ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಥರಸ್ ಅತ್ಯಾಚಾರ, ಕೊಲೆ ವರದಿಗಾರಿಕೆ ವೇಳೆ ಬಂಧನ: ಪತ್ರಕರ್ತ ಕಪ್ಪನ್‌ಗೆ ಜಾಮೀನು

Last Updated 9 ಸೆಪ್ಟೆಂಬರ್ 2022, 20:48 IST
ಅಕ್ಷರ ಗಾತ್ರ

ನವದೆಹಲಿ:ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಗಲಭೆ ಸೃಷ್ಟಿಸಲು ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಕೇರಳದ ಪತ್ರಕರ್ತ ಸಿದ್ದಿಕ್‌ ಕಪ್ಪನ್ ಅವರಿಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ. ಸಂತ್ರಸ್ತರ ಪರವಾಗಿ ನ್ಯಾಯ ಕೇಳುವುದು ಅಪರಾಧವೇ ಎಂದು ಸುಪ್ರೀಂ ಕೋರ್ಟ್‌ ಪೀಠವು ಪ್ರಶ್ನಿಸಿದೆ.ವ್ಯವಸ್ಥೆಯಲ್ಲಿನ ಕೊರತೆಗಳನ್ನು ಎತ್ತಿತೋರಿಸಲು ಪ್ರತಿಭಟನೆಗಳು ಅನಿವಾರ್ಯ ಎಂದು ಪೀಠವು ಹೇಳಿದೆ.

ಸಿದ್ದಿಕ್‌ ಅವರ ವಿರುದ್ಧಹಣ ಅಕ್ರಮ ವರ್ಗಾವಣೆ ಕಾಯ್ದೆ ಅಡಿಯೂ ಪ್ರಕರಣದಾಖಲಿಸಲಾಗಿದೆ. ಆ ಪ್ರಕರಣದಲ್ಲಿಜಾಮೀನು ಪಡೆಯುವ ಸಂಬಂಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಗೆ ಸ್ವತಃ ಸಿದ್ದಿಕ್‌ ಅವರು ಹಾಜರಾಗುವುದರಿಂದಲೂಸುಪ್ರೀಂ ಕೋರ್ಟ್‌ ವಿನಾಯಿತಿ ನೀಡಿದೆ.

2020ರ ಅಕ್ಟೋಬರ್‌ನಲ್ಲಿ ಹಾಥರಸ್‌ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿಗಾರಿಕೆ ಸಂಬಂಧ, ಹಾಥರಸ್‌ಗೆ ತೆರಳುತ್ತಿದ್ದಾಗ ಪೊಲೀಸರು ಸಿದ್ದಿಕ್‌ ಅವರನ್ನು ಬಂಧಿಸಿದ್ದರು. ಅವರ ವಿರುದ್ಧ ದೇಶದ್ರೋಹ ಮತ್ತು ಗಲಭೆಗೆ ಸಂಚು ರೂಪಿಸಿದ ಆರೋಪ ಹೊರಿಸಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ (ಯುಎಪಿಎ) ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಅವರ ಜಾಮೀನು ಅರ್ಜಿಯನ್ನು ಮಥುರಾ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು. ಅಲಹಾಬಾದ್‌ ಹೈಕೋರ್ಟ್‌ ಸಹ ಜಾಮೀನು ನೀಡಲು ನಿರಾಕರಿಸಿತ್ತು. ಹೈಕೋರ್ಟ್‌ ಆದೇಶದ ವಿರುದ್ಧ ಸಿದ್ದಿಕ್‌ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮುಖ್ಯನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿ ಎಸ್‌.ರವೀಂದ್ರ ಭಟ್ ಅವರು ಇದ್ದ ಪೀಠವು ಅರ್ಜಿಯ ವಿಚಾರಣೆ ನಡೆಸಿತು. ಗಲಭೆ ನಡೆಸಲು ಸಿದ್ದಿಕ್‌ ಸಂಚು ರೂಪಿಸಿ
ದ್ದರು ಎಂಬ ನಿರ್ಧಾರಕ್ಕೆ ಬರಲು ಆಧಾರ
ಗಳೇನು ಎಂದು ಪೀಠವು ಪ್ರಶ್ನಿಸಿತು.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ‘ಸಿದ್ದಿಕ್‌ ಕಪ್ಪನ್ ಉಗ್ರ ಸಂಘಟನೆ ಪಿಎಫ್‌ಐ ಜತೆ ಸಭೆ ನಡೆಸಿದ್ದರು. 2020ರ ಅಕ್ಟೋಬರ್ 5ರಂದು ಹಾಥರಸ್‌ನಲ್ಲಿ ಗಲಭೆ ನಡೆಸಲು ಸಿದ್ಧತೆ ನಡೆಸಿದ್ದರು. 1990ರ ದಶಕದಲ್ಲಿ ಮುಂಬೈನಲ್ಲಿ ನಡೆಸಿದ ಗಲಭೆಯ ರೀತಿಯದ್ದೇ ಸಂಚು ಅದಾಗಿತ್ತು’ ಎಂದು ಹೇಳಿದರು. ಆಗ ಪೀಠವು, ‘ಅವರ ಬಳಿ ಏನೇನು ದೊರೆಯಿತು’ ಎಂದು ಪ್ರಶ್ನಿಸಿತು. ‘ಗುರುತಿನ ಚೀಟಿ, ಕೆಲವು ಪ್ರಚೋದನಕಾರಿ ಸಾಹಿತ್ಯ ದೊರೆತವು’ ಎಂದು ಜೇಠ್ಮಲಾನಿ ಉತ್ತರಿಸಿದರು.

ಅದಕ್ಕೆ ಪೀಠವು, ‘ಅವರ ಬಳಿಸ್ಫೋಟಕವೇನಾದರೂ ಇತ್ತೇ? ಪ್ರಚೋದನಕಾರಿ ಸಾಹಿತ್ಯ ಎಂಬುದು ಹೇಗೆ ಗೊತ್ತಾಯಿತು’ ಎಂದು ಪ್ರಶ್ನಿಸಿತು. ‘ಇಲ್ಲ. ಅತ್ಯಾಚಾರ ಸಂತ್ರಸ್ತೆಯು ದಲಿತ ಸಮುದಾಯದ ಬಾಲಕಿ. ದಲಿತರೇ ಸುಮ್ಮನಿದ್ದರು. ಆದರೆ ಅವರನ್ನು ಕೆರಳಿಸಲು ಪಿಎಫ್‌ಐ ಮತ್ತು ಸಿದ್ದಿಕ್‌ ಸಂಚು ರೂಪಿಸಿದ್ದರು. ದಲಿತರನ್ನು ಕೆರಳಿಸುವ ಉದ್ದೇಶದ ಸಾಹಿತ್ಯವನ್ನು ಅವರು ಹೊಂದಿದ್ದರು’ ಎಂದು ಜೇಠ್ಮಲಾನಿ ವಿವರಿಸಿದರು.

ಆಗ, ಸಿದ್ದಿಕ್‌ ಪರ ವಕೀಲ ಕಪಿಲ್ ಸಿಬಲ್ ಮಧ್ಯಪ್ರವೇಶಿಸಿದರು. ‘ಸಿದ್ದಿಕ್‌ ಅವರ ಕಾರಿನಲ್ಲಿ ಇದ್ದದ್ದು ‘ಜಸ್ಟೀಸ್‌ ಫಾರ್ ಹಾಥರಸ್ ಗರ್ಲ್‌’ ಎಂಬ ಕರಪತ್ರ ಅಷ್ಟೆ’ ಎಂದು ಹೇಳಿದರು.

ಅದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯನ್ಯಾಯಮೂರ್ತಿಯು, ‘ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸಂತ್ರಸ್ತ ಬಾಲಕಿಗೆ ನ್ಯಾಯ ಸಿಗಬೇಕು ಮತ್ತು ಅದಕ್ಕಾಗಿ ಎಲ್ಲರೂ ದನಿ ಎತ್ತಬೇಕು ಎಂಬುದನ್ನು ತೋರಿಸಲು ಅವರು ಯತ್ನಿಸಿದ್ದರು. ಇದು ಕಾನೂನಿನ ಕಣ್ಣಿನಲ್ಲಿ ಅಪರಾಧವೇ’ ಎಂದು ಪ್ರಶ್ನಿಸಿದರು.

ಪೀಠದಲ್ಲಿದ್ದ ಮತ್ತೊಬ್ಬ ನ್ಯಾಯಮೂರ್ತಿ ರವೀಂದ್ರ ಭಟ್ ಸಹ ಇದಕ್ಕೆ ದನಿಗೂಡಿಸಿದರು.‘2012ರಲ್ಲಿ ಇಂಡಿಯಾ ಗೇಟ್‌ ಬಳಿ ನಡೆದ ಪ್ರತಿಭಟನೆ ಬಗ್ಗೆ ನಿಮಗೆ ಗೊತ್ತಿರಬೇಕು. ಆ ಪ್ರತಿಭಟನೆಯ ಕಾರಣದಿಂದ ಹೊಸ ಕಾನೂನೇ ಜಾರಿಗೆ ಬಂದಿತು. ಎಲ್ಲೋ ಏನೋ ಕೊರತೆ ಇದೆ ಎಂಬುದನ್ನು ಎತ್ತಿ ತೋರಿಸಲು ಇಂತಹ ಪ್ರತಿಭಟನೆಗಳು ಅನಿವಾರ್ಯ’ ಎಂದು ಹೇಳಿದರು.

