ಕೊಯಮತ್ತೂರು: ವಲಸೆ ಕಾರ್ಮಿಕನೊಬ್ಬ, ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ (ಸಿಎಂಸಿಎಚ್) ವೈದ್ಯ ವಿದ್ಯಾರ್ಥಿನಿಯ ಮಾನಭಂಗಕ್ಕೆ ಯತ್ನಿಸಿದ ಆರೋಪ ಕೇಳಿಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ, ಮಧ್ಯಪ್ರದೇಶದ ಮಯಂಕ್ ಗಲ್ಲರ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಸಹೋದ್ಯೋಗಿಗಳ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, 150 ತರಬೇತಿ ವೈದ್ಯರು ಕಾಲೇಜಿನ ಡೀನ್ ಕಚೇರಿ ಮುಂದೆ ಗುರುವಾರ ಧರಣಿ ನಡೆಸಿದ್ದಾರೆ.
‘ವೈದ್ಯ ವಿದ್ಯಾರ್ಥಿನಿಯ ಹಾಸ್ಟೆಲ್ ಮತ್ತು ಆಡಳಿತ ವಿಭಾಗದ ನಡುವೆ ದ್ವಿಚಕ್ರ ವಾಹನಗಳ ಪಾರ್ಕಿಂಗ್ ಜಾಗವಿದೆ. ತನ್ನ ದ್ವಿಚಕ್ರ ವಾಹನ ತೆಗೆದಕೊಳ್ಳಲು ಹೋದಾಗ ಆಕೆಯ ಮಾನಭಂಗದ ಯತ್ನ ನಡೆದಿದೆ’ ಎಂದು ಪೊಲೀಸರು ಹೇಳಿದ್ದಾರೆ.
‘ತನ್ನ ಮಾನಭಂಗಕ್ಕೆ ಯತ್ನಿಸಿದ್ದ ಎನ್ನಲಾದ ವ್ಯಕ್ತಿಯನ್ನು ತಳ್ಳಿ, ಆಕೆ ಆ ಸ್ಥಳದಿಂದ ಪರಾರಿಯಾಗಿದ್ದಾಳೆ. ತನಗಾದ ತೊಂದರೆ ಕುರಿತು ಆಕೆ ನೀಡಿದ ಮಾಹಿತಿ ಮೇರೆಗೆ, ವಿದ್ಯಾರ್ಥಿಗಳ ಗುಂಪೊಂದು ಸ್ಥಳಕ್ಕೆ ಬಂದಿದೆ. ಆಗ, ಆರೋಪಿ ಪರಾರಿಯಾದ. ನಂತರ, ಆತನನ್ನು ಬಂಧಿಸಲಾಯಿತು’ ಎಂದಿದ್ದಾರೆ.
ಘಟನೆಗೆ ಸಂಬಂಧಿಸಿ, ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 74 ಹಾಗೂ ತಮಿಳುನಾಡು ಮಹಿಳೆಯರ ವಿರುದ್ಧ ದೌರ್ಜನ್ಯ ತಡೆ ಕಾಯ್ದೆ ಸೆಕ್ಷನ್ 4ರಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದೂರು: ‘ಬುಧವಾರ ರಾತ್ರಿ 9.30ರ ಹೊತ್ತಿಗೆ ಈ ಘಟನೆ ನಡೆದಿದೆ. ಘಟನೆ ಕುರಿತು ಆಸ್ಪತ್ರೆಯ ಆಡಳಿತಕ್ಕೆ ಹಾಗೂ ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಲಾಯಿತು’ ಎಂದು ಆಸ್ಪತ್ರೆಯ ಡೀನ್ ಡಾ.ನಿರ್ಮಲಾ ಹೇಳಿದ್ದಾರೆ.