ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ, ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ; ಸೂತ್ರ ತಯಾರಿಸುತ್ತಿರುವ ಕಾನೂನು ಆಯೋಗ

Published 29 ಸೆಪ್ಟೆಂಬರ್ 2023, 16:23 IST
Last Updated 29 ಸೆಪ್ಟೆಂಬರ್ 2023, 16:23 IST
ಅಕ್ಷರ ಗಾತ್ರ

ನವದೆಹಲಿ: 2029ರ ನಂತರದಲ್ಲಿ ಎಲ್ಲ ವಿಧಾನಸಭಾ ಚುನಾವಣೆಗಳನ್ನು ಲೋಕಸಭಾ ಚುನಾವಣೆಯ ಜೊತೆಯಲ್ಲೇ ನಡೆಸುವಂತೆ ಮಾಡಲು ಕೇಂದ್ರ ಕಾನೂನು ಆಯೋಗವು ಸೂತ್ರವೊಂದನ್ನು ಸಿದ್ಧಪಡಿಸುತ್ತಿದೆ ಎಂದು ಮೂಲಗಳು ಹೇಳಿವೆ. ವಿಧಾನಸಭೆಗಳ ಅವಧಿಯನ್ನು ವಿಸ್ತರಿಸುವುದು ಅಥವಾ ತಗ್ಗಿಸುವುದು ಈ ಸೂತ್ರದ ಒಂದು ಭಾಗ.

ಲೋಕಸಭೆ, ರಾಜ್ಯಗಳ ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರವು ಉನ್ನತ ಮಟ್ಟದ ಸಮಿತಿಯೊಂದನ್ನು ಈಗಾಗಲೇ ರಚಿಸಿದೆ. ಈಗ ಕೇಂದ್ರವು, ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳ ಜೊತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ಏಕಕಾಲಕ್ಕೆ ನಡೆಸುವ ಬಗ್ಗೆ ಪರಿಶೀಲಿಸುವಂತೆ ಕಾನೂನು ಆಯೋಗವನ್ನು ಕೋರುವ ಸಾಧ್ಯತೆ ಇದೆ.

ಲೋಕಸಭೆ, ವಿಧಾನಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಮತದಾರರ ಒಂದೇ ಪಟ್ಟಿ ಇರುವಂತೆ ಮಾಡಲು ಆಯೋಗವು ಸೂತ್ರವೊಂದನ್ನು ರೂಪಿಸುತ್ತಿದೆ. ಬೇರೆ ಬೇರೆ ಚುನಾವಣೆಗಳಿಗೆ ಪ್ರತ್ಯೇಕವಾಗಿ ಮತದಾರರ ಪಟ್ಟಿ ಸಿದ್ಧಪಡಿಸಲು ಆಗುವ ವೆಚ್ಚವನ್ನು ತಗ್ಗಿಸಲು ಹಾಗೂ ಮಾನವ ಸಂಪನ್ಮೂಲದ ಬಳಕೆಯನ್ನು ಕಡಿಮೆ ಮಾಡಲು ಇದು ನೆರವಾಗುತ್ತದೆ.

ಏಕ ಕಾಲದಲ್ಲಿ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಕಾನೂನು ಆಯೋಗವು ವರದಿಯನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಮೂಲಗಳು ಹೇಳಿವೆ.

ಲೋಕಸಭಾ ಚುನಾವಣೆಯ ಜೊತೆಯಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆಗಳನ್ನು ಕೂಡ ನಡೆಸುವಂತೆ ಆಗಲು ನ್ಯಾಯಮೂರ್ತಿ ಋತುರಾಜ್ ಅವಸ್ಥಿ ನೇತೃತ್ವದ ಕಾನೂನು ಆಯೋಗವು, ವಿಧಾನಸಭೆಗಳ ಅವಧಿಯನ್ನು ವಿಸ್ತರಿಸುವ ಅಥವಾ ಕಡಿಮೆ ಮಾಡುವ ಸಲಹೆಯನ್ನು ನೀಡುವ ಸಾಧ್ಯತೆ ಇದೆ.

ಲೋಕಸಭೆ ಹಾಗೂ ವಿಧಾನಸಭೆಗಳಿಗೆ ಚುನಾವಣೆಯನ್ನು ಹಂತ ಹಂತವಾಗಿ ನಡೆಸುವ ಪದ್ಧತಿಯು ಜಾರಿಯಲ್ಲಿ ಇರುವ ಕಾರಣ, ಮತದಾರರು ತಮ್ಮ ಕ್ಷೇತ್ರದಲ್ಲಿ ಈ ಎರಡು ಚುನಾವಣೆಗಳ ಸಂದರ್ಭದಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಎರಡೆರಡು ಬಾರಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಂತೆ ನೋಡಿಕೊಳ್ಳಲು ಕಾನೂನು ಆಯೋಗವು ಆಲೋಚನೆ ನಡೆಸಲಿದೆ.

ಮೊದಲ ಹಂತದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ನಡೆಸುವ, ಎರಡನೆಯ ಹಂತದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಸಲಹೆಯನ್ನು ಕಾನೂನು ಆಯೋಗವು ನೀಡಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT