ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜೀನಾಮೆಗೆ ಸಿದ್ಧ, ಸ್ಥಾನ ತ್ಯಜಿಸಲು ಬಂಡಾಯ ಶಾಸಕರು ಹೇಳಲಿ: ಸಿಎಂ ಠಾಕ್ರೆ

ಅಕ್ಷರ ಗಾತ್ರ

ಮುಂಬೈ: ರಾಜೀನಾಮೆ ಪತ್ರ ಸಿದ್ಧವಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧವಿರುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬುಧವಾರ ಹೇಳಿದ್ದಾರೆ.

ಶಿವಸೇನಾದ ಕೆಲವು ಶಾಸಕರು ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ಬೆನ್ನಲ್ಲೇ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬುಧವಾರ ಜನರನ್ನು ಉದ್ದೇಶಿಸಿ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದರು.

ತಮ್ಮದೇ ಪಕ್ಷದ ಶಾಸಕರು ಬಂಡೆದಿದ್ದರುವುದನ್ನು ಪ್ರಸ್ತಾಪಿಸಿದ ಅವರು, 'ನಮ್ಮ ಜನರಿಗೆ ನಾನು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವುದು ಬೇಕಿಲ್ಲದಿದ್ದರೆ, ಯಾವುದೇ ಶಾಸಕರು ನಾನು ಮುಖ್ಯಮಂತ್ರಿಯಾಗಿರುವುದು ಬೇಡ ಎಂದು ಹೇಳಿದರೆ, ತಕ್ಷಣವೇ ನಾನು ರಾಜೀನಾಮೆ ಸಲ್ಲಿಸುತ್ತೇನೆ. ನಾನು 'ವರ್ಷ' ನಿವಾಸದಿಂದ ಮಾತೋಶ್ರಿಗೆ ಮರಳುತ್ತೇನೆ' ಎಂದರು.

ಬಂಡಾಯ ಶಾಸಕರನ್ನು ಮುಖತಃ ಭೇಟಿ ಮಾಡುವಂತೆ ಕೇಳಿರುವ ಉದ್ಧವ್‌ ಠಾಕ್ರೆ, 'ನೇರವಾಗಿ ಮುಖಾಮುಖಿಯಾಗಿ ನನ್ನ ಮುಂದೆ ಮಾತನಾಡಿ, ಸೂರತ್‌ಗೆ ಹೋಗುವುದೇಕೆ. ಸ್ಥಾನಕ್ಕಾಗಿ ಕಿತ್ತಾಡುವ ವ್ಯಕ್ತಿ ನಾನಲ್ಲ. ಶಿವಸೇನಾ ಪಕ್ಷವನ್ನು ಮುನ್ನಡೆಸಲು ನಾನು ಅಸಮರ್ಥನೆಂದು ಹೇಳುವವರು ನನ್ನ ಮುಂದೆ ಬಂದು ತಿಳಿಸಲಿ. ಆ ಹೊಣೆಯನ್ನೂ ಬಿಟ್ಟುಕೊಡಲು ಸಿದ್ಧನಿದ್ದೇನೆ' ಎಂದು ಹೇಳಿದರು.

'ನಾನು ಜನರನ್ನು ಭೇಟಿಯಾಗುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆ. ನಾನು ಆಸ್ಪತ್ರೆಯಿಂದ ನನ್ನ ಮೊದಲ ಕ್ಯಾಬಿನೆಟ್‌ ಸಭೆಯನ್ನು ನಡೆಸಿದೆ. ಬೆನ್ನುಹುರಿ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಂಡ ಬಳಿಕ ನಾನು ಜನರನ್ನು ಭೇಟಿ ಮಾಡುತ್ತಿದ್ದೇನೆ. ನನಗೆ ಯಾವುದೇ ಅನುಭವ ಇಲ್ಲದೇ ಇದ್ದರೂ ನಾನು ಮುಖ್ಯಮಂತ್ರಿಯ ಹೊಣೆಯನ್ನು ತೆಗೆದುಕೊಂಡೆ. ಕಾಂಗ್ರೆಸ್‌ ಮತ್ತು ಎನ್‌ಸಿಪಿ ಪಕ್ಷಗಳ ವಿರುದ್ಧ 25–30 ವರ್ಷಗಳು ನಾವು ಹೋರಾಟ ನಡೆಸಿದೆವು. ಆ ಪಕ್ಷಗಳೇ ನಮ್ಮೊಂದಿಗೆ ಮೈತ್ರಿಗೆ ಮುಂದಾದವು. ಶರದ್‌ ಪವಾರ್‌ ಅವರು ಮುಖ್ಯಮಂತ್ರಿಯಾಗುವಂತೆ ನನ್ನನ್ನು ಕೇಳಿದರು. ಈವರೆಗೂ ಎಲ್ಲರೂ ಸಹಕಾರ ನೀಡಿದ್ದಾರೆ ಹಾಗೂ ಆಡಳಿತವೂ ಉತ್ತಮವಾಗಿ ನಡೆಯುತ್ತಿದೆ' ಎಂದರು.

ಬಾಳಾಸಾಹೇಬ್‌ ಠಾಕ್ರೆ ಅವರು ಕಲಿಸಿದ್ದು ಹಾಗೂ ಹಿಂದುತ್ವವನ್ನು ಶಿವಸೇನಾ ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.

'2014ರಲ್ಲಿ ಮೋದಿ ಅಲೆಯ ನಡುವೆ ನಮ್ಮ 63 ಶಾಸಕರು ಗೆಲುವು ಸಾಧಿಸಿದರು. ಪ್ರಶ್ನೆಗಳನ್ನು ಎತ್ತುತ್ತಿರುವವರು ಆಗ ಸಚಿವರಾಗಿದ್ದರು. ಆಗಲೂ ಇದ್ದದ್ದು ಬಾಳಾಸಾಹೇಬ್‌ ಅವರ ಶಿವಸೇನಾ...ಕೆಲವು ಮಂದಿ ಈಗ ಬಾಳಾಸಾಹೇಬ್‌ ಠಾಕ್ರೆ ಅವರ ಶಿವಸೇನಾ ಇಲ್ಲ ಎನ್ನುತ್ತಿದ್ದಾರೆ. ಆದರೆ, ನಾವು ಬಾಳಾಸಾಹೇಬ್‌ ಅವರ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ' ಎಂದು ಹೇಳಿದರು.

ಮಹಾ ವಿಕಾಸ್‌ ಅಘಾಡಿ ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಶಿವಸೇನಾ ಮುಖಂಡ ಏಕನಾಥ್‌ ಶಿಂಧೆ ಮತ್ತು 30ಕ್ಕೂ ಹೆಚ್ಚು ಶಾಸಕರು, ಬಿಜೆಪಿ ಆಡಳಿತವಿರುವ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT