ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಿಚಾರಣೆ ವಿಳಂಬ– ಜಾಮೀನು ನೀಡಲು ಆಧಾರವಲ್ಲ: ಬಾಂಬೆ ಹೈಕೋರ್ಟ್‌

Published 4 ಏಪ್ರಿಲ್ 2024, 15:37 IST
Last Updated 4 ಏಪ್ರಿಲ್ 2024, 15:37 IST
ಅಕ್ಷರ ಗಾತ್ರ

ಮುಂಬೈ: ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ತನಿಖೆಯು ವಿಳಂಬವಾಯಿತು ಎಂಬುದಷ್ಟೇ ಆರೋಪಿಗೆ ಜಾಮೀನು ನೀಡಲು ಆಧಾರವಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. 2019ರ ಗಢಚಿರೋಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಗೆ ಜಾಮೀನು ನೀಡಬೇಕು ಎಂದು ಆರೋಪಿ ಕೈಲಾಶ್‌ ರಾಮಚಂದಾನಿ (38) ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ಹೀಗೆ ಹೇಳಿದೆ.

ಮಹಾರಾಷ್ಟ್ರದ ಗಢಚಿರೋಲಿ ಜಿಲ್ಲೆಯಲ್ಲಿ 15 ಪೊಲೀಸರ ಸಾವಿಗೆ ಕಾರಣರಾದ ನೆಲಬಾಂಬ್‌ ಸ್ಫೋಟಕ್ಕೆ ನಕ್ಸಲರಿಗೆ ನೆರವು ನೀಡಿದ್ದ ಆರೋಪ ಕೈಲಾಶ್ ಮೇಲಿದೆ. ಈ ಪ್ರಕರಣದಲ್ಲಿ ಅವರ ಪಾತ್ರವಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.

ಕೈಲಾಶ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮಾರ್ಚ್‌ 5ರಂದು ತಿರಸ್ಕರಿಸಿದ್ದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಮಂಜೂಷಾ ದೇಶಪಾಂಡೆ ಅವರಿದ್ದ ನ್ಯಾಯಪೀಠವು, ‘2019ರ ಮೇ 1ರಂದು ನಡೆದ ಬಾಂಬ್‌ ಸ್ಫೋಟದಲ್ಲಿ 15 ಪೊಲೀಸರು ಮೃತಪಟ್ಟ ಸಂಗತಿಯನ್ನು ತಳ್ಳಿಹಾಕಲು ನಮಗೆ ಸಾಧ್ಯವಿಲ್ಲ. ವಿಚಾರಣೆ ವಿಳಂಬವಾದ ಸಂಗತಿಯನ್ನೇ ಆಧಾರವಾಗಿರಿಸಿಕೊಂಡು ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಆಗುವುದಿಲ್ಲ’ ಎಂದು ಹೇಳಿತ್ತು. ಆದೇಶದ ಪ್ರತಿಯನ್ನು ಗುರುವಾರ ಬಹಿರಂಗಪಡಿಸಲಾಗಿದೆ. 

ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಕೈಲಾಶ್‌ ಅವರನ್ನು 2019ರ ಜುಲೈನಲ್ಲಿ ಬಂಧಿಸಲಾಗಿತ್ತು. ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ), ಭಾರತೀಯ ದಂಡ ಸಂಹಿತೆಯ ಕೆಲ ಸೆಕ್ಷನ್‌ಗಳು ಮತ್ತು ಮಹಾರಾಷ್ಟ್ರ ಸಂಘಟಿತ ಅಪರಾಧಗಳ ತಡೆ ಕಾಯ್ದೆ (ಎಂಸಿಒಸಿಎ) ಅಡಿ ಅವರ ವಿರುದ್ಧ ದೂರು ದಾಖಲಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT