ತಿರುವನಂತಪುರ: ವಯನಾಡ್ ಭೂಕುಸಿತ ಸಂತ್ರಸ್ತರಿಗೆ ನೆರವಾಗಲು ಆರಂಭಿಸಿರುವ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಒಂದು ತಿಂಗಳ ವೇತನ ನೀಡುವುದಾಗಿ ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಆದರೆ ಅವರ ಈ ನಿರ್ಧಾರವನ್ನು ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ ಟೀಕಿಸಿದ್ದಾರೆ.
ಸಿ.ಎಂ ಪರಿಹಾರ ನಿಧಿಗೆ ಒಂದು ತಿಂಗಳ ವೇತನವನ್ನು ನೀಡುವ ನಿರ್ಧಾರವನ್ನು ಚೆನ್ನಿತ್ತಲ ಅವರು ಪಕ್ಷದ ಅಧಿಕೃತ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಶುಕ್ರವಾರ ಸಂಜೆ ಪ್ರಕಟಿಸಿದ್ದರು.
ಪಕ್ಷದ ಹಿರಿಯ ನಾಯಕ ತೆಗೆದುಕೊಂಡ ನಿರ್ಧಾರದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಸುಧಾಕರನ್, ಸಿಪಿಎಂ ನೇತೃತ್ವದ ಸರ್ಕಾರ ಆರಂಭಿಸಿರುವ ಪರಿಹಾರ ನಿಧಿಗೆ ದೇಣಿಗೆ ನೀಡುವ ಅಗತ್ಯವಿರಲಿಲ್ಲ ಎಂದಿದ್ದಾರೆ.
‘ಸರ್ಕಾರದ ಪರಿಹಾರ ನಿಧಿಗೆ ದೇಣಿಗೆ ನೀಡುವಂತೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಯಾವುದೇ ಸೂಚನೆ ಕೊಟ್ಟಿಲ್ಲ. ಕಾಂಗ್ರೆಸ್ ಪಕ್ಷದ ವತಿಯಿಂದ ದೇಣಿಗೆ ಸಂಗ್ರಹ ಅಭಿಯಾನ ನಡೆಯುತ್ತಿದ್ದು, ತಮ್ಮ ವೇತನವನ್ನು ಅಲ್ಲಿಗೆ ನೀಡಬಹುದಿತ್ತು’ ಎಂದು ಶನಿವಾರ ಹೇಳಿದ್ದಾರೆ.