ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂತ್ರ ವಿಸರ್ಜನೆ ಪ್ರಕರಣ | ಬುಡಕಟ್ಟು ಕಾರ್ಮಿಕನ ಪಾದ ತೊಳೆದ ಶಿವರಾಜ್‌ ಸಿಂಗ್ ಚೌಹಾಣ್‌

Published 6 ಜುಲೈ 2023, 6:50 IST
Last Updated 6 ಜುಲೈ 2023, 6:50 IST
ಅಕ್ಷರ ಗಾತ್ರ

ಭೋಪಾಲ್: ಮಧ್ಯಪ್ರದೇಶದ ಸೀದೀ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜಿಸಿದ ಹೇಯಕೃತ್ಯಕ್ಕೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾದ ಬೆನ್ನಲ್ಲೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಅವರು ಸಂತ್ರಸ್ತ ದಶಮತ್‌ ರಾವತ್‌ ಅವರ ಪಾದಗಳನ್ನು ತೊಳೆದು ಕೃತ್ಯದ ಬಗ್ಗೆ ಕ್ಷಮೆಯಾಚಿಸಿದರು.

ಚೌಹಾಣ್‌ ಅವರು ಗುರುವಾರ ತಮ್ಮ ನಿವಾಸದಲ್ಲಿ ರಾವತ್‌ ಅವರ ಪಾದಗಳನ್ನು ತೊಳೆದ ಬಳಿಕ, ಅವರ ಕೊರಳಿಗೆ ಹೂ ಮಾಲೆ ಹಾಕಿ ಗೌರವಿಸಿದರು. ನಂತರ ಉಭಯ ಕುಶಲೋಪರಿ ನಡೆಸಿದರು. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ತಲುಪಿದೆಯೇ ಎಂಬ ಬಗ್ಗೆ
ಚರ್ಚಿಸಿದರು. 

ರಾವತ್‌ ಅವರನ್ನು ‘ಸುಧಾಮ’ ಎಂದು ಕರೆದ ಚೌಹಾಣ್‌, ‘ಯುವಕ ನನ್ನ ಸ್ನೇಹಿತ. ಬುಡಕಟ್ಟು ಯುವಕನ ಮೇಲೆ ಅಮಾನವೀಯವಾಗಿ ವರ್ತಿಸಿರುವುದು ನೋವು ತಂದಿದೆ’ ಎಂದರು.

ಇದಕ್ಕೂ ಮೊದಲು ಸ್ಮಾರ್ಟ್‌ಸಿಟಿ ಉದ್ಯಾನದಲ್ಲಿ ಇಬ್ಬರೂ ಜೊತೆಗೂಡಿ ಸಸಿ ನೆಟ್ಟರು. ಈಗಾಗಲೇ, ಕೃತ್ಯ ಎಸಗಿದ ಆರೋಪಿ ಪ್ರವೇಶ್‌ ಶುಕ್ಲಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ವತ್ತು ನೆಲಸಮಕ್ಕೆ ಸೂಚನೆ: ಶಿವಪುರಿ ಜಿಲ್ಲೆಯ ವರ್ಖಾಡಿ ಗ್ರಾಮದಲ್ಲಿ ಇಬ್ಬರು ದಲಿತ ಯುವಕರಿಗೆ ಥಳಿಸಿದ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಚೌಹಾಣ್‌ ನೇತೃತ್ವದ ಸರ್ಕಾರವು, ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ(ಎನ್‌ಎಸ್‌ಎ) ಪ್ರಕರಣ ದಾಖಲಿಸಲು ನಿರ್ಧರಿಸಿದೆ.

ಸುದ್ದಿಗಾರರ ಜೊತೆ ಮಾತನಾಡಿದ ಗೃಹ ಸಚಿವ ನರೋತ್ತಮ್ ಮಿಶ್ರಾ, ‘ಆರೋಪಿಗಳು ಅಕ್ರಮವಾಗಿ ಸ್ವತ್ತುಗಳನ್ನು ಹೊಂದಿದ್ದರೆ ನೆಲಸಮಗೊಳಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಿದ್ದೇನೆ. ಜೊತೆಗೆ, ಎನ್‌ಎಸ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು’ ಎಂದರು.

ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣ ಕುರಿತು ಕಾಂಗ್ರೆಸ್‌, ಸರ್ಕಾರದ ವಿರುದ್ಧ ಹರಿಹಾಯ್ದಿತ್ತು. ಆದರೆ, ಥಳಿತ ಪ್ರಕರಣದ ಬಗ್ಗೆ ಮೌನವಹಿಸಿದೆ ಎಂದು ಟೀಕಿಸಿದರು.

ಹಿನ್ನೆಲೆ ಏನು?

ಏಳು ದಿನಗಳ ಹಿಂದೆ ಮಧ್ಯಪ್ರದೇಶದ ಸಿಂಧಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ದಶಮತ್ ರಾವತ್ ಪಾದಾಚಾರಿ ಮಾರ್ಗದಲ್ಲಿ ಕುಳಿತಿದ್ದರು. ಈ ವೇಳೆ ಅಲ್ಲಿಗೆ ಬಂದ ಆರೋಪಿ ಪ್ರವೇಶ್‌ ಶುಕ್ಲಾ, ದಶಮತ್‌ ಅವರ ಮೇಲೆ ಮೂತ್ರ ವಿಸರ್ಜನೆ ಮಾಡಿ, ವಿಡಿಯೊ ಮಾಡಿದ್ದನು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಆರೋಪಿ ಬಂಧನಕ್ಕೆ ನೆಟ್ಟಿಗರು ಒತ್ತಾಯಿಸಿದ್ದರು.

ತಕ್ಷಣ ಆರೋಪಿ ಪ್ರವೇಶ್‌ ಶುಕ್ಲಾ ಅವರನ್ನು ಬಂಧಿಸಿದ ಪೊಲೀಸರು ಆತನ ವಿರುದ್ಧ ಐಪಿಸಿ ಸೆಕ್ಷನ್‌ 294 (ಅಸಭ್ಯ ವರ್ತನೆ), 504 (ಉದ್ದೇಶ ಪೂರ್ವಕ ಅವಹೇಳನ), ಪರಿಶಿಷ್ಟ ಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆರೋಪಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವುದಾಗಿಯೂ ಗೃಹ ಸಚಿವರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT