ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ | ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 7 ನವಜಾತ ಶಿಶುಗಳು ಸಾವು

Published 26 ಮೇ 2024, 2:45 IST
Last Updated 26 ಮೇ 2024, 2:45 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪೂರ್ವ ದೆಹಲಿಯ ವಿವೇಕ್‌ ವಿಹಾರ್‌ ಪ್ರದೇಶ ದಲ್ಲಿರುವ ಬೇಬಿ ಕೇರ್ ನ್ಯೂಬಾರ್ನ್ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಏಳು ನವಜಾತ ಶಿಶುಗಳು ಮೃತಪಟ್ಟಿವೆ. ಆಸ್ಪತ್ರೆ ಮಾಲೀಕ ಡಾ.ನವೀನ್‌ ಕಿಚಿ ಎಂಬವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಅವಘಡ ಸಂಭವಿಸಿದ ಬೆನ್ನಲ್ಲೇ, ಡಾ.ನವೀನ್‌ ಅವರು ತಲೆ ಮರೆಸಿ ಕೊಂಡಿದ್ದರು. ಅವರ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್‌ಗಳಡಿ ವಿವೇಕ್‌ ವಿಹಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ಶನಿವಾರ ರಾತ್ರಿ 11.30ರ ಸುಮಾರಿಗೆ ಕಾಣಿಸಿಕೊಂಡ ಬೆಂಕಿ ನಂತರ ಅಕ್ಕಪಕ್ಕದ ಕಟ್ಟಡಗಳಿಗೂ ವ್ಯಾಪಿಸಿತು. 16 ಅಗ್ನಿ ಶಾಮಕ ವಾಹನಗಳನ್ನು ಬಳಸಿ, ಬೆಂಕಿಯನ್ನು ನಂದಿಸಲಾಯಿತು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್‌) ವಿಭಾಗೀಯ ಅಧಿಕಾರಿ ರಾಜೇಂದ್ರ ಅತ್ವಾಲ್‌ ಹೇಳಿದ್ದಾರೆ.

ಬೆಂಕಿ ಹೊತ್ತಿಕೊಳ್ಳಲು ಕಾರಣ ಗೊತ್ತಾಗಿಲ್ಲ. ಆದರೆ, ಬೆಂಕಿ ಹೊತ್ತಿ ಕೊಂಡಿದ್ದ ವೇಳೆ, ಆಸ್ಪತ್ರೆಯಲ್ಲಿದ್ದ ಆಮ್ಲಜನಕ ಸಿಲಿಂಡರ್‌ಗಳು ಸ್ಫೋಟ ಗೊಂಡ ಪರಿಣಾಮ ಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

‘ಆಸ್ಪತ್ರೆಯಲ್ಲಿ ದಾಖಲಾಗಿದ್ದ 12 ನವಜಾತ ಶಿಶುಗಳನ್ನು ರಕ್ಷಿಸಲಾಗಿದ್ದು, ಏಳು ಶಿಶುಗಳು ಮೃತಪಟ್ಟವು. ಗಾಯಗೊಂಡಿರುವ ಐದು ಶಿಶುಗಳಿಗೆ ಬೇರೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಡಿಎಫ್‌ಎಸ್‌ ಮುಖ್ಯಸ್ಥ ಅತುಲ್‌ ಗರ್ಗ್‌ ತಿಳಿಸಿದ್ದಾರೆ.

ಮೃತ ಶಿಶುಗಳ ದೇಹಗಳನ್ನು ಜಿಟಿಬಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನೆರವೇರಿಸ ಲಾಯಿತು ಎಂದೂ ಅವರು ಹೇಳಿದ್ದಾರೆ.

‘ಅಗ್ನಿ ಶಾಮಕ ಸೇವೆಗಳ ಇಲಾಖೆ ಯಿಂದ ಆಸ್ಪತ್ರೆಯು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ, ಎನ್‌ಒಸಿ ಪಡೆದಿರದಿದ್ದಲ್ಲಿ, ಅದಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳನ್ನು ಪ್ರಕರಣಕ್ಕೆ ಸೇರಿಸಲಾಗುವುದು’ ಎಂದೂ ಹೇಳಿದ್ದಾರೆ.

ಬೆಂಕಿ ಅನಾಹುತ: ಮೂವರ ಸಾವು

ಪೂರ್ವ ದೆಹಲಿಯ ಕೃಷ್ಣಾನಗರದಲ್ಲಿರುವ ನಾಲ್ಕು ಮಹಡಿಯ ವಸತಿ ಕಟ್ಟಡದಲ್ಲಿ ಭಾನುವಾರ ಸಂಭವಿಸಿದ ಬೆಂಕಿ ಅವಘಡದಲ್ಲಿ ಮೂವರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಪ್ರಮೀಳಾ ಶಾದ್‌ (66), ಕೇಶವ ಶರ್ಮಾ (18) ಹಾಗೂ ಅಂಜು ಶರ್ಮಾ (39) ಎಂದು ಗುರುತಿಸಲಾಗಿದೆ. ಘಟನಾ ಸ್ಥಳದಲ್ಲಿದ್ದ 14 ವಾಹನಗಳು ಹಾಗೂ ಎರಡು ಸೈಕಲ್‌ಗಳು ಸುಟ್ಟುಹೋಗಿವೆ.

ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪ್ರಮೀಳಾ ಅವರ ದೇಹ ಸುಟ್ಟು ಕರಕಲಾಗಿದ್ದು, ಮೊದಲನೇ ಮಹಡಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಇತರ ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಅದಾಗಲೇ ಅವರು ಮೃತಪಟ್ಟಿದ್ದರು ಎಂಬುದಾಗಿ ಜಿಟಿಬಿ ಆಸ್ಪತ್ರೆ ವೈದ್ಯರು ಘೋಷಿಸಿದರು ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್‌) ಅಧಿಕಾರಿಗಳು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಮ್ಯಾಕ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಐದು ಅಗ್ನಿ ಶಾಮಕ ವಾಹನಗಳನ್ನು ಬಳಸಿ, ಬೆಂಕಿ ನಂದಿಸಲಾಯಿತು ಎಂದೂ ಅವರು ಹೇಳಿದ್ದಾರೆ.

ಮ್ಯಾಜಿಸ್ಟಿರೀಯಲ್‌ ತನಿಖೆಗೆ ಆದೇಶ

ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಕುರಿತು ದೆಹಲಿ ಸರ್ಕಾರ ಮ್ಯಾಜಿಸ್ಟಿರೀಯಲ್ ತನಿಖೆಗೆ ಭಾನುವಾರ ಆದೇಶಿಸಿದೆ.

ಈ ಕುರಿತು ಆದೇಶ ಹೊರಡಿಸಿರುವ ವಿಭಾಗೀಯ ಆಯುಕ್ತ ಅಶ್ವನಿ ಕುಮಾರ್‌,  ತನಿಖೆ ನಡೆಸುವಂತೆ ಶಾಹದರ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರಿಗೆ ನಿರ್ದೇಶನ ನೀಡಿದ್ದಾರೆ. ಆದಷ್ಟು ಶೀಘ್ರವೇ ತನಿಖಾ ವರದಿ ಸಲ್ಲಿಸುವಂತೆಯೂ ಆದೇಶದಲ್ಲಿ ಸೂಚಿಸಲಾಗಿದೆ.

ಪ್ರಕರಣ ದಾಖಲು: ‘ಆಸ್ಪತ್ರೆಯ ಮಾಲೀಕ ನವೀನ್‌ ಕಿಚಿ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಲೆಮರೆಸಿಕೊಂಡಿರುವ ಅವರನ್ನು ಪತ್ತೆ ಹಚ್ಚಲು ತಂಡಗಳನ್ನು ರಚಿಸಲಾಗಿದೆ’ ಎಂದು ಡಿಸಿಪಿ (ಶಾಹದರ) ಸುರೇಂದ್ರ ಚೌಧರಿ ಹೇಳಿದ್ದಾರೆ.

‘ಅಗ್ನಿ ಶಾಮಕ ಸೇವೆಗಳ ಇಲಾಖೆಯಿಂದ ಆಸ್ಪತ್ರೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಪಡೆದಿರುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವೇಳೆ, ಎನ್‌ಒಸಿ ಪಡೆದಿರದಿದ್ದಲ್ಲಿ, ಅದಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್‌ಗಳನ್ನು ಸೇರ್ಪಡೆ ಮಾಡಲಾಗುವುದು’ ಎಂದೂ ಹೇಳಿದ್ದಾರೆ.

ತನಿಖೆ: ‘ಅವಘಡಕ್ಕೆ ಕಾರಣ ಗೊತ್ತಾಗಿಲ್ಲ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಲಾಗುವುದು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಅವಘಡಕ್ಕೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಸೌರಭ್‌ ಭಾರದ್ವಾಜ್‌ ಹೇಳಿದ್ದಾರೆ.

ರಕ್ಷಣೆಗೆ ಧಾವಿಸಿದ ಜನರು: ಬೆಂಕಿ ಅವಘಡ ಸಂಭವಿಸಿದ್ದು ಗೊತ್ತಾಗುತ್ತಿದ್ದಂತೆಯೇ, ಶಹೀದ್‌ ಸೇವಾ ದಳದ ಕಾರ್ಯಕರ್ತರು ಹಾಗೂ ಸ್ಥಳೀಯ ಕೆಲ ನಿವಾಸಿಗಳು ಘಟನಾ ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯ ಕೈಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT