ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಮೊದಲ ಹಂತ– ಮೇಲುಗೈ ಸಾಧಿಸಿದ್ದು ಯಾರು?

102 ಕ್ಷೇತ್ರಗಳಲ್ಲಿ 50ರಿಂದ 60 ಸ್ಥಾನ ಗೆಲ್ಲುವ ವಿಶ್ವಾಸದಲ್ಲಿ ‘ಇಂಡಿಯಾ’ ಮೈತ್ರಿಕೂಟ
ಶೆಮಿನ್‌ ಜಾಯ್
Published 20 ಏಪ್ರಿಲ್ 2024, 21:02 IST
Last Updated 20 ಏಪ್ರಿಲ್ 2024, 21:02 IST
ಅಕ್ಷರ ಗಾತ್ರ

ರಾಜಸ್ಥಾನದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಶೂನ್ಯ ‘ಸಾಧನೆ’ ಮಾಡಿದ್ದ ಕಾಂಗ್ರೆಸ್‌, ಈ ಬಾರಿ ಮಿತ್ರಪಕ್ಷಗಳಾದ ಆರ್‌ಎಲ್‌ಪಿ ಮತ್ತು ಸಿಪಿಎಂ ಜತೆ ಸೇರಿಕೊಂಡು 10ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡಲಿದೆ. 5 ರಿಂದ 7 ಸ್ಥಾನಗಳನ್ನು ಗೆಲ್ಲವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ

******

ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದಲ್ಲಿ ಶುಕ್ರವಾರ 102 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಚುನಾವಣೆಯ ಮೊದಲ ಹಂತದಲ್ಲಿ ಮತದಾರರು ಎನ್‌ಡಿಎ ಪರವಾಗಿ ತೀರ್ಪು ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ. ಆದರೆ, ಬಿಜೆಪಿಯು 2019 ರಲ್ಲಿ  ಉತ್ತರ ಭಾರತದಲ್ಲಿ ಗೆದ್ದಿದ್ದ ಸ್ಥಾನಗಳಲ್ಲಿ ಕೆಲವು ತನ್ನ ಕೈವಶವಾಗಲಿದೆ ಎಂಬ ವಿಶ್ವಾಸವನ್ನು ಕಾಂಗ್ರೆಸ್‌ ವ್ಯಕ್ತಪಡಿಸಿದೆ.

‘ಕಳೆದ ಬಾರಿ ಗೆದ್ದಿದ್ದ ಸ್ಥಾನಗಳನ್ನು ನಾವು ಉಳಿಸಿಕೊಂಡಿದ್ದೇವೆ. ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಅವಕಾಶ ನೀಡಿಲ್ಲ’ ಎಂದು ಕಾಂಗ್ರೆಸ್‌ನ ಚುನಾವಣೆಯ ಕಾರ್ಯತಂತ್ರ ರೂಪಿಸಿದವರು ಅಂದಾಜು ಮಾಡಿದ್ದಾರೆ. ಮತದಾನ ನಡೆದ 102 ಕ್ಷೇತ್ರಗಳಲ್ಲಿ 50 ರಿಂದ 60 ಸ್ಥಾನಗಳು ಲಭಿಸಬಹುದು ಎಂದು ‘ಇಂಡಿಯಾ’ ಮೈತ್ರಿಕೂಟದ ನಾಯಕರು ನಿರೀಕ್ಷಿಸಿದ್ದಾರೆ.

‘ಬಿಜೆಪಿಯ, ಅದರಲ್ಲೂ ಮುಖ್ಯವಾಗಿ ಮೋದಿ ಅವರ ಚುನಾವಣಾ ಪ್ರಚಾರವನ್ನು ಗಮನಿಸಿದ ಬಳಿಕ ಕಾಂಗ್ರೆಸ್‌ ನಾಯಕತ್ವವು, ಈ ಚುನಾವಣೆಯಲ್ಲಿ ರಾಮಮಂದಿರ ವಿಚಾರವು ಇನ್ನೂ ‘ಟೇಕಾಫ್‌’ ಆಗಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ’ ಎಂದು ಮೂಲಗಳು ಹೇಳಿವೆ. ಜಾಟ್‌ ಮತ್ತು ರಜಪೂತ ಸಮುದಾಯದವರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವುದು ಕಾಂಗ್ರೆಸ್‌ಗೆ ಲಾಭ ಉಂಟುಮಾಡುತ್ತಿದೆ ಎಂದು ನಂಬಿದ್ದಾರೆ.

ರೈತರ ವಿಶ್ವಾಸ ಗಿಟ್ಟಿಸುವ ವಿಚಾರದಲ್ಲೂ ಬಿಜೆಪಿ ‘ಹಿನ್ನಡೆ’ ಅನುಭವಿಸಿದೆ. ಬಡವರು ಮತ್ತು ದಲಿತರಲ್ಲೂ ಬಿಜೆಪಿ ವಿರೋಧಿ ಭಾವನೆ ಇದೆ. ರಾಹುಲ್‌ ಗಾಂಧಿ ಅವರ ‘ಬಡವರ ಪರ’ ಧೋರಣೆ ಮತ್ತು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಮಾತ್ರ ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿರುವುದು ಕೂಡಾ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡಿದೆ ಎಂಬ ವಿಶ್ವಾಸ ಅವರದ್ದು.

‘ಬಿಜೆಪಿ ನಾಯಕರು ಸಂವಿಧಾನ ಬದಲಾಯಿಸುವ ಬಗ್ಗೆ ಮಾತನಾಡುವಾಗ ಮೌನ ವಹಿಸಿದ್ದ ಮೋದಿ ಅವರು ಇದೀಗ ಒತ್ತಡಕ್ಕೆ ಒಳಗಾಗಿ, ಅಂಬೇಡ್ಕರ್‌ ಬಂದರೂ ಸಂವಿಧಾನ ಬದಲಾಯಿಸಲು ಸಾಧ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ’ ಎಂಬುದು ಕಾಂಗ್ರೆಸ್ ನಾಯಕರ ವಾದ. 

‘ಈ ಚುನಾವಣೆಯು ಸಂವಿಧಾನವನ್ನು ರಕ್ಷಿಸಲು ಲಭಿಸಿರುವ ಕೊನೆಯ ಅವಕಾಶ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳುತ್ತಾ ಬಂದಿದ್ದಾರೆ. ಇದರಿಂದಾಗಿ ಮೋದಿ ಅವರಿಗೆ ಈ ಹೇಳಿಕೆ ನೀಡಬೇಕಾಗಿ ಬಂತು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಜಸ್ಥಾನ, ಹರಿಯಾಣ, ಜಾರ್ಖಂಡ್‌, ಗುಜರಾತ್, ಬಿಹಾರ, ಉತ್ತರ ಪ್ರದೇಶ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಪಕ್ಷಕ್ಕೆ ಅನುಕೂಲಕರ ವಾತಾವರಣವಿದೆ ಎಂಬುದು ಮೂರು ವಾರಗಳ ಪ್ರಚಾರ ಅಭಿಯಾನದ ವೇಳೆ ಗಮನಕ್ಕೆ ಬಂದಿದೆ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

‘ಮೋದಿ ಅವರ ವರ್ಚಸ್ಸು ಕಡಿಮೆಯಾಗುತ್ತಿದ್ದು, ಕೆಲವು ಕ್ಷೇತ್ರಗಳಲ್ಲಂತೂ ಸಂಪೂರ್ಣವಾಗಿ ಮರೆಯಾಗಿದೆ. ಕಾಂಗ್ರೆಸ್‌ನ ಗ್ಯಾರಂಟಿ, ನಿರುದ್ಯೋಗ, ಬೆಲೆಯೇರಿಕೆ, ಸಂವಿಧಾನ ರಕ್ಷಣೆ ಮತ್ತು ಜಾತಿಗಣತಿಯು ಈ ಚುನಾವಣೆಯ ಪ್ರಮುಖ ವಿಷಯಗಳು’ ಎಂದು ಕಾಂಗ್ರೆಸ್‌ ಮುಖಂಡ ವೈ.ಬಿ.ಶ್ರೀವಸ್ತ ಹೇಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT