ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್‌ಗೆ ಚಾಲಕನಿಂದ ಲೈಂಗಿಕ ಸನ್ನೆ; ಇಲಾಖೆ MD ವರದಿ ಕೇಳಿದ ಸಾರಿಗೆ ಸಚಿವ

Published 29 ಏಪ್ರಿಲ್ 2024, 14:06 IST
Last Updated 29 ಏಪ್ರಿಲ್ 2024, 14:06 IST
ಅಕ್ಷರ ಗಾತ್ರ

ತಿರುವನಂತರಪುರ: ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಚಾಲಕನೊಬ್ಬ ತಿರುವನಂತಪುರ ಮೇಯರ್ ಆರ್ಯಾ ರಾಜೇಂದ್ರನ್ ಹಾಗೂ ಅವರ ಕುಟುಂಬದೊಂದಿಗೆ ಅಸಭ್ಯವಾಗಿ ವರ್ತಿಸಿದ್ದರ ಕುರಿತು ಸಲ್ಲಿಕೆಯಾದ ದೂರಿಗೆ ಸಂಬಂಧಿಸಿದಂತೆ, ವರದಿ ಸಲ್ಲಿಸುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಕೇರಳ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಸೂಚಿಸಿದ್ದಾರೆ.

ರಸ್ತೆ ನಡುವೆ ಬಸ್‌ ತಡೆದಿದ್ದರ ವಿರುದ್ಧ ತಾನು ನೀಡಿದ ದೂರನ್ನು ಸ್ವೀಕರಿಸಲು ಹಾಗೂ ಅದರ ಆಧಾರದ ಮೇಲೆ ಪ್ರಕರಣ ದಾಖಲಿಸಲು ಪೊಲೀಸರು ನಿರಾಕರಿಸಿದ್ದಾರೆ ಎಂದು ಚಾಲಕ ಆರೋಪಿಸಿದ್ದಾರೆ. ಈ ನಡುವೆ ಕರ್ತವ್ಯಕ್ಕೆ ಹಾಜರಾಗದಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ಚಾಲಕನಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ತಿರುವಂತಪುರದ ಪಲಯಂ ಜಂಕ್ಷನ್ ಬಳಿ ರಸ್ತೆ ತಡೆದ ಪ್ರಕರಣಕ್ಕೆ ಸಬಂಧಿಸಿದಂತೆ ಮೇಯರ್ ಮತ್ತು ಅವರ ಕುಟುಂಬದೊಂದಿಗೆ ಚಾಲಕ ವಾಗ್ವಾದ ನಡೆಸಿದ್ದರು. ಲೈಂಗಿಕವಾಗಿ ಸೂಚಿಸುವ ಸನ್ನೆಗಳನ್ನು ಚಾಲಕ ತನಗೆ ತೋರಿಸಿದ್ದಾನೆ ಎಂದು ಮೇಯರ್ ಆರ್ಯಾ ಆರೋಪಿಸಿದ್ದಾರೆ. ಚಾಲಕ ವೇಗವಾಗಿ ಮತ್ತು ಅಜಾಗರೂಕತೆಯಿಂದ ಬಸ್ ಚಾಲನೆ ಮಾಡುತ್ತಿದ್ದ. ತಮ್ಮ ಕಾರಿಗೆ ಹಿಂಬದಿಯಿಂದ ಗುದ್ದುವ ಹಂತದಲ್ಲಿದ್ದಾಗ ಅದನ್ನು ತಡೆದು ಪ್ರಶ್ನಿಸಿದೆವು ಎಂದು ದೂರಿನಲ್ಲಿ ಹೇಳಿದ್ದಾರೆ.

‘ಕಾರಿನಲ್ಲಿರುವಾಗ ಹಿಂತಿರುಗಿ ವೇಗವಾಗಿ ಬರುತ್ತಿದ್ದ ಬಸಿನತ್ತ ನಾನು ಹಾಗೂ ನನ್ನ ನಾದಿನಿ ನೋಡಿದೆವು. ಇದನ್ನು ಗಮನಿಸಿದ ಚಾಲಕ, ನಮ್ಮಿಬ್ಬರಿಗೆ ಲೈಂಗಿಕವಾಗಿ ಸೂಚಿಸುವ ಸನ್ನೆಯನ್ನು ಮಾಡಿದ. ನಂತರ ಕಾರನ್ನು ಅದೇ ವೇಗದಲ್ಲಿ ಹಿಂದಿಕ್ಕಿದ್ದಾನೆ’ ಎಂದಿದ್ದಾರೆ.

‘ಮೇಯರ್ ಮತ್ತು ಅವರ ಕುಟುಂಬದವರೇ ಸಮಸ್ಯೆ ಸೃಷ್ಟಿಸಿದ್ದಾರೆ. ಬಸ್ ಸಂಚರಿಸುತ್ತಿದ್ದ ರಸ್ತೆಗೆ ಕಾರನ್ನು ಅಡ್ಡಲಾಗಿ ನಿಲ್ಲಿಸಿದರು. ಹೀಗಾಗಿ ಈ ಪ್ರಕರಣದಲ್ಲಿ ಕಾನೂನು ರೀತಿಯಲ್ಲೇ ಮುಂದುವರಿಯಲಾಗುವುದು’ ಎಂದು ಮೇಯರ್ ಆರ್ಯಾಾ ಹೇಳಿದ್ದಾರೆ.

ಮೇಯರ್ ಬೆಂಬಲಕ್ಕೆ ನಿಂತಿರುವ ಆಡಳಿತಾರೂಢ ಸಿಪಿಐಎಂ, ಮಹಿಳೆಯೊಬ್ಬರನ್ನು ಚಾಲಕ ಅವಮಾನಿಸಿದ್ದಾರೆ ಎಂದು ಆರೋಪಿಸಿದೆ.

‘ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಮೇಯರ್ ಪ್ರಶ್ನಿಸಿದ್ದಾರೆ. ಅದರಲ್ಲಿ ವಿಶೇಷವೇನೂ ಇಲ್ಲ. ಪೊಲೀಸರು ಮಧ್ಯಪ್ರವೇಶಿಸಿ, ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆಯೂ ಈ ಚಾಲಕ ಇಂಥದ್ದೇ ಕೃತ್ಯದಲ್ಲಿ ಭಾಗಿಯಾಗಿದ್ದ ಕುರಿತು ಮಾಹಿತಿ ಇದೆ. ಇದು ಮಹಿಳೆಯೊಬ್ಬರನ್ನು ಅವಮಾನಿಸುವ ಆತನ ಉದ್ದೇಶ ತೋರಿಸುತ್ತದೆ’ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಹೇಳಿದ್ದಾರೆ.

ಪ್ರಕರಣ ಕುರಿತಂತೆ ಮೇಯರ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಮೇಯರ್ ದೂರಿನ ಆಧಾರದ ಮೇಲೆ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಠಾಣಾ ಜಾಮೀನು ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ.

ಆರ್ಯಾ ರಾಜೇಂದ್ರನ್ ಅವರು ಮೇಯರ್ ಎಂದು ಹಾಗೂ ಸಚಿನ್ ದೇವ್ ಅವರು ಶಾಸಕರೆಂದು ಗೊತ್ತಿರಲಿಲ್ಲ ಎಂದು ಚಾಲಕ ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT