ಲಖನೌ: ಸಕ್ರಿಯ ರಾಜಕಾರಣಿದಿಂದ ನಿವೃತ್ತಿಯಾಗುವ ಕುರಿತ ವದಂತಿಗಳನ್ನು ತಳ್ಳಿಹಾಕಿದ ಬಹುಜನ ಸಮಾಜವಾದಿ ಪಕ್ಷದ ವರಿಷ್ಠ ನಾಯಕಿ ಮಾಯಾವತಿ, ‘ದಲಿತರು ಹಾಗೂ ಇತರ ಸಮಾಜದಲ್ಲಿರುವ ದುರ್ಬಲ ಸಮುದಾಯಗಳ ಏಳ್ಗೆಗಾಗಿ ಹೋರಾಟ ನಡೆಸಲಿದ್ದೇನೆ’ ಎಂದು ತಿಳಿಸಿದ್ದಾರೆ.
‘ನನ್ನ ರಾಜಕೀಯ ನಿವೃತ್ತಿ ಕುರಿತು ಕೆಲವು ಜಾತೀಯ ಮಾಧ್ಯಮಗಳು ವದಂತಿ ಹರಡಿವೆ. ಇದು ಸತ್ಯಕ್ಕೆ ದೂರವಾದುದು’ ಎಂದು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ರಾಜಕೀಯದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ. ದಲಿತರ ಏಳ್ಗೆಗಾಗಿ ಕೊನೆಯ ಉಸಿರು ಇರುವವರೆಗೂ ನಾನು ಕೆಲಸ ಮಾಡಲಿದ್ದೇನೆ’ ಎಂದು ತಿಳಿಸಿದ್ದಾರೆ.
‘ದೇಶದ ಅಧ್ಯಕ್ಷೆಯಾಗುವ ಕುರಿತು ಯಾವುದೇ ಆಸಕ್ತಿ ಹೊಂದಿಲ್ಲ. ಈ ಹಿಂದೆಯೂ ಇದೇ ರೀತಿಯ ವದಂತಿ ಹಬ್ಬಿಸಲಾಗಿತ್ತು. ಪಕ್ಷದ ಸಂಸ್ಥಾಪಕ ಕಾನ್ಶಿರಾಮ್ ಅವರಿಗೂ ಇದೇ ರೀತಿ ಆಹ್ವಾನ ನೀಡಿದ್ದರೂ, ಅದನ್ನು ಅವರು ತಿರಸ್ಕರಿಸಿದ್ದರು. ರಾಷ್ಟ್ರಪತಿಯಾಗುವುದೆಂದರೆ, ರಾಜಕೀಯದಿಂದ ನಿವೃತ್ತಿಯಾಗುವುದು ಎಂದು ಅರ್ಥ’ ಎಂದು ಹೇಳಿದ್ದಾರೆ.