ಕೋಯಿಕ್ಕೋಡ್(ಕೇರಳ): 10 ವರ್ಷದ ಬಾಲಕಿ ಮೇಲೆ ಎರಡು ವರ್ಷಗಳ ಕಾಲ ನಿರಂತರವಾಗಿ ಅತ್ಯಾಚಾರ ಎಸಗಿದ 57 ವರ್ಷದ ವ್ಯಕ್ತಿಗೆ ಕೇರಳದ ನ್ಯಾಯಾಲಯವೊಂದು ಒಟ್ಟು 79 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಪೋಕ್ಸೊ ಪ್ರಕರಣಗಳ ವಿಚಾರಣೆಗೆ ಸ್ಥಾಪಿಸಲಾಗಿರುವ ನಡಪುರಂ ತ್ವರಿತಗತಿ ನ್ಯಾಯಾಲಯವು ಅತ್ಯಾಚಾರಿಗೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯ(ಪೋಕ್ಸೊ) ವಿವಿಧ ಸೆಕ್ಷನ್‌ಗಳಡಿ ಅಡಿ ಒಟ್ಟು 79 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಸರ್ಕಾರಿ ವಕೀಲ ಮನೋಜ್ ಅರೋರ ಹೇಳಿದ್ದಾರೆ.
ಆದರೂ, ಶಿಕ್ಷೆಯನ್ನು ಏಕಕಾಲದಲ್ಲಿ ಅನುಭವಿಸಬೇಕಾಗಿರುವುದರಿಂದ ಮತ್ತು ವ್ಯಕ್ತಿಗೆ ನೀಡಲಾದ ಶಿಕ್ಷೆಗಳಲ್ಲಿ 20 ವರ್ಷ ಗರಿಷ್ಠ ಶಿಕ್ಷೆಯಾಗಿರುವುದರಿಂದ ಆತ 20 ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸುತ್ತಾನೆ ಎಂದು ಅರೋರ ಹೇಳಿದ್ದಾರೆ.
ನ್ಯಾಯಾಲಯವು ಅಪರಾಧಿಗೆ ₹1.12 ಲಕ್ಷ ದಂಡವನ್ನೂ ವಿಧಿಸಿದೆ ಎಂದು ವಕೀಲರು ಹೇಳಿದ್ದಾರೆ.
2022ರಲ್ಲಿ ಕವಿಲುಂಪಾರ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಅಪರಾಧ ನಡೆದಿದೆ ಎಂದು ವಕೀಲರು ತಿಳಿಸಿದ್ದಾರೆ. ಬಾಲಕಿ ತನ್ನ ಶಾಲಾ ಸ್ನೇಹಿತರ ಬಳಿ ಘಟನೆ ಬಗ್ಗೆ ವಿವರಿಸಿದ್ದಾಳೆ. ಬಳಿಕ, ಶಿಕ್ಷಕರಿಗೆ ಮಾಹಿತಿ ತಿಳಿದು ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರು.