ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಗೆ ಎಐಸಿಸಿ ಚುಕ್ಕಾಣಿ ಹಿಡಿದು ಎಂಟು ತಿಂಗಳು: ಸಿಡಬ್ಲ್ಯುಸಿ ಸದಸ್ಯರ ನೇಮಕಕ್ಕೆ ಗ್ರಹಣ

Published 25 ಜೂನ್ 2023, 23:44 IST
Last Updated 25 ಜೂನ್ 2023, 23:44 IST
ಅಕ್ಷರ ಗಾತ್ರ

ನವದೆಹಲಿ: ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದು ಸೋಮವಾರಕ್ಕೆ ಎಂಟು ತಿಂಗಳು ಪೂರ್ಣಗೊಂಡರೂ, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ (ಸಿಡಬ್ಲ್ಯುಸಿ) ನಾಮನಿರ್ದೇಶನ ಪ್ರಕ್ರಿಯೆಯು ಇನ್ನೂ ನನೆಗುದಿಗೆ ಬಿದ್ದಿದೆ.

ಛತ್ತೀಸಗಢದ ರಾಯಪುರದಲ್ಲಿ ಪಕ್ಷದ 85ನೇ ಮಹಾಅಧಿವೇಶನದ ಭಾಗವಾಗಿ ನಡೆದ ಕಾಂಗ್ರೆಸ್‌ ಚಾಲನಾ ಸಮಿತಿ ಸಭೆಯು ಸಿಡಬ್ಲ್ಯುಸಿಗೆ ಸದಸ್ಯರ ನೇಮಕಕ್ಕೆ ಚುನಾವಣೆಯನ್ನು ನಡೆಸದಿರಲು ನಿರ್ಧರಿಸಿತ್ತು. ಈ ಸಮಿತಿಗೆ ಸದಸ್ಯರ ನಾಮನಿರ್ದೇಶನ ಮಾಡುವ ಸಂಪೂರ್ಣ ಅಧಿಕಾರವನ್ನು ಖರ್ಗೆ ಅವರಿಗೆ ಸರ್ವಾನುಮತದಿಂದ ನೀಡಿತ್ತು. ಆದರೆ, ಕಾರ್ಯಕಾರಿ ಸಮಿತಿಯು ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ.

‘ಶೀಘ್ರವೇ, ಸಮಿತಿಗೆ ಸದಸ್ಯರ ನಾಮನಿರ್ದೇಶನವನ್ನು ಪ್ರಕಟಿಸಲಾಗುತ್ತದೆ. ಈ ನಿಟ್ಟಿನಲ್ಲಿ ಅಂತಿಮ ಹಂತದ ಸಮಾಲೋಚನೆಗಳು ನಡೆಯುತ್ತಿವೆ. ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಇಚ್ಛಿಸಿರುವ ನಾಯಕರು ಭಾರಿ ಲಾಬಿಯನ್ನೂ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ. 

ಪ್ರಸ್ತುತ ಖರ್ಗೆ ಅವರು ಉನ್ನತ ನಾಯಕರ ಸಮಿತಿಯ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಲ್ಲಿ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದ ವೇಳೆ ನೇಮಕಗೊಂಡಿದ್ದ ಕಾರ್ಯಕಾರಿ ಸಮಿತಿಯ ಸದಸ್ಯರೇ ಇದ್ದಾರೆ.  

ಸಮಿತಿ ರಚನೆಗೆ ವಿಳಂಬ ಏಕೆ?: ಸಮಿತಿ ರಚನೆಯ ವಿಳಂಬಕ್ಕೆ ಹಲವು ಕಾರಣಗಳಿವೆ. ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆ ಮತ್ತು ಸರ್ಕಾರ ರಚನೆಗೆ ನಡೆದ ಕಸರತ್ತು ಕೂಡ ಈ ಪೈಕಿ ಒಂದಾಗಿದೆ. ಮತ್ತೊಂದೆಡೆ ಒಬಿಸಿ, ಎಸ್‌.ಸಿ ಮತ್ತು ಎಸ್‌.ಟಿ ಸೇರಿದಂತೆ ಯುವಕರು, ಮಹಿಳೆಯರಿಗೆ ಆದ್ಯತೆ ನೀಡಬೇಕಿರುವುದು ಕಸರತ್ತನ್ನು ಮತ್ತಷ್ಟು ಜಟಿಲಗೊಳಿಸಿದೆ ಎನ್ನುತ್ತವೆ ಮೂಲಗಳು.

ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದ್ದು, ಸಮಿತಿಯ ಸದಸ್ಯರ ಸಂಖ್ಯೆಯನ್ನು 25ರಿಂದ 35ಕ್ಕೆ ಹೆಚ್ಚಿಸಲಾಗಿದೆ. ಅಲ್ಲದೇ, ಹಿಂದುಳಿದ ವರ್ಗ, ದಲಿತರು, ಬುಡಕಟ್ಟು ಜನರು, ಅಲ್ಪಸಂಖ್ಯಾತರು, ಮಹಿಳೆಯರು ಮತ್ತು 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಾಯಕರಿಗೆ ಈ ಸಮಿತಿಯಲ್ಲಿ ಶೇ 50ರಷ್ಟು ಮೀಸಲಾತಿ ಕಲ್ಪಿಸಬೇಕಿದೆ.

ಎಐಸಿಸಿ ಅಧ್ಯಕ್ಷರ ಆಯ್ಕೆ ಬಳಿಕ ಕಾಂಗ್ರೆಸ್‌ ಮಹಾಅಧಿವೇಶನದ ನಡೆಯಲಿದ್ದು, ಇದಾದ ಕೆಲವು ತಿಂಗಳಲ್ಲಿ ಸಿಡಬ್ಲ್ಯುಸಿಗೆ ಚುನಾವಣೆ ನಡೆಯುವುದು ಕಾಂಗ್ರೆಸ್‌ ಪಕ್ಷದಲ್ಲಿ ವಾಡಿಕೆಯಾಗಿತ್ತು. ಕಳೆದ ವರ್ಷದ ಅಕ್ಟೋಬರ್‌ 26ರಂದು ಖರ್ಗೆ ಪಕ್ಷದ ಚುಕ್ಕಾಣಿ ಹಿಡಿದರು. ಆದರೆ, ಮಹಾಅಧಿವೇಶನ ನಡೆದಿದ್ದು ಫೆಬ್ರುವರಿಯಲ್ಲಿ. ಬಳಿಕ ರಾಹುಲ್‌ ಗಾಂಧಿ ‘ಭಾರತ್‌ ಜೋಡೊ’ ಆರಂಭಿಸಿದರು. ಇದೇ ವೇಳೆ ಸಂಸತ್‌ ಅಧಿವೇಶನವೂ ಶುರುವಾಯಿತು. ಹಾಗಾಗಿ, ವಿಳಂಬವಾಗಿದೆ ಎನ್ನುತ್ತವೆ ಮೂಲಗಳು.

ಜೊತೆಗೆ, ಕರ್ನಾಟಕ ವಿಧಾನಸಭಾ ಚುನಾವಣೆ ಮತ್ತು ಸರ್ಕಾರದ ರಚನೆಯಲ್ಲಿ ಖರ್ಗೆ ಮುಳುಗಿ ಹೋದರು. ಈ ನಡುವೆಯೇ ರಾಹುಲ್‌ ಗಾಂಧಿ ಅಮೆರಿಕ ಪ್ರವಾಸಕ್ಕೆ ತೆರಳಿದ್ದು ಕೂಡ ವಿಳಂಬಕ್ಕೆ ಕಾರಣ ಎಂಬುದು ಮೂಲಗಳ ವಿವರಣೆ.

ಆದರೆ, ಖರ್ಗೆ ಅವರು ಬಲಿಷ್ಠ ಕಾರ್ಯಕಾರಿ ಸಮಿತಿಯ ರಚನೆಯೊಂದಿಗೆ ಕಾಂಗ್ರೆಸ್‌ಗೆ ಹೊಸ ಸ್ವರೂಪ ನೀಡುವ ಉಮೇದಿನಲ್ಲಿದ್ದಾರೆ. ಮತ್ತೊಂದೆಡೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ  ಪ್ರಿಯಾಂಕಾ ಗಾಂಧಿ ಅವರು ಹೊಸ ಜವಾಬ್ದಾರಿಯ ನಿರೀಕ್ಷೆಯಲ್ಲಿದ್ದಾರೆ.

ಇದಕ್ಕೆ ಪೂರಕವಾಗಿಯೇ ಪ್ರಿಯಾಂಕಾ ಸೇರಿದಂತೆ ಇಬ್ಬರು ಉಪಾಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್‌ ಚಿಂತಿಸಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಸದ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಆಗಿರುವ ಕೆ.ಸಿ. ವೇಣುಗೋಪಾಲ್‌ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲು ಖರ್ಗೆ ಉತ್ಸುಕರಾಗಿದ್ದಾರೆ. ಆದರೆ, ಅವರು ಹಾಲಿ ಹುದ್ದೆಯಲ್ಲಿಯೇ ಮುಂದುವರಿಯಲು ಇಚ್ಛಿಸಿದ್ದಾರೆ ಎನ್ನುತ್ತವೆ ಮೂಲಗಳು.

ವಲಯವಾರು ಅಧ್ಯಕ್ಷರ ನೇಮಕಕ್ಕೂ ಈ ಹಿಂದೆ ಕಾಂಗ್ರೆಸ್‌ ನಿರ್ಧರಿಸಿತ್ತು. ಆ ಮೂಲಕ ಆಯಾ ವಲಯಕ್ಕೆ ಒಳಪಡುವ ರಾಜ್ಯಗಳಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಗೊಳಿಸುವುದು ಇರಾದೆ ಇದರ ಹಿಂದಿತ್ತು. ಪ್ರಿಯಾಂಕಾ ಅವರಿಗೆ ಉತ್ತರ ಭಾರತದ ಜವಾಬ್ದಾರಿ ನೀಡುವ ಸಾಧ್ಯತೆಯೂ ಇದೆ.

ಈಗಾಗಲೇ ಖರ್ಗೆ ಅವರು ಗುಜರಾತ್, ತ್ರಿಪುರಾ ಸೇರಿದಂತೆ ಹಲವು ರಾಜ್ಯಗಳ ಕಾಂಗ್ರೆಸ್‌ ಘಟಕಗಳ ಪುನರ್‌ ರಚನೆಗೆ ಚಾಲನೆ ನೀಡಿದ್ದು, ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಯನ್ನೂ  ಆರಂಭಿಸಿದ್ದಾರೆ. ಜೊತೆಗೆ, ಹಲವು ರಾಜ್ಯಗಳ ಉಸ್ತುವಾರಿಗಳನ್ನೂ ಬದಲಾಯಿಸಿದ್ದಾರೆ. ಈ ಪೈಕಿ ಕೆಲವರಿಗೆ ಹೊಸ ಹೊಣೆಗಾರಿಕೆ ಲಭಿಸಿದ್ದರೆ; ಉಳಿದವರನ್ನು ಜವಾಬ್ದಾರಿಯಿಂದ ಬಿಡುಗಡೆಗೊಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT