ಕೊಚ್ಚಿ/ತಿರುವನಂತಪುರ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ನಟಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಮಲಯಾಳಂನ ಖ್ಯಾತ ನಟರಾದ ಜಯಸೂರ್ಯ ಮತ್ತು ಮಣಿಯನ್ ಪಿಳ್ಳ ರಾಜು ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ರಾಜು ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ರ ಅಡಿ ದಿ ಪೋರ್ಟ್ ಕೊಚ್ಚಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಎರ್ನಾಕುಲಂನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಿರುವನಂತಪುರದ ಕಂಟೋನ್ಮೆಂಟ್ ಪೊಲೀಸ್ ಠಾಣೆಯಲ್ಲಿ ಅದೇ ಸೆಕ್ಷನ್ ಅಡಿ ಜಯಸೂರ್ಯ ವಿರುದ್ಧ ಪ್ರಕರಣ ದಾಖಲಾಗಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ.
ಮಲಯಾಳ ಚಿತ್ರರಂಗದಲ್ಲಿ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಕುರಿತಂತೆ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿ ಬಹಿರಂಗಗೊಂಡ ಬಳಿಕ ಮಾಲಿವುಡ್‌ನ ಹಲವು ನಟರು ಮತ್ತು ನಿರ್ದೇಶಕರ ವಿರುದ್ಧ ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ಮಲಯಾಳದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿಯೊಬ್ಬರು, ಖ್ಯಾತ ನಟರಾದ ಮುಕೇಶ್, ಜಯಸೂರ್ಯ, ಮಣಿಯನ್ ಪಿಳ್ಳ ರಾಜು ಮತ್ತು ಕಲಾವಿದರ ಸಂಘದಲ್ಲಿ ಪ್ರಮುಖ ಹುದ್ದೆ ಹೊಂದಿರುವ ಇಡವೇಲ ಬಾಬು ವಿರುದ್ಧ ಆರೋಪ ಮಾಡಿದ್ದಾರೆ.
'ಮಲಯಾಳ ಚಲನಚಿತ್ರೋದ್ಯಮದ ನಟರಾದ ಮುಖೇಶ್, ಮಣಿಯನ್ ಪಿಳ್ಳ ರಾಜು, ಇಡವೇಲ ಬಾಬು, ಜಯಸೂರ್ಯ, ಅಡ್ವೊಕೇಟ್ ವಿ.ಎಸ್. ಚಂದ್ರಶೇಖರನ್, ಪ್ರೊಡಕ್ಷನ್ ಕಂಟ್ರೋಲರ್ ನೋಬಲ್ ಮತ್ತು ವಿಚು
ಅವರಿಂದ ನಾನು ಅನುಭವಿಸಿದ ದೈಹಿಕ ಮತ್ತು ಮೌಖಿಕ ದೌರ್ಜನ್ಯದ ಘಟನೆಗಳ ಸರಣಿಯನ್ನು ಫೇಸ್‌ಬುಕ್ ಪೋಸ್ಟ್‌ನಲ್ಲಿ ಹಂಚಿಕೊಳ್ಳುತ್ತಿದ್ದೇನೆ’ಎಂದು ನಟಿ ಹೇಳಿದ್ದಾರೆ.
2013ರಲ್ಲಿ ಸಿನಿಮಾವೊಂದರಲ್ಲಿ ನಟಿಸುವ ವೇಳೆ ನನ್ನ ಮೇಲೆ ದೈಹಿಕ ಮತ್ತು ಮೌಖಿಕ ದೌರ್ಜನ್ಯ ನಡೆಯಿತು. ಆದರೂ ನಾನು ಆ ಪ್ರಾಜೆಕ್ಟ್‌ಗೆ ಸಹಕಾರ ನೀಡಿ, ನಟಿಸುವುದನ್ನು ಮುಂದುವರಿಸಿದೆ. ಆದರೆ, ದೌರ್ಜನ್ಯ ಸಹಿಸಲಸಾಧ್ಯವಾದಮಟ್ಟಿಗೆ ಹೋಯಿತು ಎಂದು ಬರೆದುಕೊಂಡಿದ್ದಾರೆ.