ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ–ಆಂಧ್ರ ಮುಖ್ಯಮಂತ್ರಿ ಜಗಳ್‌ಬಂದಿ

ಬಹಿರಂಗ ಸಭೆಗಳಲ್ಲಿ ತಾರಕ್ಕೇರಿದ ವೈಯಕ್ತಿಕ ನಿಂದನೆ l ಪ್ರಧಾನಿಗೆ ಕಪ್ಪು ಬಾವುಟ ಸ್ವಾಗತ
Last Updated 10 ಫೆಬ್ರುವರಿ 2019, 18:33 IST
ಅಕ್ಷರ ಗಾತ್ರ

ಗುಂಟೂರು:ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರು ಅಧಿಕಾರ ಲಾಲಸೆ ಮತ್ತು ರಾಜಕೀಯ ಸ್ವಾರ್ಥಕ್ಕಾಗಿ ಸ್ವಂತ ಮಾವ ಎನ್‌.ಟಿ. ರಾಮಾರಾವ್‌ (ಎನ್‌ಟಿಆರ್‌) ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.

ಚಂದ್ರಬಾಬು ನಾಯ್ಡು ಅವರನ್ನು ‘ನಾರಾ ಲೋಕೇಶ್‌ ಅವರ ಅಪ್ಪ’ ಎಂದು ಸಂಬೋಧಿಸುವ ಮೂಲಕ ಮೋದಿ ತೆಲುಗಿನಲ್ಲಿ ಭಾಷಣ ಆರಂಭಿಸಿದರು. ನಂತರ ಭಾಷಣ ಉದ್ದಕ್ಕೂ ನಾಯ್ಡು ಅವರನ್ನು ತೆಲುಗು ಶೈಲಿಯಲ್ಲಿ ‘ಬಾಬುಗಾರು’ ಎಂದು ಸಂಬೋಧಿಸಿದರು.

ಮಗನ ಅಭ್ಯುದಯಕ್ಕಾಗಿ ನಾಯ್ಡು ರಾಜ್ಯದ ಅಭಿವೃದ್ಧಿಯನ್ನು ಬಲಿ ಕೊಟ್ಟಿದ್ದಾರೆ. ವಿಶೇಷ ಸ್ಥಾನಮಾನಕ್ಕಿಂತ ಹೆಚ್ಚಿನ ಸೌಲಭ್ಯವನ್ನು ಕೇಂದ್ರ ಸರ್ಕಾರ ಆಂಧ್ರ ಪ್ರದೇಶಕ್ಕೆ ನೀಡಿದೆ. ಕೇಂದ್ರದ ಅನುದಾನವನ್ನು ಬಳಸಿಕೊಳ್ಳಲು ಟಿಡಿಪಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಬಡವರಿಗಾಗಿ ಯಾವುದೇ ಹೊಸ ಯೋಜನೆ ಘೋಷಿಸದ ಮುಖ್ಯಮಂತ್ರಿ ಎನ್‌ಡಿಎ ಸರ್ಕಾರದ ಯೋಜನೆಗಳ ಹೆಸರು ಬದಲಿಸಿ ಜಾರಿ ಮಾಡಿದರು. ರಾಜ್ಯಕ್ಕೆ ನೀಡಿದ ಪ್ರತಿ ಪೈಸೆಯ ಲೆಕ್ಕ ಕೇಳ ತೊಡಗಿದಾಗ ಚೌಕೀದಾರನಿಗೆ ಹೆದರಿದ ಬಾಬುಗಾರು (ನಾಯ್ಡು) ಕಾಂಗ್ರೆಸ್‌ ಬಳಿ ಓಡಿ ಹೋದರು ಎಂದರು.

ನನಗಿಂತ ಹಿರಿಯ:‘ರಾಜಕೀಯದಲ್ಲಿ ಮೋದಿಗಿಂತ ನಾನು ಹಿರಿಯ ಎಂದು ನಾಯ್ಡು ಪದೇ ಪದೇ ಹೇಳಿಕೊಳ್ಳುತ್ತಾರೆ. ಇದನ್ನು ನಾನು ಒಪ್ಪುತ್ತೇನೆ. ಅಧಿಕಾರಕ್ಕಾಗಿ ಸ್ವಂತ ಮಾವನ ಬೆನ್ನಿಗೆ ಚೂರಿ ಇರಿಯುವಲ್ಲಿ ಮತ್ತು ಪದೇ ಪದೇ ಮೈತ್ರಿ ಬದಲಿಸುವಲ್ಲಿ ಅವರು ಖಂಡಿತ ನನಗಿಂತ ಹಿರಿಯರು’ ಎಂದು ಲೇವಡಿ ಮಾಡಿದರು.

ಗುಂಟೂರಿನಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ನಂತರ ಬಿಜೆಪಿ ರ‍್ಯಾಲಿಯಲ್ಲಿ ಮಾತನಾಡಿದ ಅವರು ಭಾಷಣದ ಉದ್ದಕ್ಕೂ ನಾಯ್ಡು ಮತ್ತು ಅವರ ಮಗ ನಾರಾ ಲೋಕೇಶ್‌ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್‌ ಮಾಡಿದ ಅವಮಾನ ಸಹಿಸದೆ ಎನ್‌ಟಿಆರ್‌ ಅವರು ತೆಲುಗುದೇಶಂ (ಟಿಡಿಪಿ) ಹುಟ್ಟು ಹಾಕಿದರು. ವಿಪರ್ಯಾಸ ಎಂದರೆ ‘ಕಾಂಗ್ರೆಸ್‌ ಮುಕ್ತ ಆಂಧ್ರ’ಕ್ಕಾಗಿ ಪಣತೊಟ್ಟು ಎನ್‌ಟಿಆರ್‌ ಕಟ್ಟಿದ ತೆಲುಗುದೇಶಂ ಈಗ ಕಾಂಗ್ರೆಸ್‌ ಜತೆ ಕೈಜೋಡಿಸಿದೆ ಎಂದರು.

ಎನ್‌ಟಿಆರ್‌ ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದಾಗಿ ಹೇಳಿದ್ದ ಅವರ ಅಳಿಯ ಚಂದ್ರಬಾಬು ಇಂದು ಎನ್‌ಟಿಆರ್‌ ಕನಸುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ತೊಡೆ ಏರಿ ಕುಳಿತ ಅಳಿಯನನ್ನು ಕಂಡು ಎನ್‌ಟಿಆರ್‌ ಆತ್ಮ ತುಂಬಾ ನೊಂದುಕೊಂಡಿರಬಹುದು ಎಂದು ವಿಷಾದಿಸಿದರು.

ಮೋದಿಯನ್ನು ಜಶೋದಾ ಪತಿ ಎನ್ನಬಹುದೇ: ನಾಯ್ಡು ಪ್ರಶ್ನೆ

‘ನಾನೊಬ್ಬ ಒಳ್ಳೆಯ ತಂದೆ ಹಾಗೂ ಉತ್ತಮ ಪತಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇನೆ. ಆದರೆ, ನೀವು ಒಳ್ಳೆಯ ಪತಿಯೇ. ಗಂಡನಾಗಿ ನೀವು ನಿಮ್ಮ ಕರ್ತವ್ಯ ನಿಭಾಯಿಸಿದ್ದೀರಾ’ ಎಂದು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಭಾನುವಾರ ಪ್ರಧಾನಿ ಮೋದಿ ಅವರಿಗೆ ತಿರುಗೇಟು ನೀಡಿದ್ದಾರೆ.

ಗುಂಟೂರಿನಲ್ಲಿ ಭಾನುವಾರ ನಡೆದ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಯ್ಡು ಅವರನ್ನು ‘ನಾರಾ ಲೋಕೇಶ್‌ ಅವರ ಅಪ್ಪ’ ಎಂದು ಸಂಬೋಧಿಸಿ ಲೇವಡಿ ಮಾಡಿದ್ದರು.

ಅದರ ಬೆನ್ನಲ್ಲೇ ವಿಜಯವಾಡದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ನಾಯ್ಡು ಅವರು ಮೋದಿ ವೈವಾಹಿಕ ಜೀವನವನ್ನು ಕೆದಕಿದರು.

‘ನನ್ನನ್ನು ನಾರಾ ಲೋಕೇಶ್‌ ಅಪ್ಪ ಎನ್ನುವುದಾದರೆ, ನಾನು ನಿಮ್ಮನ್ನು ಜಶೋದಾ ಬೆನ್‌ ಪತಿ ಎಂದು ಕರೆಯಬಹುದೇ’ ಎಂದು ನಾಯ್ಡು ಪ್ರಶ್ನಿಸಿದ್ದಾರೆ.

‘ನಾರಾ ಲೋಕೇಶ್‌ನ ಅಪ್ಪ ಎಂದು ಗುರುತಿಸಿಕೊಳ್ಳಲು ಹೆಮ್ಮೆಯಾಗುತ್ತದೆ. ಭುವನೇಶ್ವರಿಯ ಪತಿ ಎಂದು ಕರೆಸಿಕೊಳ್ಳಲು ಗರ್ವ ಪಡುತ್ತೇನೆ. ದೇವಾಂಶನ ಅಜ್ಜ ಎಂದು ಕರೆದರೆ ಸಂತೋಷ ಇಮ್ಮಡಿಯಾಗುತ್ತದೆ. ಒಟ್ಟಾರೆ ಕೌಂಟುಂಬಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಬಗ್ಗೆ ನನಗೆ ಹೆಮ್ಮೆ ಇದೆ’ ಎಂದು ನಾಯ್ಡು ಭಾವುಕರಾಗಿ ಹೇಳಿದರು.

‘ಕೈ ಹಿಡಿದ ಪತ್ನಿ ಜಶೋದಾ ಬೆನ್‌ ಅವರ ಜತೆ ಸಂಸಾರ ಮಾಡದೆ, ವಿಚ್ಛೇದನವನ್ನೂ ನೀಡದೆ ಆ ಮಹಿಳೆಯನ್ನು ಕೈಬಿಟ್ಟ ನಿಮ್ಮನ್ನು ಒಳ್ಳೆಯ ಗಂಡ ಎಂದು ಕರೆಯಲು ಸಾಧ್ಯವೇ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಇದು ತೀರಾ ವೈಯಕ್ತಿಕ ವಿಷಯವಾದ್ದರಿಂದ ಸಾರ್ವಜನಿಕವಾಗಿ ಪ್ರಸ್ತಾಪಿಸಲು ಮುಜುಗರವಾಗುತ್ತದೆ. ಎಂತಹ ಕಡು ವಿರೋಧಿಯಾದರೂ ಅವರ ವೈಯಕ್ತಿಕ ವಿಷಯಗಳನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುವುದು ನನ್ನ ಜಾಯಮಾನವಲ್ಲ. ಆದರೆ, ಅಂಥ ಅನಿವಾರ್ಯ ಸ್ಥಿತಿಯನ್ನು ನೀವೇ ಸೃಷ್ಟಿಸಿದ್ದೀರಿ. ನಿಮ್ಮ ಹೇಳಿಕೆಗಳು ನಿಜಕ್ಕೂ ನೋವು ತಂದಿದೆ’ ಎಂದು ನಾಯ್ಡು ಅವರು ಮೋದಿ ವಿರುದ್ಧ ಹರಿಹಾಯ್ದರು.

‘ನನ್ನನ್ನು ನಿಂದಿಸುವ ಸಲುವಾಗಿಯೇ ಪ್ರಧಾನಿ ಮೋದಿ ಅವರು ದೆಹಲಿಯಿಂದ ಇಲ್ಲಿಯವರೆಗೆ ಬಂದಿದ್ದರು. ಜಗನ್‌ ಮೋಹನ್‌ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್‌ ಪಕ್ಷವು ರ‍್ಯಾಲಿಗೆ ಕರೆ ತಂದಿದ್ದ ಜನರು ಮೋದಿ ಮಾತುಗಳಿಗೆ ಮರುಳಾಗಲಿಲ್ಲ’ ಎಂದರು.

ಎಲ್ಲ ರಂಗಗಳಲ್ಲಿಯೂ ಗುಜರಾತ್‌ಗಿಂತ ವೇಗವಾಗಿ ಬೆಳೆಯುತ್ತಿರುವ ಆಂಧ್ರ ಪ್ರದೇಶದ ಅಭಿವೃದ್ಧಿ ಕಂಡು ಪ್ರಧಾನಿಗೆ ಮತ್ಸರವಾಗಿದೆ. ಇದೇ ಕಾರಣಕ್ಕೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಲು ಅವರು ನಿರಾಕರಿಸಿದರು ಎಂದು ನಾಯ್ಡು ದೂರಿದರು.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಬೇಡಿಕೆಯ ಬಗ್ಗೆ ವೈಎಸ್‌ಆರ್‌ ಕಾಂಗ್ರೆಸ್‌ ಮುಖಂಡ ಜಗನ್‌ ರೆಡ್ಡಿ ಮೌನವಾಗಿದ್ದರು. ಎಲ್ಲಿ ಪ್ರಧಾನಿ ಮೋದಿ ತಮ್ಮ ವಿರುದ್ಧ ಮತ್ತೆ ಸಿಬಿಐ ತನಿಖೆ ಆರಂಭಿಸಬಹುದು ಎಂಬ ಭೀತಿ ಅವರನ್ನು ಕಾಡುತ್ತಿದೆ ಎಂದರು.

‘ಜಗನ್‌ ಅವರಂತೆ ನನಗೆ ಯಾವ ಭೀತಿಯೂ ಇಲ್ಲ. ಬಿಜೆಪಿಯನ್ನು ಧೈರ್ಯದಿಂದ ಎದುರಿಸುವ ತಾಕತ್ತು ನನಗಿದೆ. ಮೋದಿ ಪ್ರಾದೇಶಿಕ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ. ಮೋದಿ ಅವರಿಂದ ದೇಶವನ್ನು ರಕ್ಷಿಸಲು ತೆಲುಗುದೇಶಂ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸುತ್ತಿದೆ ಎಂದರು.

ಶಿಷ್ಟಾಚಾರಕ್ಕೆ ಎಳ್ಳುನೀರು

ಭಾನುವಾರ ಆಂಧ್ರ ಪ್ರದೇಶಕ್ಕೆ ಬಂದಿಳಿದ ಪ್ರಧಾನಿಯನ್ನು ಸ್ವಾಗತಿಸಲು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ಸಂಪುಟ ಸಹೋದ್ಯೋಗಿಗಳು ತೆರಳಲಿಲ್ಲ.

ರಾಜ್ಯಪಾಲ ಇಎಸ್‌ಎಲ್‌ ನರಸಿಂಹನ್‌, ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಬಿಜೆಪಿ ನಾಯಕರು ಮಾತ್ರ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯನ್ನು ಸ್ವಾಗತಿಸಿದರು.

‘ರಾಜಕೀಯ ಕಾರಣಗಳಿಗಾಗಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಆಂಧ್ರ ಪ್ರದೇಶಕ್ಕೆ ಅನ್ಯಾಯ ಮಾಡಿದ ಮೋದಿ ಈಗ ನಮ್ಮ ಮೇಲೆ ಯುದ್ಧ ಸಾರಲು ರಾಜ್ಯಕ್ಕೆ ಬಂದಿದ್ದಾರೆ’ ಎಂದು ನಾಯ್ಡು ಹೇಳಿದ್ದಾರೆ.

ಮೋದಿ ಭೇಟಿ ವಿರುದ್ಧ ಕರಾಳ ದಿನಾಚರಣೆ

ಪ್ರಧಾನಿ ಮೋದಿ ಭೇಟಿ ವಿರೋಧಿಸಿ ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಪ್ರತಿಭಟನೆ, ಧರಣಿ ಭುಗಿಲೆದ್ದಿವೆ.

ಆಂಧ್ರ ಪ್ರದೇಶದಲ್ಲಿ ಟಿಡಿಪಿ, ಕಾಂಗ್ರೆಸ್‌ ಮತ್ತು ಎಡ ಪಕ್ಷಗಳು ಸೇರಿದಂತೆ ವಿರೋಧ ಪಕ್ಷಗಳು ಕರಾಳ ದಿನಾಚರಣೆಗೆ ಕರೆ ನೀಡಿದ್ದವು.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದಿಯಾಗಿ ಟಿಡಿಪಿ ನಾಯಕರು ಕಪ್ಪುಬಟ್ಟೆ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಎರಡೂ ರಾಜ್ಯಗಳಲ್ಲಿ ‘ಮೋದಿ ಗೋ ಬ್ಯಾಕ್‌’ ಅಭಿಯಾನ ತೀವ್ರಗೊಂಡಿದ್ದು, ಕಪ್ಪು ಬಾವುಟ ಪ್ರದರ್ಶನ ಮಾಡಲಾಗಿದೆ.

ಆಂಧ್ರ ಪ್ರದೇಶದಲ್ಲಿ ಟಿಡಿಪಿ ಕಾರ್ಯಕರ್ತರು ಮತ್ತು ತಮಿಳುನಾಡಿನಲ್ಲಿ ವೈಕೊ ನೇತೃತ್ವದಲ್ಲಿ ಅವರ ಎಂಡಿಎಂಕೆ ಪಕ್ಷದ ಕಾರ್ಯಕರ್ತರು ಕಪ್ಪು ಬಲೂನ್‌ ಹಾರಿ ಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರ ತಮ್ಮ ರಾಜ್ಯಗಳಿಗೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿರುವ ‘ಮೋದಿ ಗೋ ಬ್ಯಾಕ್‌’ ಅಭಿಯಾನಕ್ಕೆ ಭಾರಿ ಬೆಂಬಲ ಮತ್ತು ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿಯು ‘ಮೋದಿಗೆ ಸ್ವಾಗತ’ ಅಭಿಯಾನ ಅರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT