ಕೋಲ್ಕತ್ತ: ‘ರಾಜ್ಯದ ಜನರ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಆದರೆ, ಸಂತ್ರಸ್ತೆಗೆ ನ್ಯಾಯ ಹಾಗೂ ಜನಸಾಮಾನ್ಯರಿಗೆ ಆರೋಗ್ಯ ಸೇವೆ ಸಿಗುವಂತಾಗಬೇಕು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಮಾತುಕತೆ ನಡೆಸಲು ಪ್ರತಿಭಟನೆ ನಿರತ ವೈದ್ಯರಿಗಾಗಿ ಎರಡು ಗಂಟೆಗಳಷ್ಟು ಕಾದ ನಂತರ ಸುದ್ದಿಗೋಷ್ಠಿ ನಡೆಸಿದ ಮಮತಾ ಬ್ಯಾನರ್ಜಿ ಈ ಮಾತು ಹೇಳಿದರು.
ಬಿಜೆಪಿ ಮತ್ತು ಎಡಪಕ್ಷಗಳ ವಿರುದ್ಧ ಹರಿಹಾಯ್ದ ಅವರು, ‘ಮಾತುಕತೆಗಾಗಿ ಕರೆದಿದ್ದ ಸಭೆಯನ್ನು ಬಹಿಷ್ಕರಿಸುವಂತೆ ಪ್ರತಿಭಟನೆ ನಿರತ ವೈದ್ಯರಿಗೆ ಪ್ರತಿಪಕ್ಷ ಗಳು ಸೂಚನೆ ನೀಡುತ್ತಿವೆ’ ಎಂದು ಆರೋಪಿಸಿದರು.
‘ಅವರಿಗೆ (ವಿರೋಧ ಪಕ್ಷಗಳಿಗೆ) ನ್ಯಾಯ ಬೇಕಾಗಿಲ್ಲ, ಅವರಿಗೆ ಮುಖ್ಯಮಂತ್ರಿ ಕುರ್ಚಿ ಬೇಕು. ನನಗೆ ಮುಖ್ಯಮಂತ್ರಿ ಸ್ಥಾನ ಬೇಕಿಲ್ಲ, ಆದರೆ ಜನರಿಗೆ ನ್ಯಾಯ ಸಿಗಬೇಕು. ತಿಲೋತ್ತಮಗೆ (ಅತ್ಯಾಚಾರಕ್ಕೆ ಒಳಗಾಗಿ ಕೊಲೆಗೀಡಾದ ವೈದ್ಯೆಯ ಕಲ್ಪಿತ ಹೆಸರು) ನ್ಯಾಯ ಸಿಗಬೇಕು’ ಎಂದ ಅವರು, ಕರ್ತವ್ಯಕ್ಕೆ ಮರಳುವಂತೆ ವೈದ್ಯರಿಗೆ ಕೈಮುಗಿದು ಒತ್ತಾಯಿಸಿದರು.
ರಾಜೀನಾಮೆ ಕೇಳಿಲ್ಲ: ‘ನಾವು ಮುಖ್ಯಮಂತ್ರಿಯ ರಾಜೀನಾಮೆಯನ್ನು ಕೇಳಿಯೇ ಇಲ್ಲ. ಸಂತ್ರಸ್ತೆಗೆ ನ್ಯಾಯ ಸಿಗಬೇಕೆಂಬುದಷ್ಟೇ ನಮ್ಮ ಬೇಡಿಕೆ. ಸಭೆ ನಡೆಯದಿದ್ದಕ್ಕೆ ನಮಗೂ ಬೇಸರವಿದೆ. ಸರ್ಕಾರದ ಪ್ರತಿಕ್ರಿಯೆಗಾಗಿ ನಾವು ಇನ್ನೂ ಕಾಯುತ್ತೇವೆ’ ಎಂದು ಪ್ರತಿಭಟನನಿರತ ವೈದ್ಯರು ಪ್ರತಿಕ್ರಿಯಿಸಿದರು.
ಮಮತಾ ಬ್ಯಾನರ್ಜಿ ಹೇಳಿದ್ದೇನು
* 33 ದಿನಗಳಿಂದ ನಾವು ಸಾಕಷ್ಟು ಅವಮಾನಗಳನ್ನು ಸಹಿಸಿಕೊಂಡಿದ್ದೇವೆ. ಆದರೆ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಧಿಕ್ಕರಿಸಿ, ಕರ್ತವ್ಯಕ್ಕೆ ಹಾಜರಾಗದಿರುವ ವೈದ್ಯರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ
* ಕಿರಿಯ ವೈದ್ಯರ ಬೇಡಿಕೆಯಂತೆ ಮಾತುಕತೆಯ ನೇರ ಪ್ರಸಾರ ಮಾಡಲು ಸಾಧ್ಯವಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ ಹಾಗೆ ಮಾಡಲು ಬರುವುದಿಲ್ಲ
* ಕಿರಿಯ ವೈದ್ಯರ ಪ್ರತಿಭಟನೆಯಿಂದ ರಾಜ್ಯದಲ್ಲಿ 27 ರೋಗಿಗಳು ಮೃತಪಟ್ಟಿ ದ್ದಾರೆ. ಸುಮಾರು 7 ಲಕ್ಷ ಜನರು ಬಳಲುತ್ತಿದ್ದಾರೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ವೈದ್ಯರು ಕರ್ತವ್ಯಕ್ಕೆ ಹಾಜರಾಗಬೇಕು
ನೇರ ಪ್ರಸಾರಕ್ಕೆ ಪಟ್ಟು; ನಡೆಯದ ಸಭೆ
ಮಾತುಕತೆಯ ನೇರ ಪ್ರಸಾರ ಮಾಡಬೇಕು ಎಂಬ ಬೇಡಿಕೆಯನ್ನು ಕಿರಿಯ ವೈದ್ಯರು ಸಡಿಲಿಸದ ಪರಿಣಾಮ, ಸರ್ಕಾರದ ಜತೆಗೆ ಗುರುವಾರವೂ ಸಭೆ ನಡೆಯಲಿಲ್ಲ. ಇದರಿಂದ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಬಿಕ್ಕಟ್ಟು ಮುಂದುವರಿದಿದೆ.
ಇಲ್ಲಿನ ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ 9ರಂದು ನಡೆದಿದ್ದ ವೈದ್ಯ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ– ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಸಮ್ಮುಖದಲ್ಲಿಯೇ ಸಭೆ ನಡೆಯಬೇಕು ಎಂಬ ಪ್ರತಿಭಟನನಿರತ ವೈದ್ಯರ ಬೇಡಿಕೆಗೆ ಸರ್ಕಾರ ಸಮ್ಮತಿಸಿತ್ತು. ಹೀಗಾಗಿಯೇ ಗುರುವಾರ ಸಂಜೆ 5 ಗಂಟೆಗೆ ನಿಗದಿಯಾಗಿದ್ದ ಸಭೆಗೆ ಹಾಜರಾಗಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಕಿರಿಯ ವೈದ್ಯರ ಆಗಮನಕ್ಕಾಗಿ ಸುಮಾರು ಎರಡು ಗಂಟೆ ಕಾಯ್ದರು.
ಸಂಜೆ 5.25ಕ್ಕೆ ಸಚಿವಾಲಯ ತಲುಪಿದ ಪ್ರತಿಭಟನಕಾರರು, ಗಂಟೆಗೂ ಹೆಚ್ಚು ಕಾಲ ಪ್ರವೇಶ ದ್ವಾರದಲ್ಲಿಯೇ ನಿಂತರು. ಮಾತುಕತೆಯನ್ನು ನೇರ ಪ್ರಸಾರ ಮಾಡಬೇಕು ಎಂಬ ತಮ್ಮ ಷರತ್ತನ್ನು ಸಡಿಲಿಸಲು ಕಿರಿಯ ವೈದ್ಯರು ಸಮ್ಮತಿಸಲಿಲ್ಲ. ಎರಡೂ ಕಡೆಯವರು ತಮ್ಮ ನಿಲುವುಗಳಿಗೆ ದೃಢವಾಗಿ ನಿಂತ ಪರಿಣಾಮ ಗುರುವಾರ ಯಾವುದೇ ಮಾತುಕತೆ ನಡೆಯಲಿಲ್ಲ.
ಕಸರತ್ತು: ಡಿಜಿಪಿ ರಾಜೀವ್ ಕುಮಾರ್, ಎಡಿಜಿ (ದಕ್ಷಿಣ ಬಂಗಾಳ) ಸುಪ್ರತಿಮ್ ಸರ್ಕಾರ್ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ವೈದ್ಯರ ನಿಯೋಗ ಮತ್ತು ಇತರ ಅಧಿಕಾರಿಗಳ ಜತೆ ನಿರಂತರ ಮಾತುಕತೆ ನಡೆಸಿ ಮನವೊಲಿಸಲು ನಡೆಸಿದ ಪ್ರಯತ್ನಗಳು ಫಲ ನೀಡಲಿಲ್ಲ.
ಮುಖ್ಯ ಕಾರ್ಯದರ್ಶಿ ಮನೋಜ್ ಪಂತ್, ‘ಮಾತುಕತೆಯ ನೇರ ಪ್ರಸಾರ ಸಾಧ್ಯವಿಲ್ಲ ಎಂಬುದನ್ನು ಕಿರಿಯ ವೈದ್ಯರಿಗೆ ಕಳುಹಿಸಿದ್ದ ಪತ್ರದಲ್ಲಿ ಉಲ್ಲೇಖಿಸಿದ್ದೆ. ಆದರೆ ಸಭೆಯ ಸಂವಾದವನ್ನು ರೆಕಾರ್ಡ್ ಮಾಡಿ, ದಾಖಲೀಕರಣ ಮಾಡುತ್ತೇವೆ ಎಂದೂ ಭರವಸೆ ನೀಡಿದೆವು’ ಎಂದರು.
ಈ ಬಿಕ್ಕಟ್ಟು ಇಂದು ಬಗೆಹರಿಯಲಿದೆ ಎಂದು ನಿರೀಕ್ಷೆಸುತ್ತಿದ್ದ ಜನರಲ್ಲಿ ನಾನು ಕ್ಷಮೆ ಕೋರುತ್ತೇನೆ.–ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.