ಸಿದ್ದಿಕ್‌ ಅವರ ಬಳಿ ಪ್ರಚೋದನಕಾರಿ ಬರಹಗಳು ಇದ್ದವು ಎಂಬುದನ್ನು ತೋರಿಸಲು ನಿಮಗೆ ಸಾಧ್ಯವಾಗಿಲ್ಲ ಎಂದು ಪೀಠವು ಮಹೇಶ್ ಜೇಠ್ಮಲಾನಿ ಅವರಿಗೆ ಹೇಳಿತು. ಸಿದ್ದಿಕ್‌ ಅವರಿಗೆ ಜಾಮೀನು ಮಂಜೂರು ಮಾಡಿತು.

ಪ್ರಕರಣದ ವಿವರ: 2020ರ ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಹಾಥರಸ್‌ನಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಕೃತ್ಯದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಬಾಲಕಿ ಕೆಲವೇ ದಿನಗಳಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಮೃತ ಬಾಲಕಿಯ ಕುಟುಂಬದವರಿಗೆ ಗೊತ್ತಿಲ್ಲದೆಯೇ ಪೊಲೀಸರು ತಡರಾತ್ರಿಯಲ್ಲಿ ರಹಸ್ಯವಾಗಿ, ಶವವನ್ನು ದಹನ ಮಾಡಿದ್ದರು.

ಈ ಪ್ರಕರಣದ ವಿರುದ್ಧ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು.

ಷರತ್ತುಬದ್ಧ ಜಾಮೀನು: ಆರೋಪಿ ಸಿದ್ದಿಕ್‌ ಅವರನ್ನು ಮೂರು ದಿನಗಳ ಒಳಗೆ ವಿಚಾರಣಾ ನ್ಯಾಯಾಲಯದ ಎದುರು ಹಾಜರು ಮಾಡಬೇಕು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಹೇಳಿದೆ. ಕೆಲವು ಷರತ್ತುಗಳನ್ನೂ ಹಾಕಿದೆ. ದೆಹಲಿಯ ಜಂಗ್‌ಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲೇ ಆರೋಪಿ ಇರಬೇಕು. ವಿಚಾರಣಾ ನ್ಯಾಯಾಲಯದ ಅನುಮತಿ ಪಡೆಯದೆ ಬೇರೆಡೆಗೆ ಹೋಗಬಾರದು. ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರತಿ ಸೋಮವಾರ ಆರೋಪಿ ಸಹಿ ಮಾಡಬೇಕು. ಆರು ವಾರಗಳವರೆಗೆ ಸಿದ್ದಿಕ್‌ ದೆಹಲಿಯಲ್ಲೇ ಇರಬೇಕು. ಆನಂತರ ಕೇರಳಕ್ಕೆ ತೆರಳಬಹುದು. ಆದರೆ, ಪ್ರತಿ ಸೋಮವಾರ ‍ಪೊಲೀಸ್ ಠಾಣೆಯಲ್ಲಿ ಸಹಿ ಹಾಕಬೇಕು ಎಂದು ಸುಪ್ರೀಂ ಕೋರ್ಟ್‌ ಷರತ್ತು ಹಾಕಿದೆ.

***

ಎರಡು ವರ್ಷಗಳಲ್ಲಿ ನಾವು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ತೊಂದರೆಗಳನ್ನು ಎದುರಿಸಿದ್ದೇವೆ. ಜಾಮೀನು ದೊರೆತ ಸುದ್ದಿ ಕೇಳಿ ನಿರಾಳವಾಗುತ್ತಿದೆ

ರೈಹಾನತ್ , ಸಿದ್ದಿಕ್‌ ಕಪ್ಪನ್ ಪತ್ನಿ

ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಒತ್ತಿ ಹೇಳಿದೆ. ಇಂದಿನ ಸಂದರ್ಭದಲ್ಲಿ ಇದು ಅತ್ಯಂತ ಒಳ್ಳೆಯ ಸಂಗತಿ

ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT