ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಹಾರ್‌ ಜೈಲಿನಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಮೊದಲ ದಿನದ ದಿನಚರಿ ಹೀಗಿತ್ತು...

Published 2 ಏಪ್ರಿಲ್ 2024, 7:43 IST
Last Updated 2 ಏಪ್ರಿಲ್ 2024, 7:43 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರನ್ನು ಏ. 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ತಿಹಾರ್‌ ಜೈಲಿನಲ್ಲಿ ಅವರನ್ನು ಇರಿಸಲಾಗಿದೆ. 

ನಿನ್ನೆ ಸಂಜೆ 4 ಗಂಟೆಯ ಹೊತ್ತಿಗೆ ಕೇಜ್ರಿವಾಲ್‌ ಅವರನ್ನು ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ತಿಹಾರ್‌ ಜೈಲಿಗೆ ಕಳುಹಿಸಲಾಗಿದೆ. ಕೇಜ್ರಿವಾಲ್‌ ಅವರಿಗೆ 14X8 ಅಡಿಯ ಕೋಣೆಯಲ್ಲಿ ಜಾಗ ನೀಡಲಾಗಿದೆ. ಜೈಲಿಗೆ ತೆರಳುತ್ತಿದ್ದಂತೆ ಅವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ (ಶುಗರ್‌ ಲೆವಲ್‌ ) ಇಳಿಕೆಯಾಗಿತ್ತು, ವೈದ್ಯರ ಸಲಹೆಯಂತೆ ಔಷಧ ನೀಡಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ. 

ಬಂಧನವಾಗಿರುವ ದೇಶದ ಮೊದಲ ಹಾಲಿ ಮುಖ್ಯಮಂತ್ರಿಯನ್ನು ಜೈಲು ಸಂಖ್ಯೆ ಎರಡರಲ್ಲಿ ಇರಿಸಲಾಗಿದೆ. ಅವರ ಪತ್ನಿ ಮತ್ತು ಮಕ್ಕಳು ಮಂಗಳವಾರ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಜ್ರಿವಾಲ್‌ ಅವರಿಗೆ ಮಧ್ಯಾಹ್ನ ಚಹಾ ಮತ್ತು ರಾತ್ರಿಯ ಊಟಕ್ಕೆ ಮನೆಯಲ್ಲಿ ತಯಾರಿಸಿದ ಆಹಾರವನ್ನು ನೀಡಲಾಗಿದ್ದು, ಹಾಸಿಗೆ, ಹೊದಿಕೆ ಮತ್ತು ಎರಡು ದಿಂಬುಗಳನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಿಗ್ಗೆ ಕೂಡ ಕೇಜ್ರಿವಾಲ್‌ ಅವರಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಿದ್ದ ಕಾರಣ ಜೈಲು ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಮಧ್ಯಾಹ್ನ ಮತ್ತು ರಾತ್ರಿ ಮನೆಯಲ್ಲಿ ತಯಾರಿಸಿದ ಆಹಾರವನ್ನು ಸೇವಿಸಲು ಅವರಿಗೆ ಅನುಮತಿ ನೀಡಲಾಗಿದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಮನೆ ಊಟವನ್ನೇ ಪ್ರತಿದಿನ ನೀಡಲಾಗುತ್ತದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.

ತಿಹಾರ್ ಜೈಲಿನ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು ಜೈಲು ವಾರ್ಡನ್‌ ಅವರನ್ನು ಕೇಜ್ರಿವಾಲ್‌ ಸೆಲ್‌ ಹೊರಗೆ ನಿಯೋಜಿಸಲಾಗಿದೆ. ಜೈಲಿನ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಅವರ ಮೇಲೆ ನಿಗಾ ಇಡುತ್ತಿದ್ದು,  ಸೆಲ್ ಬಳಿ ಕ್ವಿಕ್ ರಿಯಾಕ್ಷನ್ ತಂಡವನ್ನೂ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಲಿನಲ್ಲಿ ಓದಲು ಅವರು ಕೇಳಿದ್ದ ‘ರಾಮಾಯಣ, ಮಹಾಭಾರತ ಮತ್ತು How Prime Ministers Decide’ ಪುಸ್ತಕಗಳನ್ನು ಒದಗಿಸಲಾಗಿದೆ. ಅವರು ಧರಿಸಿರುವ ಧಾರ್ಮಿಕ ಸರ ಕೂಡ ಅವರ ಬಳಿಯೇ ಇದೆ.

ನಿಯಮಗಳ ಪ್ರಕಾರ, ಕೇಜ್ರಿವಾಲ್ ತಾವು ಭೇಟಿಯಾಗಲು ಬಯಸುವ ಆರು ಜನರ ಪಟ್ಟಿಯನ್ನು ನೀಡಿದ್ದಾರೆ. ಪಟ್ಟಿಯಲ್ಲಿ ಅವರ ಪತ್ನಿ ಸುನೀತಾ ಕೇಜ್ರಿವಾಲ್, ಅವರ ಮಗ ಮತ್ತು ಮಗಳು, ಅವರ ಖಾಸಗಿ ಕಾರ್ಯದರ್ಶಿ ಬಿಭವ್ ಕುಮಾರ್ ಮತ್ತು ಎಎಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್ ಪಾಠಕ್ ಸೇರಿದ್ದಾರೆ ಎಂದು ಜೈಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT