ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾರಾಷ್ಟ್ರ|ಮುಂಬೈ ವ್ಯಾಪ್ತಿಯಲ್ಲಿ ಪೆಟ್ರೋಲ್ 65 ಪೈಸೆ, ಡೀಸೆಲ್ ₹2.60 ಅಗ್ಗ

Published 28 ಜೂನ್ 2024, 12:40 IST
Last Updated 28 ಜೂನ್ 2024, 12:40 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರ ಸರ್ಕಾರವು ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ತೈಲದ ಮೇಲಿನ ವ್ಯಾಟ್ ಕಡಿತ ಮಾಡಿದ್ದು, ಪೆಟ್ರೋಲ್ ಲೀಟರಿಗೆ 65 ಪೈಸೆ ಮತ್ತು ಡೀಸೆಲ್ ₹2.60 ಅಗ್ಗವಾಗಿದೆ.

ವಾರ್ಷಿಕ ಬಜೆಟ್ ಮಂಡನೆ ವೇಳೆ ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಅಜಿತ್ ಪವಾರ್ ಈ ಘೋಷಣೆ ಮಾಡಿದ್ದಾರೆ. ಈ ನಿರ್ಧಾರ ಮುಂಬೈ ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಾತ್ರ ಅನ್ವಯಿಸುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹200 ಕೋಟಿ ನಷ್ಟವಾಗಲಿದೆ ಎಂದೂ ಅವರು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಏಕನಾಥ ಶಿಂದೆ, ಪೆಟ್ರೋಲ್, ಡೀಸೆಲ್ ಮೇಲಿನ ವ್ಯಾಟ್ ಕಡಿತದ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ರಾಜ್ಯ ವಿಧಾನಸಭೆ ಮತ್ತು ಪರಿಷತ್‌ನಲ್ಲಿ ಬಜೆಟ್‌ಗೆ ಅಂಗೀಕಾರ ಸಿಕ್ಕ ಬಳಿಕ ಜುಲೈ 1ರಿಂದ ಜಾರಿಗೆ ಬರಲಿದೆ ಎಂದಿದ್ದಾರೆ.

‘ಮುಖ್ಯಮಂತ್ರಿ ಮಾಝಿ ಲಡಕಿ ಬಹಿನ್ ಯೋಜನೆ’ಅಡಿ 21ರಿಂದ 60 ವರ್ಷದವರೆಗಿನ ಮಹಿಳೆಯರಿಗೆ ಮಾಸಿಕ ₹1,500 ಧನ ಸಹಾಯ ನೀಡುವುದಾಗಿ ಘೋಷಿಸಲಾಗಿದೆ, ಈ ಯೋಜನೆಗೆ ವಾರ್ಷಿಕ ₹46,000 ಕೋಟಿ ಅನುದಾನ ನೀಡಲಾಗುತ್ತಿದೆ.

ಇದೇ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ಜನಪ್ರಿಯ ಘೋಷಣೆಗಳನ್ನು ಸರ್ಕಾರ ಮಾಡಿದೆ.

‘ಮುಖ್ಯಮಂತ್ರಿ ಅನ್ನಪೂರ್ಣ ಯೋಜನೆ’ಅಡಿ ಅರ್ಹ ಕುಟುಂಬಗಳು ಪ್ರತಿ ವರ್ಷ ಮೂರು ಅಡುಗೆ ಅನಿಲ ಸಿಲಿಂಡರ್ ಅನ್ನು ಉಚಿತವಾಗಿ ಪಡೆಯಲಿವೆ.

ಹಾಲು ಉತ್ಪಾದಕ ರೈತರಿಗೆ ಲೀಟರ್‌ಗೆ ತಲಾ ₹5 ಸಬ್ಸಿಡಿ ಘೋಷಿಸಲಾಗಿದ್ದು, ಜುಲೈ 1ರಿಂದ ಜಾರಿಯಾಗಲಿದೆ. 2.93 ಲಕ್ಷ ರೈತರಿಗೆ ಇದರ ಅನುಕೂಲ ಸಿಗಲಿದೆ.

7.5 ಎಚ್‌ಪಿ ಪಂಪ್‌ಸೆಟ್ ಹೊಂದಿರುವ 44 ಲಕ್ಷ ರೈತರಿಗೆ ಉಚಿತ ವಿದ್ಯುತ್, 46.6 ಲಕ್ಷ ರೈತರ ಬಾಕಿ ವಿದ್ಯುತ್ ಬಿಲ್ ಮನ್ನಾ ಮುಂತಾದ ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT