ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Narendra Modi 3.0: ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ

Published 10 ಜೂನ್ 2024, 16:46 IST
Last Updated 10 ಜೂನ್ 2024, 16:46 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರ್ಕಾರದ ನೂತನ ಸಚಿವರಿಗೆ ಸೋಮವಾರ ಖಾತೆ ಹಂಚಿಕೆ ಮಾಡಲಾಗಿದೆ.

ಖಾತೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಮೋದಿ ಅವರು ಕಳೆದ ಸರ್ಕಾರದಲ್ಲಿ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯ ಭಾಗವಾಗಿದ್ದ ನಾಲ್ವರ ಖಾತೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಅಮಿತ್‌ ಶಾ (ಗೃಹ), ರಾಜನಾಥ್ ಸಿಂಗ್‌ (ರಕ್ಷಣೆ), ನಿರ್ಮಲಾ ಸೀತಾರಾಮನ್‌ (ಹಣಕಾಸು, ಕಾರ್ಪೊರೇಟ್‌ ವ್ಯವಹಾರ), ಎಸ್‌.ಜೈಶಂಕರ್ (ವಿದೇಶಾಂಗ) ಅದೇ ಖಾತೆಗಳಲ್ಲಿ ಮುಂದುವರಿಯಲಿದ್ದಾರೆ. ನಿತಿನ್ ಗಡ್ಕರಿ (ಹೆದ್ದಾರಿ), ಪೀಯೂಷ್‌ ಗೋಯಲ್‌ (ವಾಣಿಜ್ಯ), ಧರ್ಮೇಂದ್ರ ಪ್ರಧಾನ್‌ (ಶಿಕ್ಷಣ), ಭೂಪೇಂದ್ರ ಯಾದವ್‌ (ಪರಿಸರ) ಅವರಿಗೆ ಹಿಂದಿನ ಖಾತೆಗಳನ್ನೇ ನೀಡಲಾಗಿದೆ. ಇದು ಹಿಂದಿನ ಸರ್ಕಾರದ ಆಡಳಿತದ ನಿರಂತರತೆಗೆ ಒತ್ತು ನೀಡಿರುವುದನ್ನು ಸೂಚಿಸುತ್ತದೆ. ಜತೆಗೆ, ಮೋದಿ ಅವರು ಖಾತೆ ಹಂಚಿಕೆಯಲ್ಲಿ ಅಚ್ಚರಿಯ ಪ್ರಯೋಗಗಳಿಗೆ ಕೈ ಹಾಕಿಲ್ಲ. ಮಿತ್ರ ಪಕ್ಷಗಳ ಒತ್ತಡಗಳಿಗೂ ಮಣೆ ಹಾಕಿಲ್ಲ.  

ನಿರ್ಮಲಾ ಅವರು ಸತತ ಮೂರನೇ ಅವಧಿಗೆ ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡ ಏಕೈಕ ಮಹಿಳೆ. ಅವರ ಮುಂದಿರುವ ಮೊದಲ ಸವಾಲು 2024–25ರ ಹಣಕಾಸು ವರ್ಷಕ್ಕೆ ಪೂರ್ಣ ಬಜೆಟ್‌ ಮಂಡಿಸುವುದಾಗಿದೆ. 

ನಿರ್ಮಲಾ ಅವರು 2024ರ ಫೆಬ್ರುವರಿಯ ಮಧ್ಯಂತರ ಬಜೆಟ್‌ ಸೇರಿದಂತೆ ಸತತ ಆರು ಬಜೆಟ್‌ಗಳನ್ನು ಮಂಡಿಸಿದ್ದಾರೆ. ಜುಲೈನಲ್ಲಿ ಮಂಡಿಸುವ ಬಜೆಟ್‌ ನಿರ್ಮಲಾ ಅವರ ಸತತ ಏಳನೇ ಬಜೆಟ್‌ ಆಗಲಿದೆ. ಈ ಮೂಲಕ ಅವರು, ಸತತ ಆರು ಬಜೆಟ್‌ ಮಂಡಿಸಿರುವ ಮೊರಾರ್ಜಿ ದೇಸಾಯಿ ದಾಖಲೆಯನ್ನು ಮುರಿಯಲಿದ್ದಾರೆ. 

ಮಾಜಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ, ಮನೋಹರ್‌ ಲಾಲ್ ಖಟ್ಟರ್ ಅವರಿಗೆ ವಸತಿ ಹಾಗೂ ನಗರ ವ್ಯವಹಾರಗಳು, ವಿದ್ಯುತ್‌ ಖಾತೆ ಕೊಡಲಾಗಿದೆ. ಹಿಂದಿನ ಸರ್ಕಾರದಲ್ಲಿ ನರೇಂದ್ರ ಸಿಂಗ್ ತೋಮರ್ ಅವರು ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಬಳಿಕ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು 13 ತಿಂಗಳು ಸತ್ಯಾಗ್ರಹ ನಡೆಸಿದ್ದರು. ಲೋಕಸಭಾ ಚುನಾವಣೆಗೆ ಮುನ್ನ ಕನಿಷ್ಠ ಬೆಂಬಲ ಬೆಲೆಗೆ ಆಗ್ರಹಿಸಿ ಕೃಷಿಕರು ಬೀದಿಗಿಳಿದಿದ್ದರು. 

ಆರೋಗ್ಯ, ರಾಸಾಯನಿಕ ಹಾಗೂ ರಸಗೊಬ್ಬರ ಖಾತೆಯು ಜೆ.ಪಿ.ನಡ್ಡಾ ಪಾಲಾಗಿದೆ. ಅವರು 2014ರಿಂದ 2019ರ ವರೆಗೆ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕಿರಣ್ ರಿಜಿಜು ಅವರು ಹಿಂದೆ ಭೂವಿಜ್ಞಾನ ಸಚಿವರಾಗಿದ್ದರು. ಅವರಿಗೆ ಈ ಸಲ ಸಂಸದೀಯ ವ್ಯವಹಾರಗಳ ಖಾತೆ ಕೊಡಲಾಗಿದೆ. 

ಅಶ್ವಿನಿ ವೈಷ್ಣವ್‌ ಅವರಿಗೆ ರೈಲ್ವೆ ಖಾತೆಯ ಜತೆಗೆ ಮಾಹಿತಿ ಮತ್ತು ಪ್ರಸಾರ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಈ ಹಿಂದೆ ಜಲಶಕ್ತಿ ಸಚಿವರಾಗಿದ್ದ ಗಜೇಂದ್ರ ಸಿಂಗ್‌ ಶೆಖಾವತ್‌ ಅವರಿಗೆ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಖಾತೆ ನೀಡಲಾಗಿದೆ. ಜಲಶಕ್ತಿ ಸಚಿವರಾಗಿ ಗುಜರಾತ್‌ನ ಸಿ.ಆರ್.ಪಾಟೀಲ್‌ ಬಂದಿದ್ದಾರೆ. ಹಿಂದಿನ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಮನ್ಸುಖ್ ಮಾಂಡವೀಯಾ ಅವರಿಗೆ ಕಾರ್ಮಿಕ ಹಾಗೂ ಕ್ರೀಡಾ ಖಾತೆ ಸಿಕ್ಕಿದೆ. ಅವರಿಗೆ ಹಿಂಬಡ್ತಿ ನೀಡಲಾಗಿದೆ ಎಂದು ಬಿಜೆಪಿ ವಲಯದಲ್ಲಿ ಚರ್ಚೆಗಳು ಶುರುವಾಗಿವೆ. 

ಲೋಕಸಭಾ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿಯು ಎಂಟು ಸ್ಥಾನಗಳನ್ನು ಗೆದ್ದಿದೆ. ಈ ರಾಜ್ಯವನ್ನು ಪ್ರತಿನಿಧಿಸುವ ಜಿ.ಕಿಶನ್ ರೆಡ್ಡಿ ಅವರಿಗೆ ಗಣಿ ಹಾಗೂ ಬಂಡಿ ಸಂಜಯ್ ಅವರಿಗೆ ಗೃಹದಂತಹ (ರಾಜ್ಯ ಸಚಿವ) ಪ್ರಮುಖ ಖಾತೆಗಳು ಸಿಕ್ಕಿವೆ. 

ಸ್ಮೃತಿ ಇರಾನಿ ಅವರು ಹಿಂದಿನ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದರು. ಅವರು ಈ ಸಲ ಸೋತಿದ್ದಾರೆ. ಈ ಬಾರಿ ಈ ಖಾತೆಯನ್ನು ಅನ್ನಪೂರ್ಣ ದೇವಿ ಅವರಿಗೆ ಕೊಡಲಾಗಿದೆ. 

ರಾಜ್ಯದವರಿಗೆ ಯಾವ ಖಾತೆ?

1.ನಿರ್ಮಲಾ ಸೀತಾರಾಮನ್‌;ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರ

2.ಎಚ್‌.ಡಿ.ಕುಮಾರಸ್ವಾಮಿ;ಬೃಹತ್‌ ಕೈಗಾರಿಕೆ ಮತ್ತು ಉಕ್ಕು

3.ಪ್ರಲ್ಹಾದ ಜೋಶಿ;ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಹೊಸ ಮತ್ತು ನವೀಕರಿಸಬಹುದಾದ ಇಂಧನ

4.ವಿ.ಸೋಮಣ್ಣ;ಜಲಶಕ್ತಿ ಮತ್ತು ರೈಲ್ವೆ (ರಾಜ್ಯ ಖಾತೆ) 

5.ಶೋಭಾ ಕರಂದ್ಲಾಜೆ;‌‌ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಮತ್ತು ಉದ್ಯೋಗ (ರಾಜ್ಯ ಖಾತೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT