ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೇಜ್ರಿವಾಲ್‌ಗೆ ಜೈಲಿನಲ್ಲೇ ಇನ್ಸುಲಿನ್‌: ಹನುಮನ ಆಶೀರ್ವಾದ ಎಂದ ಎಎಪಿ

Published 23 ಏಪ್ರಿಲ್ 2024, 14:47 IST
Last Updated 23 ಏಪ್ರಿಲ್ 2024, 14:47 IST
ಅಕ್ಷರ ಗಾತ್ರ

ನವದೆಹಲಿ: ಬಂಧನದಲ್ಲಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ರಕ್ತದಲ್ಲಿ ಸಕ್ಕರೆ ಅಂಶ ಇಳಿದಿದ್ದರಿಂದಾಗಿ ಇನ್ಸುಲಿನ್‌ ನೀಡಲಾಗಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. 

‘ಹನುಮಾನ್‌ ಜಯಂತಿ ದಿನದಂದೇ ಆಗಿರುವ ಈ ಬೆಳವಣಿಗೆ ಸ್ವಾಗತಾರ್ಹ. ದೇವರ ಆಶೀರ್ವಾದದಿಂದಲೇ ಇದು ನಡೆದಿದೆ’ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಪ್ರತಿಕ್ರಿಯಿಸಿದೆ.

‘ಏಮ್ಸ್‌ನ ತಜ್ಞವೈದ್ಯರ ಸಲಹೆಯಂತೆ ಸೋಮವಾರ ಸಂಜೆ ಕೇಜ್ರಿವಾಲ್ ಅವರಿಗೆ ಕಡಿಮೆ ಡೋಸ್‌ನ ಇನ್ಸುಲಿನ್‌ ನೀಡಲಾಯಿತು’ ಎಂದು ತಿಹಾರ್ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 20ರಂದು ಕೇಜ್ರಿವಾಲ್ ಅವರೊಂದಿಗೆ ಏಮ್ಸ್ ಪರಿಣತರು ವಿಡಿಯೊ ಸಮಾಲೋಚನೆ ನಡೆಸಿದ್ದರು. ಅವರ ದೇಹದ ರಕ್ತದಲ್ಲಿ ಸಕ್ಕರೆ ಅಂಶವು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾದರೆ ಇನ್ಸುಲಿನ್‌ ನೀಡಬೇಕು ಎಂದು ತಿಹಾರ್ ಜೈಲಿನ ವೈದ್ಯರಿಗೆ ಸಲಹೆ ಮಾಡಿದ್ದರು ಎಂದು ಅಧಿಕಾರಿಗಳು ತಿಳಿಸಿದರು.

ಪಕ್ಷದ ನಾಯಕನಿಗೆ ಜೈಲಿನಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಅವರನ್ನು ಬಂಧಿಸಿದ 23 ದಿನಗಳ ನಂತರ ಈಗ ಇನ್ಸುಲಿನ್‌ ನೀಡಲಾಗಿದೆ. ಹನುಮಾನ್‌ ದೇವರ ಆಶೀರ್ವಾದವೇ ಇದಕ್ಕೆ ಕಾರಣ ಎಂದು ಎಎಪಿ ರಾಜ್ಯಸಭೆ ಸದಸ್ಯ ಸಂಜಯ್ ಸಿಂಗ್ ಪ್ರತಿಕ್ರಿಯಿಸಿದರು.

ಸಚಿವೆ ಆತಿಶಿ ಈ ಕುರಿತಂತೆ ಎಕ್ಸ್ ಜಾಲತಾಣದಲ್ಲಿ, ‘ಹನುಮಾನ್‌ ಜಯಂತಿಯಂದು ಶುಭ ಸುದ್ದಿ ಬಂದಿದೆ. ತಿಹಾರ್‌ ಜೈಲಿನ ಅಧಿಕಾರಿಗಳು ಕೊನೆಗೂ ಇನ್ಸುಲಿನ್‌ ನೀಡಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ.  

‘ನ್ಯಾಯಾಂಗ ಬಂಧನ 7ರವರೆಗೆ ವಿಸ್ತರಣೆ’

ದೆಹಲಿ ಸಿ.ಎಂ ಅರವಿಂದ ಕೇಜ್ರಿವಾಲ್ ಮತ್ತು ಬಿಆರ್‌ಎಸ್‌ ನಾಯಕಿ ಕೆ.ಕವಿತಾ ನ್ಯಾಯಾಂಗ ಬಂಧನವನ್ನು ಕೋರ್ಟ್ ಮೇ 7ರವರೆಗೆ ವಿಸ್ತರಿಸಿದೆ. ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಇಬ್ಬರನ್ನು ಬಂಧಿಸಲಾಗಿದೆ.  ಸಿಬಿಐ ಇ.ಡಿ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಕೋರ್ಟ್‌ನ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ವರ್ಚುಯೆಲ್ ಕಲಾಪದಲ್ಲಿ ಈ ಕುರಿತ ಆದೇಶ ನೀಡಿದರು.

ಹನುಮ ಮಂದಿರಲ್ಲಿ ಸುನೀತಾ ಪ್ರಾರ್ಥನೆ

ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮಂಗಳವಾರ ಇಲ್ಲಿ ಹನುಮಾನ್‌ ಮಂದಿರದಲ್ಲಿ ಹನುಮಾನ್ ಜಯಂತಿ ನಿಮಿತ್ತ ಪ್ರಾರ್ಥನೆ ಸಲ್ಲಿಸಿದರು. ‘ಹನುಮಾನ್‌ ದೇವರು ನನ್ನದೂ ಸೇರಿ ಸರ್ವರ ಕಷ್ಟಗಳನ್ನೂ ನಿವಾರಿಸಲಿ. ಮುಂದಿನ ಬಾರಿ ಪತಿ ಜೊತೆಗೆ ಭೇಟಿ ನೀಡುತ್ತೇನೆ’ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸಿದರು.  ಕನ್ನಾಟ್‌ ಪ್ಲೇಸ್‌ನಲ್ಲಿರುವ ಮಂದಿರಕ್ಕೆ ಸುನೀತಾ ನಿಯಮಿತವಾಗಿ ಭೇಟಿ ನೀಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT