ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡುಪ್ರಾಣಿಗಳ ತೊಂದರೆ ತಡೆಯಲು ಅಂತರರಾಜ್ಯ ಟಾಸ್ಕ್ ಫೋರ್ಸ್: ಕೇರಳ ಅರಣ್ಯ ಸಚಿವ

ಆನೆಗಳ ಚಲನವಲನಗಳ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆಯವರು ನಮ್ಮ ಜೊತೆ ಸರಿಯಾಗಿ ಸಮನ್ವಯ ಸಾಧಿಸುತ್ತಿಲ್ಲ ಎಂದು ಕೇರಳ ಅರಣ್ಯ ಸಚಿವ ಕೆ.ಶಶಿಧರನ್ ಆರೋಪಿಸಿದ್ದಾರೆ.
Published 11 ಫೆಬ್ರುವರಿ 2024, 10:16 IST
Last Updated 11 ಫೆಬ್ರುವರಿ 2024, 10:18 IST
ಅಕ್ಷರ ಗಾತ್ರ

ತ್ರಿಶೂರ್‌, ಕೇರಳ: ‘ಜನವಸತಿ ಪ್ರದೇಶಗಳತ್ತ ನುಗ್ಗಿ ತೊಂದರೆ ಉಂಟು ಮಾಡುವ ಕಾಡು ಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಡಲು ಅಂತರರಾಜ್ಯ ಟಾಸ್ಕ್ ಫೋರ್ಸ್ ರಚಿಸಲು ನಿರ್ಧರಿಸಲಾಗಿದೆ’ ಎಂದು ಕೇರಳ ಅರಣ್ಯ ಸಚಿವ ಕೆ.ಶಶಿಧರನ್ ತಿಳಿಸಿದ್ದಾರೆ.

ತ್ರಿಶೂರ್‌ನಲ್ಲಿ ನಡೆದ 500 ಅರಣ್ಯ ಅಧಿಕಾರಿಗಳ ನಿರ್ಗಮನ ಪಥಸಂಚಲನದಲ್ಲಿ ಭಾಗವಹಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಟಾಸ್ಕ್ ಫೋರ್ಸ್ ರಚಿಸಲು ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಭಾನುವಾರವೇ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

‘ವಿಶೇಷವಾಗಿ ವಯನಾಡು ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಸದ್ಯದ ವ್ಯವಸ್ಥೆಯಲ್ಲಿ ಕಾಡು ಪ್ರಾಣಿಗಳ ಚಲನವಲನದ ಮೇಲೆ ನಿಗಾ ಇಡಲು ಕೇರಳ, ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಸಮನ್ವಯ ಇಲ್ಲ. ಹೀಗಾಗಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯದೊಳಗೆ ಪ್ರವೇಶಿಸುವ ಕಾಡುಪ್ರಾಣಿಗಳ ಉಪಟಳಗಳನ್ನು ನಿಯಂತ್ರಿಸಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಅದರಲ್ಲೂ ಆನೆಗಳ ಚಲನವಲನಗಳ ಬಗ್ಗೆ ಕರ್ನಾಟಕ ಅರಣ್ಯ ಇಲಾಖೆಯವರು ನಮ್ಮ ಜೊತೆ ಸರಿಯಾಗಿ ಸಮನ್ವಯ ಸಾಧಿಸುತ್ತಿಲ್ಲ’ ಎಂದು ಆರೋಪಿಸಿದ ಅವರು, ಇದನ್ನು ತಡೆಯುವ ನಿಟ್ಟಿನಲ್ಲಿ ಹೊಸ ಅಂತರರಾಜ್ಯ ಟಾಸ್ಕ್ ಫೋರ್ಸ್ ಕೆಲಸ ಮಾಡುತ್ತದೆ ಎಂದು ತಿಳಿಸಿದರು.

ಶನಿವಾರ ವಯನಾಡು ಜಿಲ್ಲೆಯ ಪಾಯಂಪಳ್ಳಿ ಬಳಿಯ ಮಾನಂತವಾಡಿಯಲ್ಲಿ ಆನೆ ದಾಳಿಗೆ 42 ವರ್ಷದ ಆಜಿ ಎನ್ನುವ ವ್ಯಕ್ತಿ ಮೃತಪಟ್ಟಿದ್ದರು. ಆ ಕಾಡಾನೆ ಕರ್ನಾಟಕ ಅರಣ್ಯದಿಂದ ಕೇರಳ ಅರಣ್ಯ ಪ್ರವೇಶಿಸಿತ್ತು ಎಂದು ಹೇಳಿದರು.

ಮೃತ ಆಜಿ ಕುಟುಂಬಕ್ಕೆ ₹10 ಲಕ್ಷ ಪರಿಹಾರ ನೀಡಲಾಗುವುದು ಹಾಗೂ ಆತನ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುವುದು ಎಂದು ಶಶಿಧರನ್ ತಿಳಿಸಿದರು.

ಇನ್ನೊಂದೆಡೆ, ‘ವಯನಾಡು ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ನಿಯಂತ್ರಿಸಲು ಕೇರಳ ಅರಣ್ಯ ಇಲಾಖೆ ವಿಫಲವಾಗಿದೆ. ಇದರಿಂದ ಇಲ್ಲಿನ ಜನ ಭಯ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ’ ಎಂದು ಕೇರಳ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ವಿ. ಮುರಳಿಧರನ್ ಆರೋಪಿಸಿದ್ದಾರೆ.

ಆಜಿ ಸಾವಿನ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳೂ ಸಹ ಸಾರ್ವಜನಿಕರಿಗೆ ಆನೆಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿರಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT