ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್‌ ಫೆಸ್ಟ್‌ ವೇಳೆ ಕಾಲ್ತುಳಿತ: ತನಿಖೆಗೆ ತಜ್ಞರ ಸಮಿತಿ ರಚಿಸಿದ ಕೇರಳ ಸರ್ಕಾರ

Published 26 ನವೆಂಬರ್ 2023, 9:34 IST
Last Updated 26 ನವೆಂಬರ್ 2023, 9:34 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಕೊಚ್ಚಿಯಲ್ಲಿ ಇರುವ ಮಾಹಿತಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಶನಿವಾರ ರಾತ್ರಿ ಹಮ್ಮಿಕೊಂಡಿದ್ದ ‘ಟೆಕ್‌ ಫೆಸ್ಟ್‌’ನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ತನಿಖೆ ನಡೆಸಲು ಕೇರಳ ಸರ್ಕಾರ ತಜ್ಞರ ಸಮಿತಿಯನ್ನು ರಚಿಸಿದೆ.

ಮೂವರು ಸದಸ್ಯರ ಆಯೋಗದಲ್ಲಿ ತಾಂತ್ರಿಕ ತಜ್ಞರನ್ನು ಸೇರಿಸಿಕೊಳ್ಳಲಾಗುವುದು ಎಂದು ಕೇರಳದ ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ತಿಳಿಸಿದ್ದಾರೆ.

ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಟೆಕ್‌ ಫೆಸ್ಟ್‌’ ಅಂಗವಾಗಿ 1000–1500 ಆಸನ ಸಾಮರ್ಥ್ಯದ ಸಭಾಂಗಣದಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭಾಂಗಣ ಭಾಗಶಃ ತುಂಬಿತ್ತು. ಆದರೆ ಈ ವೇಳೆ ಹಠಾತ್ತನೆ ಮಳೆ ಸುರಿದಿದ್ದರಿಂದ ನೆರೆದಿದ್ದ ವಿದ್ಯಾರ್ಥಿಗಳು ಆಶ್ರಯ ಅರಸಿ ಸಭಾಂಗಣದತ್ತ ಓಡಲಾರಂಭಿಸಿದರು. ಇದರಿಂದಾಗಿ ದುರಂತ ಸಂಭವಿಸಿತು’ ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಎಡಿಜಿಪಿ) ಎಂ.ಆರ್‌ ಅಜಿತ್‌ ಕುಮಾರ್‌ ತಿಳಿಸಿದರು.

‘ಗಾಯಗೊಂಡಿರುವ ವಿದ್ಯಾರ್ಥಿ‌ಗಳನ್ನು ಕಲಮಶ್ಶೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಸೇರಿದಂತೆ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ’ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.

‘ಟಿಕೆಟ್‌ ಪಡೆದವರಿಗೆ ಮಾತ್ರವೇ ಸಭಾಂಗಣದೊಳಗೆ ಪ್ರವೇಶ ಇತ್ತು. ಆದರೆ ಸಭಾಂಗಣದ ಹೊರಗೆ ಸ್ಥಳೀಯರೂ ಇದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಈ ಮಧ್ಯೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ತುರ್ತು ಸಭೆ ಕರೆದು ದುರಂತದ ಬಗ್ಗೆ ಮಾಹಿತಿ ಪಡೆದು, ತನಿಖೆಗೆ ಆದೇಶಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಸೇರಿ ಹಲವರು ದುರಂತಕ್ಕೆ ಕಂಬನಿ ಮಿಡಿದು, ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT