ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಐಎಲ್‌ ವಜಾಗೊಳಿಸಿದ ‘ಸುಪ್ರೀಂ’

ಬೆಂಗಳೂರಿನಲ್ಲಿ ಯುದ್ಧ ವಿಮಾನ ಅಪಘಾತ ತನಿಖೆಗೆ ಮನವಿ
Last Updated 18 ಫೆಬ್ರುವರಿ 2019, 20:27 IST
ಅಕ್ಷರ ಗಾತ್ರ

ನವದೆಹಲಿ: ಇತ್ತೀಚೆಗಷ್ಟೇ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಸಂಭವಿಸಿರುವ ಮಿರಾಜ್‌–2000 ಯುದ್ಧವಿಮಾನದ ಅಪಘಾತ ಪ್ರಕರಣದ ನ್ಯಾಯಾಂಗ ತನಿಖೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌)ಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ವಜಾ ಮಾಡಿದೆ.

ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಪೀಠವು, ‘ಮಿರಾಜ್‌–2000 ಯುದ್ಧವಿಮಾನ ಯಾವ ತಲೆಮಾರಿಗೆ ಸೇರಿದ್ದು ಎಂಬುದು ನಿಮಗೆ ಗೊತ್ತೆ’ ಎಂದು ಅರ್ಜಿದಾರ ವಕೀಲ ಅಲಕ್‌ ಅಲೋಕ್‌ ಶ್ರೀವಾತ್ಸವ ಅವರನ್ನು ಪ್ರಶ್ನಿಸಿತು.

‘ಇತರರು 6ನೇ ತಲೆಮಾರಿನ ಮಿರಾಜ್‌ ಯುದ್ಧವಿಮಾನ ಬಳಸುತ್ತಿದ್ದರೆ, ನಾವು 3 ಅಥವಾ 3.5ನೇ ತಲೆಮಾರಿನ ವಿಮಾನ ಬಳಸುತ್ತಿದ್ದೇವೆ. ಅಂಥ ಯುದ್ಧ ವಿಮಾನ ಅಪಘಾತವಾಗದೇ ಇರದು’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ‘ಅಷ್ಟೊಂದು ಹಳೆಯ ವಿಮಾನಗಳ ಬಳಕೆ ಸರಿಯಲ್ಲ’ ಎಂದು ಪರೋಕ್ಷವಾಗಿ ಟೀಕಿಸಿತಲ್ಲದೆ, ‘ಪ್ರಕರಣದ ನ್ಯಾಯಾಂಗ ತನಿಖೆಗೆ ಆದೇಶಿಸುವುದು ಹೇಗೆ’ ಎಂದು ಕೇಳಿತು.

ಈ ಅರ್ಜಿಯ ಕುರಿತು ಪರಿಶೀಲಿಸಿ ಎಂದು ವಕೀಲ ಶ್ರೀವಾಸ್ತವ ಅವರು ಕೋರಿದಾಗ, ‘ಅನಗತ್ಯವಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ. ಆದರೂ, ಅರ್ಜಿದಾರರು ವಕೀಲರಾಗಿದ್ದರಿಂದ ದಂಡ ವಿಧಿಸುವುದಿಲ್ಲ’ ಎಂದು ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರಿದ್ದ ಪೀಠ ಸ್ಪಷ್ಟಪಡಿಸಿತು.

ಫೆಬ್ರುವರಿ 1ರಂದು ಸಂಭವಿಸಿದ್ದ ಮಿರಾಜ್‌– 2000 ಅಪಘಾತದಲ್ಲಿ ಇಬ್ಬರು ಯುವ ಪೈಲಟ್‌ಗಳು ಮೃತಪಟ್ಟಿದ್ದಾರೆ. ಭವಿಷ್ಯದಲ್ಲಿ ಇಂತಹ ದುರ್ಘಟನೆಗಳು ನಡೆಯದಂತೆ ತಡೆಯುವ ನಿಟ್ಟಿನಲ್ಲಿ ನಿವೃತ್ತ ನ್ಯಾಯಾಧೀಶರ ನೇತೃತ್ವದ ಮೇಲ್ವಿಚಾರಣೆ ಸಮಿತಿ ರಚಿಸಿ ಪ್ರಕರಣದ ಸಮಗ್ರ ತನಿಖೆಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ಭಾರತೀಯ ಸೇನೆಗೆ ಸೇರಿರುವ ಯುದ್ಧವಿಮಾನಗಳು, ಹೆಲಿಕಾಪ್ಟರ್‌ಗಳ ಅಪಘಾತ ಪ್ರಕರಣಗಳು ಹೆಚ್ಚುತ್ತಲೇ ಇವೆ. 2011ರಿಂದ ಈಚೆಗೆ 75ಯುದ್ಧ ವಿಮಾನಗಳು ಪತನಗೊಂಡಿದ್ದು, 80ಕ್ಕೂ ಅಧಿಕ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದೂ ಅರ್ಜಿಯಲ್ಲಿ ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT