ನವದೆಹಲಿ: ಹೊಸ ಸಂಸತ್ ಭವನದಲ್ಲಿ ಎರಡನೇ ದಿನದ ಕಲಾಪ ಶುರುವಾಗುವುದಕ್ಕೆ ಕೆಲವೇ ಗಂಟೆಗಳಿಗೂ ಮೊದಲು ಹಳೆಯ ಸಂಸತ್ ಭವನವು ರಂಗುರಂಗಿನ ಉಡುಪು ತೊಟ್ಟಿದ್ದ ಉಭಯ ಸದನಗಳ ಸದಸ್ಯರಿಂದ ತುಂಬಿ ತುಳುಕುತ್ತಿತ್ತು.
ವಾಗ್ವಾದ, ಆರೋಪ–ಪ್ರತ್ಯಾರೋಪ ಸೇರಿದಂತೆ ಹಲವು ಘಟನೆಗಳಿಗೆ ಸಾಕ್ಷಿಯಾಗಿದ್ದ ಹಳೆಯ ಭವನಕ್ಕೆ ವಿದಾಯ ಹೇಳುವ ಭಾಗವಾಗಿ ಸಂಸದರು ಗುಂಪು ಫೋಟೊ ಕ್ಲಿಕ್ಕಿಸಿಕೊಂಡರು.
ರಾಜ್ಯಸಭೆ ಸಭಾಪತಿ ಜಗದೀಪ್ ಧನಕರ್, ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪೀಕರ್ ಓಂ ಬಿರ್ಲಾ ಅವರು ಮೊದಲ ಸಾಲಿನ ಮಧ್ಯದಲ್ಲಿ ಆಸೀನರಾದರು.
ಅವರೊಟ್ಟಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣ ಸಚಿವ ರಾಜನಾಥ ಸಿಂಗ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಸಮಾಜವಾದಿ ಪಕ್ಷದ ಸಂಸದ ಶಫೀಕ್ ಉರ್ ರಹಮಾನ್ ಬಾರ್ಕ್ (93 ವರ್ಷ), ಎನ್‌ಸಿಪಿ ನಾಯಕ ಶರದ್ ಪವಾರ್, ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮೊದಲ ಸಾಲಿನಲ್ಲಿಯೇ ಕುಳಿತುಕೊಂಡರು.
ಸಂಸದೆಯರು ಬಣ್ಣ ಬಣ್ಣದ ಸೀರೆಗಳನ್ನು ತೊಟ್ಟು ಆಗಮಿಸಿದ್ದರು. ಬಹುತೇಕ ಸಂಸದರು ಬಿಳಿ ಕುರ್ತಾ ಹಾಗೂ ಪೈಜಾಮ ಜೊತೆಗೆ ಅರ್ಧ ತೋಳಿನ ಕೋಟ್ ಧರಿಸಿದ್ದರು.
ಪ್ರಜ್ಞೆ ತಪ್ಪಿದ ಸಂಸದ: ಬೆಳಿಗ್ಗೆ ಆರಂಭವಾದ ಕಲಾಪದಲ್ಲಿ ಬಿಜೆಪಿ ರಾಜ್ಯಸಭೆ ಸದಸ್ಯ ನರಹರಿ ಅಮೀನ್ ಕುಸಿದು ಬಿದ್ದರು. ಈ ವೇಳೆ ಸಚಿವರಾದ ಅಮಿತ್ ಶಾ, ಪಿಯೂಷ್ ಗೋಯಲ್ ಸೇರಿದಂತೆ ಹಲವು ಸದಸ್ಯರು ಕೂಡಲೇ ಅವರ ರಕ್ಷಣೆಗೆ ಧಾವಿಸಿದರು. ಅಧಿಕಾರಿಗಳು ಅವರಿಗೆ ಕುಡಿಯಲು ನೀರು ಕೊಟ್ಟ ಬಳಿಕ ಸುಧಾರಿಸಿಕೊಂಡ ಅಮೀನ್, ಬಳಿಕ ಗುಂಪು ಫೋಟೊ ಸೆಷನ್‌ಗೆ ಹಾಜರಾದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೊನೆಯಿಂದ ಎರಡನೇ ಸಾಲಿನಲ್ಲಿ ನಿಂತುಕೊಂಡರು. ಅವರೊಟ್ಟಿಗೆ ಮನೀಶ್ ತಿವಾರಿ ಇದ್ದರು. ಮೊದಲಿಗೆ ಮೇಲ್ಮನೆ ಸದಸ್ಯರ ಫೋಟೊ ಕ್ಲಿಕ್ಕಿಸಲಾಯಿತು. ಬಳಿಕ ಕೆಳಮನೆಯ ಸದಸ್ಯರು ಕ್ಯಾಮೆರಾ ಕಣ್ಣಿಗೆ ಸೆರೆಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.