ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ ಸಂಘರ್ಷ | ಗ್ರಾಮಸ್ಥರ ರಕ್ಷಣೆಗಿಳಿದ ತರುಣ ‘ಸ್ವಯಂ ಸೇವಕರು’

ಮಣಿಪುರ: ಆಯುಧಗಳೊಂದಿಗೆ ಯುವಕರ ಗುಂಪಿನ ಗಸ್ತು * ಎನ್‌ಸಿಸಿ ಮಾದರಿ ತರಬೇತಿ
Published 6 ಮೇ 2024, 0:28 IST
Last Updated 6 ಮೇ 2024, 0:28 IST
ಅಕ್ಷರ ಗಾತ್ರ

ಇಂಫಾಲ್‌/ಚುರಚಾಂದಪುರ: ಮಣಿಪುರದಲ್ಲಿ ಮೈತೇಯಿ ಮತ್ತು ಕುಕಿಗಳ ಸಂಘರ್ಷದಿಂದ ಬಸವಳೆದಿರುವ ಇಂಫಾಲ್‌ ಕಣಿವೆಯ ಕೌತ್ರುಕ್ ಗ್ರಾಮದಲ್ಲಿ ಶಸ್ತ್ರಸಜ್ಜಿತ ಯುವಕರ ಗುಂಪುಗಳು ನಿತ್ಯ ಬೆಳಿಗ್ಗೆ ಮತ್ತು ರಾತ್ರಿ ಗಸ್ತು ತಿರುಗುವ ಕಾರ್ಯದಲ್ಲಿ ತೊಡಗಿವೆ.

ಕಾದಾಡುತ್ತಿರುವ ಬಣಗಳಿಂದ ತಮ್ಮ ಗ್ರಾಮದ ನಿವಾಸಿಗಳನ್ನು ರಕ್ಷಿಸುವ ಉದ್ದೇಶವನ್ನು ಈ ಯುವಕರ ಪಡೆ ಹೊಂದಿದೆ. ಈ ಗುಂಪಿನಲ್ಲಿರುವ ಬಹುತೇಕರು 20ರಿಂದ 30 ವರ್ಷದ ತರುಣರು. ಇವರು ತಮ್ಮನ್ನು ಸ್ವಯಂ ಸೇವಕರು ಎಂದು ಗುರುತಿಸಿಕೊಂಡಿದ್ದಾರೆ.

ರಾಜ್ಯದ ಹಲವು ಹಳ್ಳಿಗಳಲ್ಲಿ ‘ಗ್ರಾಮ ಸ್ವಯಂಸೇವಕರು’, ‘ಗ್ರಾಮ ರಕ್ಷಣಾ ಪಡೆ’ ಮತ್ತು ‘ಗ್ರಾಮ ಸಂರಕ್ಷಣಾ ಪಡೆ’ ಎಂಬ ಹೆಸರಿನ ಸ್ವಯಂ ಸೇವಕರ ಗುಂಪುಗಳು ಕಾರ್ಯ ನಿರ್ವಹಿಸುತ್ತಿವೆ. ಅಂತಹ ಹಳ್ಳಿಗಳ ಪೈಕಿ ಕೌತ್ರುಕ್ ಸಹ ಒಂದು.

ಈ ಗುಂಪುಗಳು ಯಾವುದೇ ಭದ್ರತಾ ಸಂಸ್ಥೆ ಅಥವಾ ಸಶಸ್ತ್ರ ಪಡೆಗಳ ಜತೆಗೆ ಸಂಬಂಧ ಹೊಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಗುಂಪಿನ ಸದಸ್ಯರು ಯುದ್ಧ ತಂತ್ರದ ತರಬೇತಿ ಪಡೆದಿದ್ದು, ಜನಾಂಗೀಯ ಹಿಂಸಾಚಾರದಿಂದ ಗ್ರಾಮದ ಜನರನ್ನು ರಕ್ಷಿಸಲು ಪ್ರತಿಜ್ಞೆ ಮಾಡಿದ್ದಾರೆ. ಸಮವಸ್ತ್ರದಲ್ಲಿರುವ ಅವರು ಮರಳಿನ ಚೀಲಗಳಿಂದ ಬಂಕರ್‌ಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವರು ಲಾಠಿ ಮತ್ತು ರೈಫಲ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳೊಂದಿಗೆ ಗಸ್ತು ತಿರುಗುವುದನ್ನು ಕಾಣಬಹುದಾಗಿದೆ. ಅವರ ಬಳಿ ಕೆಲ ದೇಶೀಯ ನಿರ್ಮಿತ ಶಸ್ತ್ರಾಸ್ತ್ರಗಳೂ ಇವೆ. ಅವುಗಳಲ್ಲಿ ಕೆಲವು ಕದ್ದ ಶಸ್ತ್ರಗಳಾಗಿದ್ದರೆ, ಇನ್ನೂ ಕೆಲವು ಕಳ್ಳಸಾಗಣೆ ಮಾಡಿದ ಶಸ್ತ್ರಾಸ್ತ್ರಗಳಾಗಿವೆ.

ಪಾಳಿ ವ್ಯವಸ್ಥೆ:

ಗಸ್ತು ಕಾರ್ಯವನ್ನು ಈ ಗುಂಪುಗಳ ಸದಸ್ಯರು ಪಾಳಿ ವ್ಯವಸ್ಥೆಯ ಮೂಲಕ ನಿರ್ವಹಿಸುತ್ತಿದ್ದಾರೆ. ಆರರಿಂದ ಏಳು ಗಂಟೆಗೆ ಒಂದು ಪಾಳಿಯಂತೆ, ಐದರಿಂದ ಆರು ಜನರ ಗುಂಪುಗಳು ಕೆಲಸ ಮಾಡುತ್ತಿವೆ. ಹೆದ್ದಾರಿ, ಹಳ್ಳಿಗಳ ರಸ್ತೆಗಳು, ಬೆಟ್ಟ, ಗುಡ್ಡಗಳು ಮತ್ತು ದಟ್ಟ ಕಾಡುಗಳಲ್ಲಿ ಹಾದುಹೋಗುವ ಕಿರಿದಾದ ರಸ್ತೆಗಳ ಮೇಲೆ ಈ ಗುಂಪುಗಳ ಸದಸ್ಯರು ನಿಗಾವಹಿಸಿದ್ದಾರೆ.

‘ಭದ್ರತಾ ಪಡೆಗಳು ನಮ್ಮನ್ನು ಸಮರ್ಥವಾಗಿ ರಕ್ಷಿಸುವ ಕಾರ್ಯ ಮಾಡಿಲ್ಲ. ಹೀಗಾಗಿ ನಮ್ಮ ಸುರಕ್ಷತೆಯ ಖಾತರಿಗೆ ಅವರನ್ನು ನಂಬಲು ಸಾಧ್ಯವಿಲ್ಲ. ಆದ್ದರಿಂದ ಆ ಕೆಲಸವನ್ನು ನಾವೇ ಮಾಡಬೇಕಾಗಿದೆ. ನಮ್ಮ ಶಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ನಾವು ಗಸ್ತು ತಿರುಗುತ್ತಿದ್ದೇವೆ’ ಎಂದು ಗ್ರಾಮದ ಸ್ವಯಂ ಸೇವಕರೊಬ್ಬರು ಮಾಹಿತಿ ನೀಡಿದರು.

‘ಹಿಂದೆ ನಾವು ನಿಗಾವಹಿಸಲು ಡ್ರೋನ್‌ಗಳನ್ನೂ ಬಳಸುತ್ತಿದ್ದೆವು. ಆದರೆ ಈಗ ಕೇಂದ್ರ ಪಡೆಗಳು ಜಾಮರ್‌ಗಳನ್ನು ಅಳವಡಿಸಿವೆ. ಹೀಗಾಗಿ ಡ್ರೋನ್‌ಗಳನ್ನು ನಿರ್ವಹಿಸುವುದು ಕಷ್ಟವಾಗಿದೆ’ ಎಂದು ಅವರು ವಿವರಿಸಿದರು.

ಉದ್ಯೋಗ, ಓದು ತೊರೆದರು:

ಗ್ರಾಮದ ಸ್ವಯಂ ಸೇವಕರ ಶಿಬಿರಕ್ಕೆ ಪಿಟಿಐ ವರದಿಗಾರರು ಭೇಟಿ ನೀಡಿದಾಗ, ಅಲ್ಲಿನ ಜನರು ತಮ್ಮ ಮನೆಗಳ ಗೋಡೆಗಳ ಮೇಲೆ ಬಿದ್ದಿರುವ ಗುಂಡಿನ ರಂಧ್ರಗಳನ್ನು ತೋರಿಸಿದರು. ಇದಕ್ಕೆ ಪ್ರತಿಯಾಗಿ, ಬೆದರಿಕೆಗಳನ್ನು ಎದುರಿಸಲು ತಾವು ಕೈಗೊಂಡಿರುವ ಮಾರ್ಗೋಪಾಯಗಳನ್ನೂ ವಿವರಿಸಿದರು. ಇಲ್ಲಿದ್ದ ಹೆಚ್ಚಿನ ಜನರು ಕೃಷಿ ಅವಲಂಬಿತರು. ಯುವ ಜನರು ತಮ್ಮ ಹಳ್ಳಿಗಳ ರಕ್ಷಣೆಗಾಗಿ ಉದ್ಯೋಗ ಮತ್ತು ವಿದ್ಯಾಭ್ಯಾಸವನ್ನು ತೊರೆದಿದ್ದಾರೆ.

‘ಗ್ರಾಮದ ಸ್ವಯಂ ಸೇವಕರಿಗೆ 20 ದಿನಗಳಿಂದ ಎರಡು ತಿಂಗಳವರೆಗೆ ತರಬೇತಿ ನೀಡಲಾಗುತ್ತಿದೆ. ಅದು ಎನ್‌ಸಿಸಿ ಮಾದರಿಯ ತರಬೇತಿ ಆಗಿದೆ. ಜತೆಗೆ ದೇಶೀಯ ನಿರ್ಮಿತ ಶಸ್ತ್ರಾಸ್ತ್ರಗಳ ಬಗ್ಗೆಯೂ ತರಬೇತಿ ನೀಡಲಾಗುತ್ತಿದೆ’ ಎಂದು ಪ್ರತಿಕ್ರಿಯಿಸಿದ ಅವರು, ತಮಗೆ ತರಬೇತಿಯನ್ನು ಯಾರು ನೀಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದರು. 

ಈ ಕುರಿತು ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು, ‘ಅವರು ಶಾಂತಿಯುತವಾಗಿ ಕಾವಲು ಕಾಯುತ್ತಿದ್ದರೆ ನಾವು ಮಧ್ಯಪ್ರವೇಶಿಸುವುದಿಲ್ಲ. ಆದರೆ ಶಸ್ತ್ರಾಸ್ತ್ರಗಳೊಂದಿಗೆ ನಮ್ಮ ಎದುರು ಬಂದರೆ, ಅವುಗಳ ಪರವಾನಗಿ ಕೇಳುತ್ತೇವೆ. ಅದನ್ನು ಒದಗಿಸದಿದ್ದರೆ ಶಸ್ತ್ರಾಸ್ತ್ರ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

‘ಹೊಸ ಗಡಿ’ಗಳು:

ಜನಾಂಗೀಯ ಹಿಂಸಾಚಾರದ ಬಳಿಕ ಬೆಟ್ಟ, ಕಣಿವೆ ಪ್ರದೇಶಗಳಲ್ಲಿ ‘ಹೊಸ ಗಡಿ’ಗಳು ತಲೆಯೆತ್ತಿವೆ. ಇಲ್ಲೆಲ್ಲೆ ಸ್ವಯಂಸೇವಕರ ಗಸ್ತು ಜೋರಾಗಿದೆ. ಬಿಷ್ಣುಪುರ ಮತ್ತು ಚುರಚಾಂದಪುರ, ಇಂಫಾಲ್‌ ವೆಸ್ಟ್‌ ಮತ್ತು ಕಾಂಗ್‌ಪೋಕ್ಪಿ ನಡುವಿನ ಗಡಿಗಳಲ್ಲಿ ಚೆಕ್‌ಪಾಯಿಂಟ್‌ಗಳು ಇದ್ದು, ಅಲ್ಲೆಲ್ಲ ಸ್ವಯಂ ಸೇವಕರು ಪರಿಶೀಲನೆ ನಡೆಸುತ್ತಿದ್ದಾರೆ. 

ಮೈತೇಯಿ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ 50 ಸಾವಿರಕ್ಕಿಂತ ಹೆಚ್ಚು ಸ್ವಯಂ ಸೇವಕರು ಹಾಗೂ ಕುಕಿ ಪ್ರಾಬಲ್ಯ ಪ್ರದೇಶಗಳಲ್ಲೂ ಭಾರಿ ಸಂಖ್ಯೆಯ ಸ್ವಯಂ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕುಕಿಗಳು ಮತ್ತು ಮೈತೇಯಿ ಸಮುದಾಯದವರು ಬೆಟ್ಟಗಳು ಮತ್ತು ಕಣಿವೆಯ ನಡುವೆ ಪ್ರಯಾಣಿಸಲು ಆಗದಂತಾಗಿದೆ. ನಾಗಾಗಳು ಮತ್ತು ಮುಸ್ಲಿಮರು ತಪಾಸಣೆ ಬಳಿಕ ಇಲ್ಲಿಂದ ಹೋಗಬಹುದಾಗಿದ್ದು, ಅವರಿಗೆ ಬೆಂಗಾವಲು ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಚೆಕ್‌ಪಾಯಿಂಟ್‌ಗಳಲ್ಲಿ ತಪಾಸಣೆ:

ಈ ತಿಂಗಳ ಆರಂಭದಲ್ಲಿ ಚುರಚಾಂದಪುರಕ್ಕೆ ಪಿಟಿಐ ವರದಿಗಾರ್ತಿ ಪ್ರಯಾಣಿಸಿದಾಗ, ಅವರನ್ನು ನಾಲ್ಕು ಚೆಕ್‌ಪಾಯಿಂಟ್‌ಗಳಲ್ಲಿ ಸ್ವಯಂ ಸೇವಕರು ತಡೆದು ಪರಿಶೀಲನೆ ನಡೆಸಿದರು. ‘ಎಲ್ಲಿಗೆ ಹೋಗುತ್ತಿದ್ದೀರಿ, ಯಾರನ್ನು ಭೇಟಿಯಾಗುತ್ತಿದ್ದೀರಿ, ನೀವು ಸರ್ಕಾರಿ ಅಧಿಕಾರಿಯೇ ಅಥವಾ ನಾಯಕರೇ’ ಎಂದು ಅಲ್ಲಿದ್ದವರು ಪ್ರಶ್ನಿಸಿದರು.

‘ನಾವು ಪ್ರತಿ ವಾಹನವನ್ನು ನಿಲ್ಲಿಸಿ ತಪಾಸಣೆ ನಡೆಸುತ್ತೇವೆ. ಅವರ ಗುರುತಿನ ಚೀಟಿಯನ್ನು ಪರಿಶೀಲಿಸುತ್ತೇವೆ. ಯಾರು, ಯಾವ ಉದ್ದೇಶಕ್ಕೆ ಭೇಟಿ ನೀಡುತ್ತಿದ್ದಾರೆ ಎಂಬುದನ್ನು ನಮೂದಿಸಲು ರಿಜಿಸ್ಟರ್‌ ನಿರ್ವಹಿಸುತ್ತಿದ್ದೇವೆ. ಯಾವುದೇ ಮೈತೇಯಿ ಸಮುದಾಯದವರು ಬೆಟ್ಟಗಳನ್ನು ಪ್ರವೇಶಿಸದಂತೆ ಜಾಗರೂಕತೆವಹಿಸಿದ್ದೇವೆ. ಇದೇ ರೀತಿ ಮೈತೇಯಿ ಸ್ವಯಂ ಸೇವಕರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಬಿಷ್ಣುಪುರ ಚೆಕ್‌ಪಾಯಿಂಟ್‌ನಲ್ಲಿ ಸ್ವಯಂ ಸೇವಕರೊಬ್ಬರು ತಿಳಿಸಿದರು. 

ಮಣಿಪುರದ ಗ್ರಾಮವೊಂದರಲ್ಲಿ ಸ್ಥಾಪಿಸಲಾಗಿರುವ ಬಂಕರ್‌ನಲ್ಲಿ ‘ಗ್ರಾಮ ಸ್ವಯಂಸೇಕ’ ನಿಗಾ ವಹಿಸಿರುವುದು

ಮಣಿಪುರದ ಗ್ರಾಮವೊಂದರಲ್ಲಿ ಸ್ಥಾಪಿಸಲಾಗಿರುವ ಬಂಕರ್‌ನಲ್ಲಿ ‘ಗ್ರಾಮ ಸ್ವಯಂಸೇಕ’ ನಿಗಾ ವಹಿಸಿರುವುದು

–ಪಿಟಿಐ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT