ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ದೇಣಿಗೆ ಸ್ವೀಕಾರ: ಕೇರಳ ಸಿಎಂ ಪುತ್ರಿ ವಿರುದ್ಧ ಆರೋಪ

Published 9 ಆಗಸ್ಟ್ 2023, 16:02 IST
Last Updated 9 ಆಗಸ್ಟ್ 2023, 16:02 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ವೀಣಾ ಟಿ. ಮತ್ತು ಅವರ ಒಡೆತನದ ಬೆಂಗಳೂರು ಮೂಲದ ಐ.ಟಿ ಕಂಪನಿಗೆ ಕೊಚ್ಚಿಯ ಖಾಸಗಿ ಕಂಪನಿಯಿಂದ ಅಕ್ರಮವಾಗಿ ಹಣ ಪಾವತಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆರೋಪಿಸಿದ್ದಾರೆ.

ಕೊಚ್ಚಿ ಮೂಲದ ಖಾಸಗಿ ಕಂಪನಿ ಕೊಚಿನ್‌ ಮಿನೆರಲ್ಸ್‌ ಆ್ಯಂಡ್‌ ರುಟೈಲ್ಸ್‌ ಲಿಮಿಟೆಡ್‌ನಿಂದ (ಸಿಎಂಆರ್‌ಎಲ್‌) ಬೆಂಗಳೂರಿನ ಎಕ್ಸಲಾಜಿಕ್ ಸಲ್ಯೂಷನ್ಸ್ ಐ.ಟಿ ಕಂಪನಿ ಮತ್ತು ವೀಣಾ ಅವರಿಗೆ ₹1.72 ಕೋಟಿ ಹಣ ಅಕ್ರಮವಾಗಿ ಸಂದಾಯವಾಗಿದೆ ಎಂದು ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿಯ ವರದಿಯಲ್ಲಿ ಹೇಳಿದೆ. ಇದರಿಂದ ಪಿಣರಾಯಿ ವಿಜಯನ್‌ ಅವರು ಮತ್ತೊಂದು ಮುಜುಗರ ಎದುರಿಸುವಂತಾಗಿದೆ. 

ವೀಣಾ ಟಿ. ಅವರು ಕೇರಳ ಲೋಕೋಪಯೋಗಿ ಸಚಿವ ಪಿ.ಎ. ಮೊಹಮ್ಮದ್ ರಿಯಾಸ್ ಅವರ ಪತ್ನಿಯೂ ಹೌದು.

ಎಕ್ಸಲಾಜಿಕ್ ಸಲ್ಯೂಷನ್ಸ್ ಕಂಪನಿಯು ಕೇರಳ ಸರ್ಕಾರದಲ್ಲಿ ಅಧಿಕಾರಸ್ಥ, ಪ್ರಮುಖ ರಾಜಕಾರಣಿಯೊಬ್ಬರ ಮಗಳ ಒಡೆತನದ್ದಾಗಿದೆ. ಯಾವುದೇ ಸೇವೆಗಳನ್ನು ಒದಗಿಸದಿದ್ದರೂ‌ ಸಿಎಂಆರ್‌ಎಲ್‌ನಿಂದ 2017-18 ರಿಂದ 2019-20ರ ಅವಧಿಯಲ್ಲಿ ಕಂತುಗಳಲ್ಲಿ ವೀಣಾ ಟಿ. ಅವರಿಗೆ ₹55 ಲಕ್ಷ ಮತ್ತು ಎಕ್ಸಲಾಜಿಕ್ ಸಲ್ಯೂಷನ್ಸ್‌ಗೆ 1.17 ಕೋಟಿ ಪಾವತಿಯಾಗಿದೆ ಎಂದು ಆರೋಪಿಸಿದೆ.

ಸಿಎಂಆರ್‌ಎಲ್‌ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರಿಂದ ಕಾಂಗ್ರೆಸ್ಸಿನವರು ಸೇರಿ ಹಲವು ಹಿರಿಯ ರಾಜಕಾರಣಿಗಳಿಗೆ, ಪೊಲೀಸ್ ಅಧಿಕಾರಿಗಳು ಮತ್ತು ಮಾಧ್ಯಮ ಸಂಸ್ಥೆಗಳಿಗೆ ಹಣ ಅಕ್ರಮವಾಗಿ ಪಾವತಿಯಾಗಿದ್ದು, ಇದರ ಸಾಕ್ಷ್ಯಗಳನ್ನು ಆದಾಯ ತೆರಿಗೆ ಇಲಾಖೆ ವಶಪಡಿಸಿಕೊಂಡಿರುವುದಾಗಿ ಹೇಳಲಾಗಿದೆ. 

ಸಿಎಂಆರ್‌ಎಲ್‌ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್. ಶಶಿಧರನ್ ಕರ್ತಾ ಅವರು ಈ ಹಿಂದೆ ಕೇರಳ ಕರಾವಳಿ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಆರೋಪಗಳನ್ನು ಎದುರಿಸಿದ್ದರು.

ಇದರ ಬಗ್ಗೆ ಮಲಯಾಳ ಪತ್ರಿಕೆಯೊಂದು ಬುಧವಾರ ವರದಿ ಪ್ರಕಟಿಸಿದ ನಂತರ, ಮುಖ್ಯಮಂತ್ರಿಯವರು ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್ ಮತ್ತು ಬಿಜೆಪಿ ಒತ್ತಾಯಿಸಿವೆ.

ಕೇರಳ ಕಾಂಗ್ರೆಸ್‌ ಅಧ್ಯಕ್ಷ ಕೆ. ಸುಧಾಕರನ್ ಅವರು ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ್ದಾರೆ.

ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಮತ್ತು ಕೇರಳ ಬಿಜೆಪಿ ನಾಯಕ ವಿ. ಮುರಳೀಧರನ್ ಅವರು, ಕಾಂಗ್ರೆಸ್‌ನ ಅನೇಕ ನಾಯಕರು ಈ ಸಂಸ್ಥೆಯಿಂದ ಲಂಚ ಪಡೆದಿದ್ದಾರೆ. ಹಾಗಾಗಿ, ಕಾಂಗ್ರೆಸ್ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ಅವರು ಈ ವಿಷಯವನ್ನು ಬುಧವಾರ ವಿಧಾನಸಭೆಯಲ್ಲಿ ಪ್ರಸ್ತಾಪಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT