ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಅವಘಡದ ಭೀಕರತೆ ತೆರೆದಿಟ್ಟ ಪ್ರಯಾಣಿಕರು

Published 3 ಜೂನ್ 2023, 16:38 IST
Last Updated 3 ಜೂನ್ 2023, 16:38 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಬೆಂಗಳೂರು– ಹೌರಾ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ವೇಗವಾಗಿ ಸಾಗುತ್ತಿತ್ತು. ರಾತ್ರಿ ಏಳು ಗಂಟೆ ಸುಮಾರಿಗೆ ಜೋರಾದ ಶಬ್ದ ಕಿವಿಗೆ ಅಪ್ಪಳಿಸಿತು. ನೋಡನೋಡುತ್ತಿದ್ದಂತೆಯೇ ಬೋಗಿಗಳು ದಿಕ್ಕುದೆಸೆಯಿಲ್ಲದೆ ಚಲಿಸಿದವು. ಬೆಳಕು ಆರಿ ಕತ್ತಲು ಆವರಿಸಿತು, ನಾನು ಕುಳಿತಿದ್ದ ಸೀಟಿನಿಂದ ಕೆಳಗೆ ಬಿದ್ದೆ...ಹೇಗೋ ಎದ್ದು ಹೊರಗೆ ನೋಡಿದರೆ ಗಾಯಾಳುಗಳು ಎಲ್ಲೆಂದರಲ್ಲಿ ಆಕ್ರಂದಿಸುತ್ತ ಬಿದ್ದಿದ್ದರು..’

ರೈಲು ದುರಂತದಲ್ಲಿ ಬದುಕುಳಿದ ಹಕ್‌ ಎಂಬವರು ಘಟನೆಯ ಭೀಕರತೆಯನ್ನು ವಿವರಿಸಿದ್ದು ಹೀಗೆ. ದಕ್ಷಿಣ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಹಕ್‌ ಅವರು ಹಲವು ತಿಂಗಳ ಬಳಿಕ ಮನೆಗೆ ಮರಳುತ್ತಿದ್ದರು.  

ದುರಂತದಲ್ಲಿ ಬದುಕುಳಿದ ಮತ್ತೊಬ್ಬ ವ್ಯಕ್ತಿ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಬರ್ಧಾಮನ್‌. ಅವರು, ‘ಬೋಗಿಗಳು ಉರುಳಿ ಬಿದ್ದಾಗ ಎದೆಯ ಭಾಗ, ಕಾಲು ಮತ್ತು ತಲೆಗೆ ಪೆಟ್ಟಾಯಿತು. ಜೀವವನ್ನು ಉಳಿಸಿಕೊಳ್ಳಲು ಕಿಟಕಿಗಳನ್ನು ಒಡೆದು ಹೊರಗೆ ಬರಲೇಬೇಕಿತ್ತು. ಘಟನಾಸ್ಥಳದಲ್ಲಿ ಹೆಣಗಾಳ ರಾಶಿ ಕಂಡು ಆಘಾತವಾಯಿತು’ ಎಂದು ಭೀಕರತೆಯನ್ನು ವಿವರಿಸಿದರು.

‘ಘಟನೆಯ ಕರಾಳ ದೃಶ್ಯಗಳನ್ನು ಸ್ಮೃತಿಪಟಲದಿಂದ ಹೊರಹಾಕಲು ಸಾಧ್ಯವೇ ಇಲ್ಲ’ ಎಂದು ಮುರ್ಷಿದಾಬಾದ್‌ ನಿವಾಸಿ ಇಮ್ತಾಜುಲ್‌ ಖಾನ್‌ ಹೇಳಿದರು.

ಅಪಘಾತಕ್ಕೀಡಾದ ಕೋರೊಮಂಡಲ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿದ್ದ ರಾಜಲಕ್ಷ್ಮಿ ಎಂಬವರು, ‘ಬಾಲಸೋರ್‌ ದಾಟಿ ಕೆಲವೇ ನಿಮಿಷಗಳಾಗಿದ್ದವು, ಜೋರಾದ ಶಬ್ದವಾಯಿತು. ನಾವಿದ್ದ ಬೋಗಿಯು ಇನ್ನೊಂದು ಹಳಿಯ ಮೇಲೆ ಬೀಳಲು ಆರಂಭಿಸಿತು. ಏನಾಗುತ್ತಿದೆ ಎಂದೇ ನಮಗೆ ತಿಳಿಯಲಿಲ್ಲ. ಕೆಲ ನಿಮಿಷಗಳ ನಂತರ ರೈಲಿನ ಹೊರಗೆ ಬಂದು ನೋಡಿದಾಗ ಬೋಗಿಗಳು ಮತ್ತು ಹೆಣಗಳು ಎಲ್ಲೆಂದರಲ್ಲಿ ಬಿದ್ದಿದ್ದವು. ಒಂದು ಬೋಗಿಯಂತೂ ಸಂಪೂರ್ಣವಾಗಿ ಮಗುಚಿತ್ತು. ಇಂದು ಬದುಕುಳಿದಿದ್ದೇನೆ ಎಂದರೆ ನಿಜಕ್ಕೂ ನಾನು ಅದೃಷ್ಟವಂತೆ’ ಎಂದು ಪವಾಡಸದೃಶ ರೀತಿಯಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದನ್ನು ವಿವರಿಸಿದರು.

‘ಮೊದಲಿಗೆ ಗೊಂದಲದಲ್ಲಿದ್ದೆವು. ಬಳಿಕ ಕಂಪಾರ್ಟ್‌ಮೆಂಟ್‌ನಿಂದ ಹೊರಬಂದು ಕಗ್ಗತ್ತಲ್ಲಲ್ಲಿಯೇ ಸಮೀಪದ ಹೊಲಕ್ಕೆ ಬಂದು ಇಡೀ ರಾತ್ರಿ ಕಳೆದೆವು. ಮುಂಜಾನೆಯ ವೇಳೆಗೆ ರೈಲು ಹೌರಾಗೆ ಪ್ರಯಾಣ ಆರಂಭಿಸಿತು’ ಎಂದು ಕೋಲ್ಕತ್ತಗೆ ಭೇಟಿ ನೀಡುತ್ತಿದ್ದ ಬೆಂಗಳೂರು ನಿವಾಸಿ ರೇಖಾ ಎಂಬವರು ತಿಳಿಸಿದರು.

3 ವರ್ಷಗಳಲ್ಲಿ ಯಾವುದೇ ರೈಲು ದುರಂತ ನಡೆದಿರಲಿಲ್ಲ. ಒಡಿಶಾ ರೈಲು ದುರಂತ ದುರ್ದೈವದ ಸಂಗತಿ. ದುರಂತದಲ್ಲಿ ಮೃತರ ಮತ್ತು ಗಾಯಗೊಂಡವರ ಕುಟುಂಬಗಳಿಗೆ ಕೇಂದ್ರ ಎಲ್ಲ ರೀತಿಯ ನೆರವು ನೀಡುತ್ತಿದೆ.
ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

ವಿವಿಧ ರಾಷ್ಟ್ರಗಳ ಮುಖಂಡರ ಸಂತಾಪ

ಮಾಸ್ಕೊ‌/ಟೋಕಿಯೊ (ಪಿಟಿಐ): ಒಡಿಶಾದ ರೈಲು ದುರಂತದಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ವಿಶ್ವದ ವಿವಿಧ ನಾಯಕರು ಸಂತಾಪ ಸೂಚಿಸಿದ್ದು, ಪರಿಹಾರ ಕಾರ್ಯದಲ್ಲಿ ಭಾರತದ ಜೊತೆಗೆ ನಿಲ್ಲುವ ಭರವಸೆ ನೀಡಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್, ಜಪಾನ್‌ ಪ್ರಧಾನಿ ಫುಮಿಯೊ ಕಿಷಿಡ, ಕೆನಡಾ ‍ಪ್ರಧಾನಿ ಜಸ್ಟಿನ್ ಟ್ರುಡೆಯು ಸೇರಿ ಹಲವು ಮುಖಂಡರು ಸಂದೇಶ ಕಳುಹಿಸಿದ್ದು, ಅಪಘಾತ ಕುರಿತು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಅವರು ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ.

ನೇಪಾಳದ ಪ್ರಧಾನಿ ಪ್ರಚಂಡ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಷರೀಫ್, ಜಪಾನ್‌ ವಿದೇಶಾಂಗ ಸಚಿವ ಯೋಶಿಮಸ ಹಯಾಷಿ, ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ, ಭೂತಾನ್‌ ಪ್ರಧಾನಿ ಲೊಟೆ ಶೆರಿಂಗ್, ಇಟಲಿಯ ಉಪ ಪ್ರದಾನಿ ಅಂಟೊನಿಯೊ ತಜಾನಿ, ವಿಶ್ವಸಂಸ್ಥೆ ಸಾಮಾನ್ಯ ಸಭೆ ಅಧ್ಯಕ್ಷ ಛಾಬಾ ಕೊರೊಷಿ ಅವರು ಸಂತಾಪ ಸೂಚಿಸಿ ಟ್ವೀಟ್‌ ಮಾಡಿದ್ದಾರೆ.

ಪೋಪ್‌ ಸಂತಾಪ, ಪ್ರಾರ್ಥನೆ

ವ್ಯಾಟಿಕನ್‌ ಸಿಟಿ (ಪಿಟಿಐ): ಭಾರತದ ಒಡಿಶಾದಲ್ಲಿ ನಡೆದ ಭೀಕರ ರೈಲು ಅವಘಡ ಕುರಿತಂತೆ ಪೋಪ್‌ ಫ್ರಾನ್ಸಿಸ್‌ ಅವರು ಶನಿವಾರ ‌ಅತೀವ ದುಃಖ ವ್ಯಕ್ತಪಡಿಸಿದ್ದು, ಮಡಿದ ಜೀವಗಳಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

‘ಈ ದುರಂತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು, ಅತೀವ ಜೀವಹಾನಿಗೆ ಕಾರಣವಾಗಿರುವ ಈ ಅಪಘಾತ ಹೆಚ್ಚು ನೋವುಂಟು ಮಾಡಿದೆ’ ಎಂದು ಅವರು ಹೇಳಿದ್ದಾರೆ.

ಪೋಪ್ ಅವರು ದುರಂತದಲ್ಲಿ ಮಡಿದವರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದಾರೆ ಎಂದು ಹಿರಿಯ ಕಾರ್ಡಿನಲ್‌ ಆಗಿರುವ ಪಿಯೆಟ್ರೊ ಪಾರೊಲಿನ್ ಅವರು ಸಂದೇಶ ನೀಡಿದ್ದಾರೆ.

ರೈಲು ಅವಘಡದ ಭೀಕರತೆ ತೆರೆದಿಟ್ಟ ಪ್ರಯಾಣಿಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT