ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬಿಜೆಪಿಯ ಹಿರಿಯ ನಾಯಕ, ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ ಅವರಿಗೆ ಅವರ ನಿವಾಸದಲ್ಲಿ ಭಾನುವಾರ ಭಾರತ ರತ್ನ ಪ್ರದಾನ ಮಾಡಿದರು.
ಈ ವೇಳೆ ಉಪ ರಾಷ್ಟ್ರಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಅಡ್ವಾಣಿ ಕುಟುಂಬಸ್ಥರು ಉಪಸ್ಥಿತರಿದ್ದರು ಎಂದು ರಾಷ್ಟ್ರಪತಿ ಭವನವು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದೆ.
ಕಾರ್ಯಕ್ರಮದ ಬಗ್ಗೆ ‘ಎಕ್ಸ್’ನಲ್ಲಿ ಸಂತಸ ವ್ಯಕ್ತಪಡಿಸಿದ ಮೋದಿ ಅವರು, ‘ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡಿದ ಕ್ಷಣವನ್ನು ಕಣ್ತುಂಬಿಕೊಂಡಿರುವುದು ತುಂಬಾ ವಿಶೇಷವಾಗಿದೆ. ಇದು ಅವರು ದೇಶದ ಪ್ರಗತಿಗೆ ನೀಡಿದ ಕೊಡುಗೆಗೆ ಸಂದ ಗೌರವ’ ಎಂದಿದ್ದಾರೆ.
‘ಸಾರ್ವಜನಿಕ ಸೇವೆಗಾಗಿ ಅಡ್ವಾಣಿಯವರು ಮಾಡಿದ ತ್ಯಾಗ ಮತ್ತು ನವ ಭಾರತ ನಿರ್ಮಾಣದಲ್ಲಿನ ಅವರ ಪಾತ್ರ ಇತಿಹಾಸದಲ್ಲಿ ಅಚ್ಚೊತ್ತಿದೆ. ಕಳೆದ ಕೆಲವು ದಶಕಗಳಲ್ಲಿ ಅವರ ಜೊತೆಯಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದು ಹೇಳಿದ್ದಾರೆ.