ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲು ಪ್ರಸಾದ್‌ ಮಾರ್ಗದರ್ಶನದಲ್ಲಿ ‘ಚಂಪಾರಣ್‌ ಮಟನ್‌‘ ತಯಾರಿಸಿದ ರಾಹುಲ್ ಗಾಂಧಿ

Published 3 ಸೆಪ್ಟೆಂಬರ್ 2023, 5:29 IST
Last Updated 3 ಸೆಪ್ಟೆಂಬರ್ 2023, 5:29 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ಜೀವನದಲ್ಲಿ ಸದಾ ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಆರ್‌ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಮಾರ್ಗದರ್ಶನದಲ್ಲಿ ‘ಚಂಪಾರಣ್‌ ಮಟನ್‘ ಅಡುಗೆ ಮಾಡಿ ಉಣಬಡಿಸಿದ್ದಾರೆ.

ಎರಡು ದಿನಗಳ ಹಿಂದೆ ಮುಂಬೈನಲ್ಲಿ ನಡೆದ ಇಂಡಿಯಾ ಮೈತ್ರಿಕೂಟ ಸಭೆ ನಡೆದ ಒಂದು ದಿನದ ಬಳಿಕ (ಶುಕ್ರವಾರ) ಲಾಲು ಪ್ರಸಾದ್ ಯಾದವ್ ಅವರು ತಂಗಿದ್ದ ಪುತ್ರಿ ಮಿಸಾ ಭಾರತಿ ನಿವಾಸಕ್ಕೆ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. 

ಈ ವೇಳೆ ರಾಜಕೀಯ ಚರ್ಚೆಯ ಜೊತೆಗೆ ಲಾಲು ಪ್ರಸಾದ್‌ ಮಾರ್ಗದರ್ಶನದಲ್ಲಿ ‘ಚಂಪಾರಣ್‌ ಮಟನ್‌‘ ತಯಾರಿಸಿ ಉಣಬಡಿಸಿದ್ದಾರೆ. ಈ ಸಂದರ್ಭದಲ್ಲಿ ಲಾಲು ಪ್ರಸಾದ್‌ ಪುತ್ರ, ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಹಾಗೂ ಪುತ್ರಿ ಮಿಸಾ ಭಾರತಿ ಇದ್ದರು. 

ಅಡುಗೆ ವಿಚಾರದಲ್ಲಿ ನಾನು ಪರಿಣಿತನಲ್ಲ ಆದರೆ ಯುರೋಪ್‌ನಲ್ಲಿ ಒಬ್ಬನೇ ಇರುವಾಗ ಅಡುಗೆ ಮಾಡುವುದನ್ನು ಕಲಿತುಕೊಂಡಿದ್ದೇನೆ. ಆದರೆ ನೀವು (ಲಾಲು ಪ್ರಸಾದ್‌) ಮಾತ್ರ ಪಾಕಶಾಸ್ತ್ರದಲ್ಲಿ ಪರಿಣಿತರು ಎಂದು ರಾಹುಲ್‌ ಹೇಳುತ್ತಾರೆ.

ನಾನು 6, 7ನೇ ತರಗತಿಯಲ್ಲಿದ್ದಾಗ ನನ್ನ ಸಹೋದರನನ್ನು ಭೇಟಿಯಾಗಲು ಪಟ್ನಾಕ್ಕೆ ಹೋಗುತ್ತಿದ್ದೆ. ಆ ವೇಳೆ ಅವರಿಗಾಗಿ ಅಡುಗೆ ಮಾಡುವುದು, ಉರುವಲು ಸಂಗ್ರಹಿಸುವುದು, ಪಾತ್ರೆ ತೊಳೆಯುವುದು ಮತ್ತು ಮಸಾಲೆ ಪುಡಿ ಮಾಡುವುದು ಕಲಿತುಕೊಂಡೆ ಎಂದು ಲಾಲು ಪ್ರಸಾದ್‌ ಹೇಳುತ್ತಾರೆ.

ಲಾಲು ಪ್ರಸಾದ್‌ ಅವರು ಚಂಪಾರಣ್‌ ಮಟನ್‌ ತಯಾರಿಕೆಯನ್ನು ರಾಹುಲ್‌ ಗಾಂಧಿ ಅವರಿಗೆ ಹಂತ ಹಂತವಾಗಿ ವಿವರಿಸುತ್ತಾ ಹೋಗುತ್ತಾರೆ. ನಂತರ ನಡೆದ ಡಿನ್ನರ್‌ ಪಾರ್ಟಿಯಲ್ಲಿ ಎಲ್ಲರೂ ಬಾಡೂಟ ಸವಿಯುತ್ತಾರೆ. 

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ವಿಡಿಯೊವನ್ನು ರಾಹುಲ್‌ ಗಾಂಧಿ ಹಂಚಿಕೊಂಡಿದ್ದಾರೆ. ಪೂರ್ಣ ವಿಡಿಯೊ ನೋಡಲು ಯುಟ್ಯೂಬ್‌ ಲಿಂಕ್‌ ಅನ್ನು ಸಹ ಶೇರ್‌ ಮಾಡಿದ್ದಾರೆ. 

7 ನಿಮಿಷದ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದಕ್ಕೆ ಸಾಕಷ್ಟು ಕಮೆಂಟ್‌ಗಳು ಹರಿದು ಬಂದಿವೆ. ಬಹುತೇಕ ಕನ್ನಡಿಗರು ಭಾನುವಾರದ ಬಾಡೂಟಕ್ಕೆ ರಾಹುಲ್ ರೆಸಿಪಿ ಎಂದು ಬರೆಯುವುದರ ಜೊತೆಗೆ ನಗುವಿನ ಇಮೋಜಿ ಹಾಕಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT