ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆತ್ಮನಿರ್ಭರ’ದಲ್ಲಿ ಖಾಸಗಿ ರಂಗಕ್ಕೆ ಹೆಚ್ಚು ಅವಕಾಶ: ಮೋದಿ

‘ಕೃಷಿ ಕ್ಷೇತ್ರಕ್ಕೆ ಇನ್ನಷ್ಟು ಸುಧಾರಣೆ ಬೇಕು
Last Updated 20 ಫೆಬ್ರುವರಿ 2021, 20:54 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಸ್ವಾವಲಂಬನೆಯ ಗುರಿ ಸಾಧನೆಯಲ್ಲಿ ಖಾಸಗಿ ಕ್ಷೇತ್ರಕ್ಕೆ ಮಹತ್ವದ ಪಾತ್ರವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೃಷಿ ಕ್ಷೇತ್ರಕ್ಕೆ ಉತ್ತಮವಾದ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಒದಗಿಸಲು ಇನ್ನಷ್ಟು ಸುಧಾರಣೆಗಳ ಅಗತ್ಯವಿದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.

ನೀತಿ ಆಯೋಗದ ಆಡಳಿತ ಮಂಡಳಿಯ ಸಭೆಯನ್ನು ಉದ್ದೇಶಿಸಿ ಮೋದಿ ಅವರು ಶನಿವಾರ ಮಾತನಾಡಿದರು.

ದೇಶದ ಅಭಿವೃದ್ಧಿಯ ಪಯಣದಲ್ಲಿ ಖಾಸಗಿ ರಂಗವು ಹೆಚ್ಚು ಹುರುಪಿನಿಂದ ಭಾಗಿಯಾಗುತ್ತಿದೆ. ಈ ಉತ್ಸಾಹ ಮತ್ತು ಚೈತನ್ಯವನ್ನು ಸರ್ಕಾರವು ಗೌರವಿಸಬೇಕು. ಹಾಗಾಗಿಯೇ ಆತ್ಮನಿರ್ಭರ ಭಾರತ ಅಭಿಯಾನದಲ್ಲಿ ಖಾಸಗಿ ಕ್ಷೇತ್ರಕ್ಕೆ ಹೆಚ್ಚು ಅವಕಾಶಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ನಕ್ಷೆ ದತ್ತಾಂಶಕ್ಕೆ ಸಂಬಂಧಿಸಿದ ನಿರ್ಬಂಧಗಳನ್ನು ಸಡಿಲಗೊಳಿಸಿದ ಕ್ರಮವನ್ನು ಅವರು ಉಲ್ಲೇಖಿಸಿದರು. ಹತ್ತು ವರ್ಷಗಳ ಹಿಂದೆಯೇ ಈ ಸುಧಾರಣೆಗಳನ್ನು ಜಾರಿಗೆ ತಂದಿದ್ದರೆ ಗೂಗಲ್‌ನಂತಹ ಸಂಸ್ಥೆಗಳು ಭಾರತದಲ್ಲಿ ಸ್ಥಾಪನೆಯಾಗುತ್ತಿದ್ದವು. ‘ಪ್ರತಿಭೆ ನಮ್ಮ ದೇಶದ ಜನರದ್ದು, ಆದರೆ ಉತ್ಪನ್ನವು ನಮ್ಮದು ಅಲ್ಲ’ ಎಂದು ಅವರು ಹೇಳಿದರು. ನಕ್ಷೆ ಕ್ಷೇತ್ರದ ಸುಧಾರಣೆಯು ನವೋದ್ಯಮ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ದೊಡ್ಡ ಮಟ್ಟದಲ್ಲಿ ನೆರವು ನೀಡಲಿದೆ ಎಂದರು.

ಖಾದ್ಯ ತೈಲದಂತಹ ಕೃಷಿ ಉತ್ಪನ್ನಗಳನ್ನು ಹೆಚ್ಚಿಸಲು ಪ್ರಯತ್ನಿಸಬೇಕು ಮತ್ತು‍ ಈ ಮೂಲಕ ಆಮದನ್ನು ಕಡಿತ ಮಾಡಬೇಕು. ಪ್ರತಿ ವರ್ಷ ಖಾದ್ಯ ತೈಲ ಆಮದಿಗೆ ₹ 65 ಸಾವಿರ ಕೋಟಿಯಿಂದ ₹ 70 ಸಾವಿರ ಕೋಟಿ ವೆಚ್ಚವಾಗುತ್ತಿದೆ. ಈ ಮೊತ್ತವು ನಮ್ಮ ರೈತರಿಗೆ ಸಿಗಬೇಕು. ಹಲವು ಉತ್ಪನ್ನಗಳು ಆಮದಾಗುತ್ತಿವೆ. ಇಂತಹ ಉತ್ಪನ್ನಗಳನ್ನು ಬೆಳೆಯಲು ಭಾರತದ ರೈತರಿಗೆ ಕಷ್ಟವೇನೂ ಇಲ್ಲ. ಸ್ವಲ್ಪ ಮಾರ್ಗದರ್ಶನವಷ್ಟೇ ಅವರಿಗೆ ಬೇಕಾಗಿರುವುದು ಎಂದರು.

ಆಯಾ ಪ್ರದೇಶದ ಹವಾಮಾನಕ್ಕೆ ಅನುಗುಣವಾದ ಬೆಳೆ ಬೆಳೆಯಲು ರಾಜ್ಯ ಸರ್ಕಾರಗಳು ರೈತರಿಗೆ ನೆರವು ನೀಡಬೇಕು.ಹಳೆಯ ಮತ್ತು ಅಪ್ರಸ್ತುತ ಎನಿಸಿದ ಕಾಯ್ದೆಗಳನ್ನು ರದ್ದುಪಡಿಸಬೇಕು. ಆ ಮೂಲಕ ಭಾರತದಲ್ಲಿ ವ್ಯಾಪಾರ ಮಾಡುವುದನ್ನು ಸುಲಭಗೊಳಿಸಬೇಕು. ಆರ್ಥಿಕ ಪ್ರಗತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚು ನಿಕಟವಾಗಿ ಕೆಲಸ ಮಾಡಬೇಕು ಎಂದು ಮೋದಿ ಹೇಳಿದ್ದಾರೆ.

***

ಆತ್ಮನಿರ್ಭರ ಭಾರತ ಅಭಿಯಾನದ ಉದ್ದೇಶ ಭಾರತದ ಸ್ವಾವಲಂಬನೆ ಮಾತ್ರ ಅಲ್ಲ, ಜಗತ್ತಿನ ಅಗತ್ಯಗಳನ್ನೂ ಅದು ಪೂರೈಸಬೇಕು.
-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT