ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಾಸಮತ ಸಾಬೀತುಪಡಿಸಿದ ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೇನ್

Published 5 ಫೆಬ್ರುವರಿ 2024, 9:55 IST
Last Updated 5 ಫೆಬ್ರುವರಿ 2024, 9:55 IST
ಅಕ್ಷರ ಗಾತ್ರ

ರಾಂಚಿ: ಮುಖ್ಯಮಂತ್ರಿ ಚಂಪೈ ಸೊರೇನ್‌ ನೇತೃತ್ವದ ಜಾರ್ಖಂಡ್‌ನ ಸಮ್ಮಿಶ್ರ ಸರ್ಕಾರವು ವಿಧಾನಸಭೆಯಲ್ಲಿ ಸೋಮವಾರ ಬಹುಮತ ಸಾಬೀತುಪಡಿಸಿದೆ.

81 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಎಂಎಂ, ಕಾಂಗ್ರೆಸ್‌ ಮತ್ತು ಆರ್‌ಜೆಡಿ ಮೈತ್ರಿಕೂಟದ 47 ಶಾಸಕರು ಚಂಪೈ ಸರ್ಕಾರಕ್ಕೆ ಬೆಂಬಲ ನೀಡಿದರು. 29 ಶಾಸಕರು ವಿಶ್ವಾಸಮತದ ವಿರುದ್ಧವಾಗಿ ಮತ ಚಲಾಯಿಸಿದರು. ಪಕ್ಷೇತರ ಶಾಸಕ ಸರಯೂ ರಾಯ್‌ ಅವರು ಮತದಾನದಿಂದ ದೂರವುಳಿದರು. ವಿಶ್ವಾಸಮತಯಾಚನೆ ವೇಳೆ ವಿಧಾನಸಭೆಯಲ್ಲಿ 77 ಶಾಸಕರು ಹಾಜರಿದ್ದರು.

ಜಾರಿ ನಿರ್ದೇಶನಾಲಯವು ಹೇಮಂತ್‌ ಸೊರೇನ್‌ ಅವರನ್ನು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜನವರಿ 31 ರಂದು ಬಂಧಿಸಿತ್ತು. ಅದಕ್ಕೂ ಮುನ್ನ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಚಂಪೈ, ಫೆಬ್ರುವರಿ 2ರಂದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ವಿಶ್ವಾಸ ಮತಯಾಚನೆ ಪ್ರಕ್ರಿಯೆಯಲ್ಲಿ ಹೇಮಂತ್‌ ಸೊರೇನ್‌ ಅವರೂ ಭಾಗವಹಿಸಿದ್ದರು. ಇ.ಡಿ ಬಂಧನದಲ್ಲಿರುವ ಅವರಿಗೆ ರಾಂಚಿಯ ವಿಶೇಷ ನ್ಯಾಯಾಲಯವು ಅನುಮತಿ ನೀಡಿತ್ತು.

ಬಿಜೆಪಿಯವರು ಶಾಸಕರನ್ನು ಖರೀದಿಸಬಹುದು ಎಂಬ ಆತಂಕದಿಂದ ಫೆಬ್ರುವರಿ 2ರಂದು ಹೈದರಾಬಾದ್‌ಗೆ ತೆರಳಿದ್ದ ಮೈತ್ರಿಕೂಟದ 38 ಶಾಸಕರು, ಭಾನುವಾರ ಸಂಜೆ ರಾಂಚಿಗೆ ವಾಪಸಾಗಿದ್ದರು.

ಕಾಂಗ್ರೆಸ್‌ ಅಭಿನಂದನೆ: ವಿಶ್ವಾಸಮತ ಗೆದ್ದ ಚಂಪೈ ಸರ್ಕಾರವನ್ನು ಕಾಂಗ್ರೆಸ್‌ ಅಭಿನಂದಿಸಿದೆ. ‘ನಾವು ನಿರಾಯಾಸವಾಗಿ ಬಹುಮತ ಸಾಬೀತುಪಡಿಸಿದ್ದೇವೆ. ಬಿಜೆಪಿಯ ಆಪರೇಷನ್‌ ಕಮಲ ಯತ್ನ ವಿಫಲಗೊಂಡಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಪ್ರತಿಕ್ರಿಯಿಸಿದ್ದಾರೆ.

‘ಬಿಜೆಪಿಯವರು ಮೊದಲು ಇ.ಡಿ ಮೂಲಕ ಹೇಮಂತ್‌ ಅವರನ್ನು ಬಂಧಿಸಿ, ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದರು. ಆ ಬಳಿಕ ಚಂಪೈ ಸೊರೇನ್‌ ಪ್ರಮಾಣವಚನ ಸ್ವೀಕರಿಸುವುದನ್ನು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದರು’ ಎಂದು ಆರೋಪಿಸಿದರು.

ಪ್ರಮುಖ ಅಂಶಗಳು

* ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಭಾಗಿ

* 81 ಸದಸ್ಯಬಲದ ಜಾರ್ಖಂಡ್‌ ವಿಧಾನಸಭೆ

* ಒಬ್ಬ ಶಾಸಕ ಕಳೆದ ತಿಂಗಳು ರಾಜೀನಾಮೆ ನೀಡಿದ್ದರಿಂದ ಬಹುಮತಕ್ಕೆ 41 ಮತಗಳು ಬೇಕಿದ್ದವು

* ಜೆಎಂಎಂನ 29, ಕಾಂಗ್ರೆಸ್‌ನ 17, ಆರ್‌ಜೆಡಿಯ ಒಬ್ಬ ಶಾಸಕನ ಬೆಂಬಲ

ನನ್ನ ಸರ್ಕಾರವು ಹೇಮಂತ್ ಸೊರೇನ್‌ ಆಡಳಿತದ ‘ಭಾಗ–2’ ಎಂದು ಹೇಳಲು ಹೆಮ್ಮೆಪಡುತ್ತೇನೆ. ಹೇಮಂತ್‌ ಹೈ ತೊ ಹಿಮ್ಮತ್‌ ಹೈ (ಹೇಮಂತ್ ಇದ್ದಲ್ಲಿ ಶಕ್ತಿ ಇದೆ)
–ಚಂಪೈ ಸೊರೇನ್‌, ಜಾರ್ಖಂಡ್‌ ಮುಖ್ಯಮಂತ್ರಿ
ಸರ್ವಾಧಿಕಾರಿಯ ದುರಹಂಕಾರವನ್ನು ಜಾರ್ಖಂಡ್‌ ನುಚ್ಚುನೂರು ಮಾಡಿದೆ. ಈ ದೇಶ ಹಾಗೂ ಇಲ್ಲಿನ ಜನರಿಗೆ ಒಲಿದ ಗೆಲುವು ಇದು.
–ಕಾಂಗ್ರೆಸ್‌
2024ರ ಜನವರಿ 31 ಭಾರತದ ಇತಿಹಾಸದಲ್ಲಿ ಕರಾಳ ಅಧ್ಯಾಯ. ರಾಜಭವನದ ಅಣತಿಯಂತೆ ಒಬ್ಬ ಮುಖ್ಯಮಂತ್ರಿಯನ್ನು ಬಂಧಿಸಲಾಯಿತು. 
–ಹೇಮಂತ್‌ ಸೊರೇನ್, ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ

ಆರೋಪ ಸಾಬೀತುಪಡಿಸಿ: ಬಿಜೆಪಿಗೆ ಸವಾಲು

‘ನನ್ನ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳನ್ನು ಸಾಬೀತುಪಡಿಸಿ’ ಎಂದು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ. ‘ಒಂದು ವೇಳೆ ಆರೋಪಗಳು ಸಾಬೀತಾದರೆ ರಾಜಕೀಯದಿಂದಲೇ ನಿವೃತ್ತಿಯಾಗುವೆ’ ಎಂದಿದ್ದಾರೆ.

‘ಕೇಂದ್ರ ಸರ್ಕಾರ ನಡೆಸಿದ ಪಿತೂರಿಯಿಂದ ನನ್ನನ್ನು ಬಂಧಿಸಲಾಗಿದೆ. ರಾಜಭವನದ ಪಾತ್ರವೂ ಇದರ ಹಿಂದಿದೆ’ ಎಂದು ಆರೋಪಿಸಿದ ಅವರು ‘ಜಾರ್ಖಂಡ್‌ನಲ್ಲಿ ಬುಡಕಟ್ಟು ಸಮುದಾಯದ ಮುಖ್ಯಮಂತ್ರಿಯೊಬ್ಬರು ಐದು ವರ್ಷ ಆಡಳಿತ ನಡೆಸುವುದನ್ನು ಬಿಜೆಪಿ ಬಯಸುವುದಿಲ್ಲ. ಬಿಜೆಪಿಯ ಆಡಳಿತದಲ್ಲೂ ಅದಕ್ಕೆ ಅವಕಾಶ ನೀಡಿಲ್ಲ’ ಎಂದು ಕಿಡಿಕಾರಿದರು.

‘ನಾನು ಈಗ ಕಣ್ಣೀರು ಹಾಕುತ್ತಾ ಕೂರುವುದಿಲ್ಲ. ಊಳಿಗಮಾನ್ಯ ಮನಃಸ್ಥಿತಿಯ ಶಕ್ತಿಗಳಿಗೆ ಸೂಕ್ತ ಸಮಯದಲ್ಲಿ ತಕ್ಕ ಪ್ರತ್ಯುತ್ತರ ನೀಡುತ್ತೇನೆ’ ಎಂದು ಎಚ್ಚರಿಸಿದರು.

12 ರಂದು ವಿಚಾರಣೆ: ಇ.ಡಿ ಕ್ರಮವನ್ನು ಪ್ರಶ್ನಿಸಿ ಹೇಮಂತ್‌ ಸೊರೇನ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜಾರ್ಖಂಡ್‌ ಹೈಕೋರ್ಟ್‌ ಫೆಬ್ರುವರಿ 12 ರಂದು ನಡೆಸಲಿದೆ ಎಂದು ಸೊರೇನ್‌ ಪರ ವಕೀಲ ರಾಜ್ಯದ ಅಡ್ವೊಕೇಟ್‌ ಜನರಲ್‌ ರಾಜೀವ್‌ ರಂಜನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT