ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಜೊತೆ ಕಾಂಗ್ರೆಸ್‌ ನಾಯಕರು: ಬಿಜೆಪಿ ಆಕ್ಷೇಪ

Last Updated 4 ಏಪ್ರಿಲ್ 2023, 6:43 IST
ಅಕ್ಷರ ಗಾತ್ರ

ಸೂರತ್‌ನ ಸೆಷನ್ಸ್‌ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ವೇಳೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್‌ ಗೆಹಲೋತ್‌, ಭೂಪೇಷ್‌ ಬಘೇಲ್‌ ಹಾಗೂ ಸುಖ್ವಿಂದರ್‌ ಸಿಂಗ್‌ ಸುಖು ಸೇರಿದಂತೆ ಪಕ್ಷದ ಹಲವು ನಾಯಕರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರೊಂದಿಗೆ ಜೊತೆಗೂಡಿ ತೆರಳಿದ್ದು ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.

‘ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನ’
‘ನನ್ನ ವಾದವಿಷ್ಟೆ. ಕಾಂಗ್ರೆಸ್‌ ಪಕ್ಷವು ಯಾಕಾಗಿ ನ್ಯಾಯಾಂಗದ ಮೇಲೆ ಇಷ್ಟೊಂದು ಒತ್ತಡ ಹೇರಲು ಪ್ರಯತ್ನಿಸುತ್ತಿದೆ? ನ್ಯಾಯಾಂಗಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲು ಬೇರೆ ರೀತಿಯ ಹಲವು ಮಾರ್ಗಗಳಿವೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಹೇಳಿದರು.

‘ಪಕ್ಷವೊಂದು ಈ ರೀತಿಯಲ್ಲಿ ನ್ಯಾಯಾಲಯವನ್ನು ‘ಮುತ್ತಿಗೆ’ ಹಾಕಿದ ಮತ್ತೊಂದು ಪ್ರಕರಣ ಇತಿಹಾಸದಲ್ಲಿ ಸಿಗುವುದಿಲ್ಲ. ಕೇವಲ ರಾಹುಲ್‌ಗಾಗಿ ಕಾಂಗ್ರೆಸ್‌ ಈ ‘ನಾಟಕ’ ಆಡುತ್ತಿದೆ. ವ್ಯಕ್ತಿಯೊಬ್ಬರು ದೇಶ ಹಾಗೂ ದೇಶದ ಕಾನೂನಿಗಿಂತ ಮೇಲೆ ಎಂದು ಕಾಂಗ್ರೆಸ್‌ ಭಾವಿಸಿದೆ’ ಎಂದರು.

***

ಅಸಂಬದ್ಧ ಆರೋಪ: ತರೂರ್‌
ಸಚಿವ ಕಿರಣ್‌ ರಿಜಿಜು ಅವರ ಆರೋಪವನ್ನು ‘ಅಸಂಬದ್ಧ’ ಎನ್ನುವ ಮೂಲಕ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಅವರು ರಿಜಿಜು ಅವರಿಗೆ ತಿರುಗೇಟು ನೀಡಿದ್ದಾರೆ. ‘ನ್ಯಾಯಾಲಯಕ್ಕೆ ಹೋಗುವುದು ಎನ್ನುವುದು ಒತ್ತಡ ಹೇರುವ ‍ಪ್ರಯತ್ನವಲ್ಲ’ ಎಂದಿದ್ದಾರೆ.

‘ನ್ಯಾಯಾಂಗದ ಮೇಲೆ ಒತ್ತಡ ಇದೆ ಎಂದಾದರೆ ಆ ಒತ್ತಡ ಎಲ್ಲಿಂದ ಬರುತ್ತಿದೆ ಎಂಬುದನ್ನು ನಾವೆಲ್ಲರೂ ಊಹಿಸಬಹುದು. ರಾಹುಲ್‌ ಅವರು ಪ್ರಮುಖ ವಿರೋಧ ಪಕ್ಷವೊಂದರ ನಾಯಕರಾಗಿದ್ದಾರೆ. ಆದ್ದರಿಂದ ಅವರೊಂದಿಗೆ ನ್ಯಾಯಾಲಯಕ್ಕೆ ಹೋಗುವುದು ಸರಿಯಾಗಿಯೇ ಇದೆ. ಕೊನೆಗೂ, ನ್ಯಾಯಾಲಯದಲ್ಲಿ ಹೇಗೆ ವಾದ ಮಾಡುತ್ತೇವೆ ಎನ್ನುವುದು ಮುಖ್ಯವಾಗುತ್ತದೆ ಹೊರತು ನ್ಯಾಯಾಲಯಕ್ಕೆ ಯಾರೆಲ್ಲಾ ಹೋದರು ಎನ್ನುವುದಲ್ಲ’ ಎಂದು ಹೇಳಿದ್ದಾರೆ.

***

ಬೂಟಾಟಿಕೆಗೆ ಮಿತಿ ಇಲ್ಲ: ನ್ಯಾಯಾಂಗಕ್ಕೆ, ನ್ಯಾಯಾಧೀಶರಿಗೆ ದಿನನಿತ್ಯ ಬೆದರಿಕೆ ಒಡ್ಡುವ, ಇತಿಹಾಸವನ್ನು ತಿರುಚುವ ವ್ಯಕ್ತಿಯೊಬ್ಬರು ಮಾತನಾಡುತ್ತಿದ್ದಾರೆ. ಮೋದಿ ಆಡಳಿತದಲ್ಲಿ ಬೂಟಾಟಿಕೆಗೂ ಮಿತಿ ಇಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಹೇಳಿದ್ದಾರೆ.

***

ಶಕ್ತಿ ಪ್ರದರ್ಶನಕ್ಕೆ ಅಲ್ಲ: ಖರ್ಗೆ
‘ರಾಹುಲ್‌ ಗಾಂಧಿ ಅವರೊಂದಿಗೆ ಸೂರತ್‌ ಸೆಷನ್ಸ್‌ ನ್ಯಾಯಾಲಯಕ್ಕೆ ಹೋಗಬೇಕು ಎನ್ನುವುದು ಪಕ್ಷದ ನಾಯಕರ ವೈಯಕ್ತಿಕ ನಿರ್ಧಾರವಾಗಿತ್ತು. ಜೊತೆಗೆ, ರಾಹುಲ್‌ ಅವರೊಂದಿಗೆ ಹೋಗಿರುವುದು ನಮ್ಮ ಶಕ್ತಿ ಪ್ರದರ್ಶನಕ್ಕಾಗಿ ಅಲ್ಲ. ನಮ್ಮ ಬೆಂಬಲ ಸೂಚಿಸುವುದಕ್ಕಾಗಿ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

‘ಒಂದು ಸಣ್ಣ ಪ್ರಕರಣವಾದರೂ ಸರಿ, ಕುಟುಂಬದವರೆಲ್ಲಾ ಜೊತೆಗೂಡಿ ನ್ಯಾಯಾಲಯಕ್ಕೆ ಹೋಗುತ್ತಾರೆ. ಇದು ಇಡೀ ಪಕ್ಷದ ವಿಚಾರವಾಗಿದೆ. ರಾಹುಲ್‌ ಅವರು ದೇಶಕ್ಕಾಗಿ ಹೋರಾಡುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT