ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಶಂಕಿತರ ನಿಗೂಢ ಸಾವು: ಪೂಂಛ್‌– ರಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸ್ಥಗಿತ

Published 23 ಡಿಸೆಂಬರ್ 2023, 4:48 IST
Last Updated 23 ಡಿಸೆಂಬರ್ 2023, 4:48 IST
ಅಕ್ಷರ ಗಾತ್ರ

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ‘ಸೇನಾ ವಾಹನಗಳ ಮೇಲೆ ಇತ್ತೀಚೆಗೆ ನಡೆದ ದಾಳಿಗೆ ಸಂಬಂಧಿಸಿದಂತೆ ವಿಚಾರಣೆಗೆಂದು ಸೇನಾ ಸಿಬ್ಬಂದಿ ಕರೆದೊಯ್ದಿದ್ದ ಮೂವರು ನಾಗರಿಕರು ನಿಗೂಢ ರೀತಿಯಲ್ಲಿ ಮೃತಪಟ್ಟಿರುವುದರ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಶನಿವಾರ ತಿಳಿಸಿದೆ.

‘ಪೂಂಛ್‌ ಜಿಲ್ಲೆಯ ಬಫ್ಲಿಯಾಜ್‌ನಲ್ಲಿ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮೃತರ ಕುಟುಂಬದವರಿಗೆ ಪರಿಹಾರ ಮತ್ತು ಉದ್ಯೋಗವನ್ನು ನೀಡುವುದಾಗಿ ಸರ್ಕಾರ ಘೋಷಿಸಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ‘ಎಕ್ಸ್‌’ನಲ್ಲಿ ತಿಳಿಸಿದೆ.

ಮೃತರನ್ನು ಸುರಾನ್‌ಕೋಟೆಯ ತೋಪಾ ಗ್ರಾಮದ ನಿವಾಸಿಗಳಾದ ಸಫೀರ್ ಹುಸೇನ್‌, ಮೊಹಮದ್‌ ಶೌಕತ್‌ ಮತ್ತು ಶಬೀರ್‌ ಅಹ್ಮದ್‌ ಎಂದು ಗುರುತಿಸಲಾಗಿದೆ. ಸೇನಾ ವಾಹನಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ಸೇನಾ ಸಿಬ್ಬಂದಿ ಈ ಮೂವರು ಸೇರಿದಂತೆ ಒಂಬತ್ತು ಮಂದಿಯನ್ನು ಕರೆದೊಯ್ದಿದ್ದರು ಎಂದು ವರದಿಯಾಗಿದೆ.

‘ಸೇನಾ ಸಿಬ್ಬಂದಿ ಹಲವು ನಾಗರಿಕರನ್ನು ಅವರ ಮನೆಯಿಂದ ವಿಚಾರಣೆಗೆ ಕರೆದೊಯ್ದಿದ್ದಾರೆ. ಕೆಲವರನ್ನು ದೂರವಾಣಿ ಕರೆ ಮುಖಾಂತರ ಕರೆಸಿಕೊಂಡಿದ್ದಾರೆ. ಮೂವರನ್ನು ನಿರ್ದಯವಾಗಿ ಕೊಂದಿದ್ದಾರೆ’ ಎಂದು ಮೊಹಮದ್‌ ಶೌಕತ್‌ ಚಿಕ್ಕಪ್ಪ ಮುಹಮ್ಮದ್‌ ಸಿದ್ದಿಖ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ, ಸೇನಾ ಸಿಬ್ಬಂದಿಯು ವಿಚಾರಣೆ ಸಮಯದಲ್ಲಿ ನಾಗರಿಕರ ಗುಪ್ತಾಂಗಗಳಿಗೆ ಖಾರದ ಪುಡಿ ಹಾಕಿ ಕಿರುಕುಳ ನೀಡುತ್ತಿರುವ ಹಾಗೂ ಅವರನ್ನು ಥಳಿಸುತ್ತಿರುವ ವಿಡಿಯೊ ದೃಶ್ಯಗಳು ಬಿತ್ತರಗೊಂಡಿವೆ. ಸೇನೆಯ ಈ ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯು ಸ್ಥಳೀಯರನ್ನು ಪ್ರತಿಭಟನೆಗೆ ಪ್ರಚೋದಿಸಿದೆ ಎಂದು ವರದಿಗಳು ಹೇಳಿವೆ. ವಿಡಿಯೊಗಳ ಸತ್ಯಾಸತ್ಯತೆ ಇನ್ನೂ ಪರಿಶೀಲನೆಗೆ ಒಳಪಟ್ಟಿಲ್ಲ.

ತನಿಖೆಗೆ ರಾಜಕೀಯ ಪಕ್ಷಗಳ ಆಗ್ರಹ: ಘಟನೆ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಪಕ್ಷಗಳು ಆಗ್ರಹಿಸಿವೆ. ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಘಟನೆಯನ್ನು, ‘ಹೇಯಕೃತ್ಯ’ ಎಂದು ಕರೆದಿದ್ದಾರೆ. ‘ಸೇನೆಯವರು 15 ಸ್ಥಳೀಯರನ್ನು ಬಂಧಿಸಿದ್ದರು. ಅವರಲ್ಲಿ ಈಗಾಗಲೇ ಮೂರು ಮಂದಿ ನಿಗೂಢ ರೀತಿಯಲ್ಲಿ ಮೃತಪಟ್ಟಿದ್ದಾರೆ. ಉಳಿದ 12 ಮಂದಿ ಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ’ ಎಂದು ಮುಫ್ತಿ ಹೇಳಿದ್ದಾರೆ.

ಮೊಬೈಲ್‌ ಇಂಟರ್‌ನೆಟ್‌ ಸ್ಥಗಿತ: ‘ಪೂಂಛ್‌ ಮತ್ತು ರಜೌರಿ ಜಿಲ್ಲೆಗಳಲ್ಲಿ ಶನಿವಾರ ಬೆಳಿಗ್ಗೆಯಿಂದ ಮೊಬೈಲ್ ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ವದಂತಿಗಳನ್ನು ಹರಡುವುದನ್ನು ತಪ್ಪಿಸಲು ಹಾಗೂ ಕಿಡಿಗೇಡಿಗಳು ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸದಂತೆ ತಡೆಯಲು ಇಂಟರ್‌ನೆಟ್‌ ಅನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಹಿರಿಯ ಸೇನಾ, ಪೊಲೀಸ್‌ ಮತ್ತು ನಾಗರಿಕ ಅಧಿಕಾರಿಗಳು ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುತ್ತಿ ದ್ದಾರೆ. ಪೂಂಛ್‌ ಮತ್ತು ರಜೌರಿ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಶಾಂತಿ ಕಾಪಾಡಲು ಹೆಚ್ಚಿನ ಪೊಲೀಸ್‌ ಸಿಬ್ಬಂದಿ ಮತ್ತು ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ಒಳನುಸುಳುವಿಕೆ ಸಂಚು ವಿಫಲ

ಜಮ್ಮು (ಪಿಟಿಐ): ‘ಜಮ್ಮುವಿನ ಅಂತರರಾಷ್ಟ್ರೀಯ ಗಡಿಯಿಂದ ದೇಶದೊಳಕ್ಕೆ ನುಸುಳಲು ಯೋಜಿಸಿದ್ದ ಉಗ್ರರ ಸಂಚನ್ನು ಭಾರತೀಯ ಸೇನೆ ಶನಿವಾರ ಬೆಳಿಗ್ಗೆ ವಿಫಲಗೊಳಿಸಿದೆ. ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಉಗ್ರ ಮೃತಪಟ್ಟಿದ್ದಾನೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಖ್ನೂರ್‌ನ ಖೋವೂರ್‌ ಸೆಕ್ಟರ್‌ ಬಳಿಯಿರುವ ಗಡಿಯಲ್ಲಿ ನಾಲ್ವರು ಶಸ್ತ್ರಸಜ್ಜಿತ ಉಗ್ರರ ಚಲನವಲನಗಳನ್ನು ಕಣ್ಗಾವಲು ಸಾಧನಗಳು ಶನಿವಾರ ಬೆಳಿಗಿನ ಜಾವ ಸೆರೆಹಿಡಿದಿವೆ. ಕೂಡಲೇ ಕಾರ್ಯಪ್ರವೃತ್ತರಾದ ಸೇನಾ ಸಿಬ್ಬಂದಿ ಗುಂಡಿನ ದಾಳಿ ನಡೆಸಿದ್ದಾರೆ’ ಎಂದು ಸೇನೆಯ ಜಮ್ಮು ಮೂಲದ ವೈಟ್‌ ನೈಟ್‌ ಕಾರ್ಪ್ಸ್‌ ಪಡೆ ’ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ.

‘ಗುಂಡಿನ ದಾಳಿಯಲ್ಲಿ ಮೃತಪಟ್ಟ ಉಗ್ರನ ದೇಹವನ್ನು, ಉಳಿದ ಉಗ್ರರು ಪಾಕಿಸ್ತಾನದೆಡೆಗೆ ಕೊಂಡೊಯ್ದಿದ್ದಾರೆ. ಘಟನಾ ಸ್ಥಳದಲ್ಲಿನ ರಕ್ತದ ಕಲೆಗಳು ಉಗ್ರನ ಸಾವನ್ನು ದೃಢಪಡಿಸಿವೆ’ ಎಂದಿದೆ.

ಇಬ್ಬರು ವ್ಯಕ್ತಿಗಳ ಸಜೀವ ದಹನ

ದೋಡಾ/ ಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಅರ್ನೊಡ ಗಟ್‌ ಸೇನಾ ಶಿಬಿರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಇಬ್ಬರು ಪೌರ ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಾಂಬಾ ನಿವಾಸಿ ಪರ್ಷೋತಮ್‌ ಹಾಗೂ ಕಥುವಾ ನಿವಾಸಿ ಸೋಮ್‌ರಾಜ್‌ ಮೃತರು. ಕೆರೋಸಿನ್‌ ಹೀಟರ್‌ನಿಂದ ಬೆಂಕಿ ಹೊತ್ತಿಕೊಂಡಿದೆ. ಇವರಿಬ್ಬರು ಸೇನಾ ಶಿಬಿರದಲ್ಲಿ ಟೈಲರ್‌ ಅಂಗಡಿ ನಡೆಸುತ್ತಿದ್ದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT