ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೂಹ ಸನ್ನಿ ’ಕಿಕಿ ಚಾಲೆಂಜ್‌’; ಹಾಡಿಗೆ ಕುಣಿ, ಕಾರಿನಿಂದ ಜಿಗಿ; ಇದೇ ಸವಾಲ್‌!

Last Updated 31 ಜುಲೈ 2018, 15:38 IST
ಅಕ್ಷರ ಗಾತ್ರ

ಬೆಂಗಳೂರು:ಜಗತ್ತಿನಾದ್ಯಂತ ಬಹುತೇಕ ಎಲ್ಲ ವಲಯಗಳ ಪೊಲೀಸರು’ಕಿಕಿ ಚಾಲೆಂಜ್‌’ ಸ್ವೀಕರಿಸದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳ ಮೂಲಕ ವೈರಲ್‌ ಆಗುತ್ತಿರುವ ಈ ಸವಾಲಿನ ಡ್ಯಾನ್ಸ್‌ ಮಾಡಲು ಹೋಗಿ ಗಾಯಗೊಂಡವರ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಸೆಲೆಬ್ರಿಟಿಗಳೇ ಈ ಸವಾಲು ಸ್ವೀಕರಿಸಿ ವಿಡಿಯೊ ಪ್ರಕಟಿಸುತ್ತಿರುವುದರಿಂದ ಕಿಕಿ ಚಾಲೆಂಜ್‌(#kikichallenge) ಸಮೂಹ ಸನ್ನಿಯಾಗಿ ಪರಿಣಮಿಸಿದೆ.

’ಇನ್‌ ಮೈ ಫೀಲಿಂಗ್ಸ್‌ ಚಾಲೆಂಜ್‌’(#InMyFeeling) ಎಂದೂ ಕರೆಯಲ್ಪಡುವ ಕಿಕಿ ಚಾಲೆಂಜ್‌ನಲ್ಲಿ ಯಾವುದೇ ವ್ಯಕ್ತಿ ಚಲಿಸುತ್ತಿರುವ ಕಾರಿನಿಂದ ಹೊರಗೆ ಜಿಗಿದು, ಕಾರಿನ ವೇಗಕ್ಕೆ ಸಮನಾಗಿ ಹಾಡಿಗೆ ನೃತ್ಯ ಮಾಡುತ್ತಾ ಸಾಗುವುದು. ಡ್ರೇಕ್ಸ್‌ನ ಜನಪ್ರಿಯ ’ಇನ್‌ ಮೈ ಫೀಲಿಂಗ್ಸ್‌’ ಹಾಡಿಗೆ ಇಲ್ಲಿ ನೃತ್ಯ ಮಾಡುತ್ತ ಹಾಗೇ ಕಾರಿನೊಳಗೆ ಪ್ರವೇಶಿಸಲಾಗುತ್ತದೆ. ಈ ನೃತ್ಯವನ್ನು ರೆಕಾರ್ಡ್‌ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿಕೊಳ್ಳಲಾಗುತ್ತಿದೆ.

(ಕಿಕಿ ಚಾಲೆಂಜ್‌ ವಿರುದ್ಧ ಸುದ್ದಿ ಹರಡುತ್ತಿದ್ದಂತೆನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದ ವಿಡಿಯೊ ಅನ್ನು ಡಿಲೀಟ್‌ ಮಾಡಿದ್ದಾರೆ)

ಕಾಮಿಡಿಯನ್‌ ಶಿಗ್ಗಿ ಇನ್‌ಸ್ಟಾಗ್ರಾಂನಲ್ಲಿ ಡ್ಯಾನ್ಸ್‌ ಮಾಡುವ ವಿಡಿಯೊ ಪ್ರಕಟಿಸಿದ ಬಳಿಕ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಇದೊಂದು ಚಾಲೆಂಜ್‌ ರೂಪ(#DOTheShiggy) ಪಡೆದುಕೊಂಡು ವೈರಲ್‌ ಆಗಿದೆ. ಈ ಸವಾಲು ಸ್ವೀಕರಿಸಿ ಅನೇಕರು ಅಪಾಯಕ್ಕೂ ಗುರಿಯಾಗಿದ್ದಾರೆ. ಕ್ಯಾಮೆರಾಗೆ ಮುಖಮಾಡಿ ಡ್ಯಾನ್ಸ್‌ ಮಾಡುತ್ತ ಹೋಗಿ ರಸ್ತೆ ಬದಿಯ ಕಂಬಕ್ಕೆ ಬಡಿದುಕೊಂಡು ಬಿದ್ದವರು, ಗುಂಡಿಗಳಲ್ಲಿ ಕಾಲು ಉಳುಕಿಸಿಕೊಂಡವರು ಹಾಗೂ ಚಲಿಸುವ ಕಾರಿನಿಂದ ಇಳಿಯುವಾಗಲೇ ಚಕ್ರದ ಸಮೀಪಕ್ಕೆ ಬಿದ್ದಿರುವ ಉದಾಹರಣೆಗಳು ಅನೇಕ. ಇದರಿಂದ ಸಾಕಷ್ಟು ಮಂದಿ ಗಂಭೀರವಾಗಿ ಗಾಯಗೊಂಡಿರುವ ಪ್ರಕರಣಗಳೂ ವರದಿಯಾಗಿವೆ.

ಈಗಾಲೇ ದೆಹಲಿ, ಉತ್ತರ ಪ್ರದೇಶ, ಜೈಪುರ ಹಾಗೂ ಮುಂಬೈ ಪೊಲೀಸರು ರಸ್ತೆಯಲ್ಲಿ ಡ್ಯಾನ್ಸ್‌ ಮಾಡುತ್ತ ಅಪಾಯಕ್ಕೆ ಒಡ್ಡಿಕೊಳ್ಳುವುದನ್ನು ತಡೆಯಲು ಸಾಮಾಜಿಕ ಮಾಧ್ಯಮಗಳ ಮೂಲಕವೇ ಎಚ್ಚರಿಕೆ ಸಂದೇಶಗಳನ್ನು ನೀಡುತ್ತಿದ್ದಾರೆ. ಬೆಂಗಳೂರು ಪೊಲೀಸರೂ ಸಹ ಈ ಚಾಲೆಂಜ್‌ಗೆ ವಿರೋಧ ವ್ಯಕ್ತಪಡಿಸಿ ಟ್ವೀಟಿಸಿದ್ದಾರೆ.

ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿದ್ದ ನಿವೇದಿತಾ ಗೌಡ ಸಹ ಈ ಚಾಲೆಂಜ್‌ ಸ್ವೀಕರಿಸಿ ವಿಡಿಯೊ ಹಂಚಿಕೊಂಡಿದ್ದಾರೆ. ಬಾಲಿವುಡ್‌ನ ಅದಾ ಶರ್ಮಾ ಹಾಗೂ ನೋರಾ ಫತೇಹಿ ಸಹ ಇನ್‌ ಮೈ ಫೀಲಿಂಗ್‌ ಹಾಡಿಗೆ ನೃತ್ಯ ಮಾಡಿ ಪ್ರಕಟಿಸಿಕೊಂಡಿರುವ ವಿಡಿಯೊಗಳು ವೈರಲ್‌ ಆಗಿವೆ. ಜಗತ್ತಿನಾದ್ಯಂತ ಅನೇಕ ಸೆಲೆಬ್ರಿಟಿಗಳು ಈ ಸವಾಲಿನಲ್ಲಿ ಭಾಗಿಯಾಗುವುದರಿಂದ ಹಿಂದೆ ಬಿದ್ದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT