ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಶ್ಚಿಮ ಬಂಗಾಳ | ಮಮತಾ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದ್ದಾರೆ: ಪ್ರಭು ಲಾಲ್ ಸೈನಿ

Published 24 ಮೇ 2024, 2:43 IST
Last Updated 24 ಮೇ 2024, 2:43 IST
ಅಕ್ಷರ ಗಾತ್ರ

ಜೈಪುರ: ಒಬಿಸಿಗೆ ಸಂಬಂಧಪಟ್ಟಂತೆ ಕಲ್ಕತ್ತ ಹೈಕೋರ್ಟ್‌ ನೀಡಿರುವ ಆದೇಶವನ್ನು ಧಿಕ್ಕರಿಸುವ ಮೂಲಕ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ರಾಜಸ್ಥಾನ ಬಿಜೆಪಿ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಸಚಿವ ಪ್ರಭು ಲಾಲ್‌ ಸೈನಿ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ತುಷ್ಟೀಕರಣ ರಾಜಕಾರಣದ ಮೂಲಕ ದೇಶದಲ್ಲಿ ವಿಭಜನೆಯನ್ನು ಸೃಷ್ಟಿಸಲು ಮತ್ತು ಪ್ರಜಾಪ್ರಭುತ್ವವನ್ನು ವಿಘಟಿಸುವ ದುರುದ್ದೇಶಪೂರಿತ ಪ್ರಯತ್ನವನ್ನು ನಡೆಸಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಅವಕಾಶವಿಲ್ಲ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಅಲ್ಪಸಂಖ್ಯಾತ ಸಮುದಾಯಗಳಿಗೆ ಶೇ 10ರಷ್ಟು ಮೀಸಲಾತಿ ನೀಡುವುದಾಗಿ ಬ್ಯಾನರ್ಜಿ ಭರವಸೆ ನೀಡಿದ್ದರು. ತಮ್ಮ ಈ ಹಠಮಾರಿತನದಿಂದಾಗಿ ಹೈಕೋರ್ಟ್‌ ಆದೇಶವನ್ನು ಅವರು ಬಹಿರಂಗವಾಗಿ ಅಗೌರವಿಸಿದ್ದಾರೆ ಎಂದು ಸೈನಿ ಹೇಳಿದ್ದಾರೆ.

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ತುಷ್ಟೀಕರಣದ ಹೆಸರಿನಲ್ಲಿ ನ್ಯಾಯಾಲಯದ ಘನತೆ ಮತ್ತು ನಂಬಿಕೆಯ ಮೇಲೆ ದಾಳಿ ನಡೆಸಿದೆ. ಪಶ್ಚಿಮ ಬಂಗಾಳದಲ್ಲಿ ನಿರ್ದಿಷ್ಟ ಸಮುದಾಯದ ಜನರಿಗೆ ವಿಶೇಷ ಗಮನ ನೀಡಲಾಗುತ್ತಿದೆ. ಆದರೆ, ಹಿಂದೂಗಳ ಮೇಲಿನ ದೌರ್ಜನ್ಯಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಜಿತೇಂದ್ರ ಗೋಥ್ವಾಲ್‌ ಆರೋಪಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹಲವು ವರ್ಗಗಳಿಗೆ ನೀಡಲಾಗಿದ್ದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸ್ಥಾನಮಾನವನ್ನು ಕಲ್ಕತ್ತ ಹೈಕೋರ್ಟ್‌ ಬುಧವಾರ ರದ್ದುಗೊಳಿಸಿದೆ. ರಾಜ್ಯದಲ್ಲಿನ ಸೇವಾ ಮತ್ತು ಹುದ್ದೆಗಳ ಭರ್ತಿ ಸಂಬಂಧ ರಾಜ್ಯ ಸರ್ಕಾರ 2012ರಲ್ಲಿ ಕಾಯ್ದೆ ರೂಪಿಸಿ ಹಲವು ವರ್ಗಗಳನ್ನು ಒಬಿಸಿ ವ್ಯಾಪ್ತಿಗೆ ತಂದು ಮೀಸಲಾತಿ ಜಾರಿಗೊಳಿಸಿತ್ತು. ಅದನ್ನು ಹೈಕೋರ್ಟ್‌ ಕಾನೂನು ಬಾಹಿರ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT