ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ವಿರೋಧವೇ ಸವಾಲು

ತಮಿಳುನಾಡಿನ ಕೊಂಗು ಪ್ರದೇಶ: ಭದ್ರಕೋಟೆ ನೆಚ್ಚಿಕೊಂಡಿರುವ ಎಐಎಡಿಎಂಕೆ
Last Updated 14 ಏಪ್ರಿಲ್ 2019, 19:09 IST
ಅಕ್ಷರ ಗಾತ್ರ

ಸೇಲಂ: ತಮಿಳುನಾಡಿನ ಪಶ್ಚಿಮ ಭಾಗವನ್ನು ಕೊಂಗು ಪ್ರದೇಶ ಎಂದು ಕರೆಯುತ್ತಾರೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಏಳು ಜಿಲ್ಲೆಗಳು ಎಐಎಡಿಎಂಕೆ ನಾಯಕಿ ಜಯಲಲಿತಾ ಅವರನ್ನು ಮರಳಿ ಅಧಿಕಾರದಲ್ಲಿ ಕೂರಿಸಿತ್ತು. ರಾಜ್ಯದ ಉಳಿದ ಭಾಗಗಳಲ್ಲಿ ಡಿಎಂಕೆ–ಕಾಂಗ್ರೆಸ್‌ ಮೈತ್ರಿಕೂಟವು ಮುನ್ನಡೆ ಸಾಧಿಸಿತ್ತು. ಆದರೆ, ಈ ಭಾಗ ಜಯಲಲಿತಾ ಅವರ ಕೈಹಿಡಿಯಿತು. ಹಾಗಾಗಿ ಸತತ ಎರಡನೇ ಅವಧಿಗೆ ಜಯಲಲಿತಾ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಅದಕ್ಕೂ ಮೊದಲು, ಜಯಲಲಿತಾ ಅವರ ಗುರು ಎಂ.ಜಿ. ರಾಮಚಂದ್ರನ್‌ ಅವರಿಗೆ ಮಾತ್ರ ಈ ಸಾಧನೆ ಸಾಧ್ಯವಾಗಿತ್ತು.

ಈಗ ಜಯಲಲಿತಾ ಅವರಿಲ್ಲ. ಅವರ ಪ್ರಭಾವವನ್ನೇ ಎಐಎಡಿ ಎಂಕೆ ಈಗಲೂ ನೆಚ್ಚಿಕೊಂಡಿದೆ. ಜಯಲಲಿತಾ ಅವರ ‘ಆತ್ಮ’ ಕೊಂಗು ಪ್ರದೇಶದಲ್ಲಿ ಪಕ್ಷವನ್ನು ದಡ ಸೇರಿಸಲಿದೆ ಎಂಬ ನಿರೀಕ್ಷೆಯಲ್ಲಿ ಪಕ್ಷದ ನಾಯಕರು ಇದ್ದಾರೆ. ಇಲ್ಲಿ 8 ಲೋಕಸಭಾ ಕ್ಷೇತ್ರಗಳಿವೆ.

ಕೊಂಗು ಪ್ರದೇಶದ ಗೆಲುವು ಎಐಎಡಿಎಂಕೆಗೆ ಬಹಳ ಮುಖ್ಯ. ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಈ ಪ್ರದೇಶದವರು ಮತ್ತು ಇಲ್ಲಿನ ಪ್ರಭಾವಿ ಗೌಂಡರ್‌ ಸಮುದಾಯದವರು. ಈ ಸಮುದಾಯ ಸದಾ ಎಐಎಡಿಎಂಕೆ ಬೆನ್ನಿಗೆ ನಿಂತಿದೆ. ಈ ಜನರು ಡಿಎಂಕೆಯಿಂದ ಬಹಳ ದೂರ. ಈ ಬಾರಿ ಇಲ್ಲಿ ಕಡಿಮೆ ಕ್ಷೇತ್ರಗಳನ್ನು ಗೆದ್ದರೆ ಸಮುದಾಯದ ಮೇಲಿನ ಹಿಡಿತ ಎಐಎಡಿಎಂಕೆಗೆ ತಪ್ಪಿದೆ ಎಂಬ ಸಂದೇಶ ಹೋಗುತ್ತದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿನ 47 ಕ್ಷೇತ್ರಗಳ ಪೈಕಿ 41 ಕ್ಷೇತ್ರಗಳು ಎಐಎಡಿಎಂಕೆ ಪಾಲಾಗಿದ್ದವು.

ಈ ವಿಶ್ವಾಸದಿಂದಲೇ ಇಲ್ಲಿನ ಏಳು ಕ್ಷೇತ್ರಗಳಲ್ಲಿ ಎಐಎಡಿಎಂಕೆ ಸ್ಪರ್ಧಿಸಿದೆ. ಕೊಯಮತ್ತೂರು ಕ್ಷೇತ್ರವನ್ನು ಮಾತ್ರ ಬಿಜೆಪಿಗೆ ಬಿಟ್ಟುಕೊಟ್ಟಿದೆ. 2006, 2011 ಮತ್ತು 2016ರಲ್ಲಿ ಜಯಲಲಿತಾ ಅವರಿಗೆ ಇಲ್ಲಿ ಗಣನೀಯ ಯಶಸ್ಸು ಸಿಕ್ಕಿತ್ತು. ಈ ಬಾರಿ ಇಲ್ಲಿ ಎಐಎಡಿಎಂಕೆ ಸೋತರೆ ಮುಖ್ಯಮಂತ್ರಿಯ ಪ್ರತಿಷ್ಠೆಗೆ ದೊಡ್ಡ ಪೆಟ್ಟು.

ಪೊಲ್ಲಾಚಿಯಲ್ಲಿ ಎಐಎಡಿಎಂಕೆ ಅಭ್ಯರ್ಥಿ ಸಿ. ಮಹೇಂದ್ರನ್‌ಗೆ ಜನರ ಜತೆಗೆ ಸಂಪರ್ಕ ಇದೆ. ಅವರು ಸದಾ ಜನರ ಕೈಗೆ ಸಿಗುತ್ತಾರೆ ಎಂಬುದೇ ಅವರ ಪರವಾಗಿರುವ ಬಹುದೊಡ್ಡ ಅಂಶ. ತಿರುಪೂರ್‌ನಲ್ಲಿ ಮಾಜಿ ಸಚಿವ ಎಂ.ಎಸ್‌.ಎಂ ಆನಂದನ್‌ ಸ್ಪರ್ಧಿ. ಜಿಎಸ್‌ಟಿ ಮತ್ತು ನೋಟು ರದ್ದತಿಯೇ ಅವರ ಮಂದಿರುವ ದೊಡ್ಡ ಸವಾಲು. ಡಿಎಂಕೆ ನೇತೃತ್ವದ ಮೈತ್ರಿಕೂಟವು ಈ ಕ್ಷೇತ್ರವನ್ನು ಸಿಪಿಐಗೆ ಬಿಟ್ಟುಕೊಟ್ಟಿದೆ.

ಕೊಯಮತ್ತೂರಿನಲ್ಲಿ ಬಿಜೆಪಿಗೆ ತಳಮಟ್ಟದ ಕಾರ್ಯಕರ್ತರಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಇಲ್ಲಿ ಪಕ್ಷ ಕಟ್ಟುವ ಕೆಲಸವನ್ನು ಬಿಜೆಪಿ ಮಾಡಿದೆ. ಜತೆಗೆ, ಈ ಕೈಗಾರಿಕಾ ನಗರದಲ್ಲಿ ಎಐಎಡಿಎಂಕೆಗೆ ಗಟ್ಟಿ ಬೆಂಬಲವೂ ಇದೆ. ಇವೆಲ್ಲದರ ಆಧಾರದಲ್ಲಿ ಇಲ್ಲಿ ಗೆಲ್ಲುವ ವಿಶ್ವಾಸ ಬಿಜೆಪಿಗೆ ಇದೆ. ಈರೋಡ್‌, ನಮಕ್ಕಲ್‌ ಮತ್ತು ಸೇಲಂನಲ್ಲಿ ಜಿದ್ದಾಜಿದ್ದಿ ತೀವ್ರವಾಗಿದೆ. ಗೌಂಡರ್‌ ಸಮುದಾಯವನ್ನು ಪ್ರತಿನಿಧಿಸುವ ಪಕ್ಷಗಳು ಈ ಬಾರಿ ಡಿಎಂಕೆ ಮೈತ್ರಿಕೂಟದಲ್ಲಿಯೂ ಇವೆ ಎಂಬುದು ಈ ಜಿದ್ದಾಜಿದ್ದಿಗೆ ಕಾರಣ.

ನೀಲಗಿರಿ ಕ್ಷೇತ್ರದಲ್ಲಿ ಡಿಎಂಕೆಯ ಎ. ರಾಜಾ ಕಣದಲ್ಲಿದ್ದಾರೆ. ಅವರು ಡಿಎಂಕೆಯ ದಲಿತ ಮುಖ. ಈ ಕ್ಷೇತ್ರದಲ್ಲಿ ಅವರಿಗೆ ಅನುಕೂಲಕರ ಅಂಶಗಳೇ ಹೆಚ್ಚು. ಲೋಕಸಭೆಯ ಉಪ ಸ್ಪೀಕರ್‌, ಎಐಎಡಿಎಂಕೆಯ ಎಂ. ತಂಬಿದೊರೆ ಅವರು ಕರೂರ್‌ನಲ್ಲಿ ಆಡಳಿತ ವಿರೋಧಿ ಅಲೆಯ ವಿರುದ್ಧ ಈಜಬೇಕಾಗಿದೆ.

ಎಲ್ಲ ಲೆಕ್ಕಾಚಾರಗಳನ್ನೂ ತಲೆಕೆಳಗೆ ಮಾಡುವ ಒಂದು ವಿಚಾರ ತಮಿಳುನಾಡಿನಾದ್ಯಂತ ಇದೆ. ಅದು ಮೋದಿ ವಿರೋಧಿ ಅಲೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ಆರ್ಥಿಕ ನೀತಿಗಳ (ಜಿಎಸ್‌ಟಿ, ನೋಟು ರದ್ದತಿ ಇತ್ಯಾದಿ) ಬಗ್ಗೆಯೂ ಜನರಲ್ಲಿ ಭಾರಿ ಅಸಮಾಧಾನ ಇದೆ. ಇದು ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಶಾಪವಾಗಬಹುದು.

ಎಐಎಡಿಎಂಕೆ: ಅನುಕೂಲ

* ಜಾತಿ ಸಮೀಕರಣ

* ಸೇಲಂ ಮತ್ತು ಸುತ್ತಲಿನ ಪ್ರದೇಶದಲ್ಲಿನ ‘ಅಭಿವೃದ್ಧಿ ಕೆಲಸಗಳು’

* 2006–11ರಲ್ಲಿ ಡಿಎಂಕೆ ಅಧಿಕಾರದಲ್ಲಿ ಇದ್ದಾಗ ವಿದ್ಯುತ್‌ ಸಮಸ್ಯೆ ತೀವ್ರವಾಗಿತ್ತು. ಡಿಎಂಕೆ ವಿರುದ್ಧ ಜನರು ತಿರುಗಿ ಬೀಳಲು ಕಾರಣವಾಗಿತ್ತು

* ಎಐಎಡಿಎಂಕೆ ಪ್ರಭಾವ ಈಗಲೂ ದಟ್ಟವಾಗಿದೆ

* ಕೈಗಾರಿಕೋದ್ಯಮಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಒಲವು ಇದೆ

ಅನನುಕೂಲ

* ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆಗೆ ನೋಟು ರದ್ದತಿ ಮತ್ತು ಜಿಎಸ್‌ಟಿ ದೊಡ್ಡ ಸವಾಲು

* ಜಯಲಲಿತಾ ಇಲ್ಲದಿರುವ ಈ ಸಂದರ್ಭದಲ್ಲಿ ಜನರನ್ನು ಸೆಳೆಯಬಲ್ಲ ಜನನಾಯಕರು ಎಐಎಡಿಎಂಕೆಯಲ್ಲಿ ಇಲ್ಲ

* ಸ್ಟಾಲಿನ್‌ ನಾಯಕತ್ವದಲ್ಲಿ ಡಿಎಂಕೆ ಪುನಶ್ಚೇತನ

ಕ್ಷೇತ್ರಗಳು: ಸೇಲಂ, ನಮಕ್ಕಲ್‌, ಕರೂರ್‌, ಈರೋಡ್‌, ತಿರುಪೂರ್‌, ಪೊಲ್ಲಾಚಿ, ಕೊಯಮತ್ತೂರು, ನೀಲಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT