಟಲಿಗಳಿಂದ ಬಳೆ ತಯಾರಿಕೆ: ಮಹಿಳೆಯರಿಗೆ ಬಿಹಾರದಲ್ಲಿ ಹೊಸ ಉದ್ಯೋಗ

Last Updated 10 ಸೆಪ್ಟೆಂಬರ್ 2022, 7:41 IST
ಅಕ್ಷರ ಗಾತ್ರ

ಪಟ್ನಾ:ಮದ್ಯ ನಿಷೇಧಿತ ಬಿಹಾರದಲ್ಲಿ ಜಪ್ತಿ ಮಾಡಲಾದ ಮದ್ಯ ಬಾಟಲಿಗಳಿಂದ ಬಳೆಗಳನ್ನು ತಯಾರಿಸುವ ಮೂಲಕ ಗ್ರಾಮೀಣ ಮಹಿಳೆಯರಿಗೆ ಹೊಸ ಉದ್ಯೋಗ ಕಲ್ಪಿಸಲುಅಲ್ಲಿನ ಸರ್ಕಾರ ಮುಂದಾಗಿದೆ. ಈ ಮೂಲಕ ತ್ಯಾಜ್ಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲೂ ವಿನೂತನ ಪ್ರಯತ್ನ ನಡೆಸಿದೆ.

ರಾಜ್ಯ ಸರ್ಕಾರದ ಮದ್ಯಪಾನ ತಡೆ ಇಲಾಖೆಯು ಬಳೆಗಳನ್ನು ತಯಾರಿಸುವ ಘಟಕ ಸ್ಥಾಪನೆಗೆ ₹1 ಕೋಟಿ ಅನುದಾನ ನೀಡಲು ಮುಂದಾಗಿದೆ. ಈ ಮೂಲಕ ಜೀವಿಕಾ (JEEViKA) ಯೋಜನೆಯಡಿ ಗ್ರಾಮೀಣ ಮಹಿಳೆಯರ ಜೀವನಾಧಾರಕ್ಕೆ ಮಾರ್ಗ ಕಲ್ಪಿಸಲು ನಿರ್ಧರಿಸಿದೆ.

ರಾಜ್ಯದಲ್ಲಿ ಪ್ರತಿವರ್ಷ ದೊಡ್ಡ ಪ್ರಮಾಣದ ಮದ್ಯವನ್ನು ಜಪ್ತಿ ಮಾಡಲಾಗುತ್ತಿದೆ. ಹೀಗೆ ವಶಪಡಿಸಿಕೊಳ್ಳಲಾದ ಮದ್ಯ ಬಾಟಲಿಗಳನ್ನು ನಾಶಪಡಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಅವುಗಳನ್ನು ಬುಲ್ಡೋಜರ್‌ ಮೂಲಕ ಪುಡಿ ಮಾಡಲಾಗುತ್ತಿದೆ ಎಂದು ಮದ್ಯಪಾನ ತಡೆ ಮತ್ತು ಅಬಕಾರಿ ಸಚಿವ ಸುನೀಲ್‌ ಕುಮಾರ್‌ ಹೇಳಿದ್ದಾರೆ.

ಜೀವಿಕಾ ಕಾರ್ಯಕರ್ತರಿಗೆ ಗಾಜಿನ ಬಳೆಗಳನ್ನು ತಯಾರಿಸಲು ಕಚ್ಚಾ ವಸ್ತುವಾಗಿ ಜಪ್ತಿ ಮಾಡಿದ ಮದ್ಯ ಬಾಟಲಿಗಳನ್ನು ಪೂರೈಸಲು ಮುಂದಾಗಿದ್ದೇವೆ. ಜೀವಿಕಾ ಕಾರ್ಯಕರ್ತೆಯರ ಒಂದು ಗುಂಪಿಗೆ ಗ್ರಾಮೀಣ ಅಭಿವೃದ್ಧಿ ಇಲಾಖೆಯ ವತಿಯಿಂದ ಮದ್ಯಬಾಟಲಿಗಳನ್ನು ಉಪಯೋಗಿಸಿಕೊಂಡು ಗಾಜಿನ ಬಳೆಗಳನ್ನು ತಯಾರಿಸಲು ತರಬೇತಿ ನೀಡಲಾಗಿದೆ ಎಂದು ಸುನೀಲ್‌ ಕುಮಾರ್‌ ವಿವರಿಸಿದ್ದಾರೆ.

ಬಿಹಾರದಲ್ಲಿ 2016ರ ಏಪ್ರಿಲ್‌ನಲ್ಲಿ ಮದ್ಯವನ್ನು ನಿಷೇಧ ಮಾಡಲಾಗಿದೆ. ಮದ್ಯ ಸೇವನೆ, ಶೇಖರಣೆ, ಮಾರಾಟ ಮತ್ತು ಉತ್ಪಾದನೆ ಶಿಕ್ಷಾರ್ಹ ಅಪರಾಧವಾಗಿದೆ.

ರಾಜ್ಯದಲ್ಲಿ ಈ ವರ್ಷ ಜನವರಿಯಿಂದ ಮೇ ವರೆಗಿನ ಅವಧಿಯಲ್ಲಿ ಸುಮಾರು 13.87 ಲಕ್ಷ ಲೀಟರ್‌ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT