ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾವಿನಹಣ್ಣಿಗಾಗಿ ನಡೆದಿದ್ದ ‘ಕೊಲೆ’; ಶಿಕ್ಷೆಯ ಪ್ರಮಾಣ ತಗ್ಗಿಸಿದ ಸುಪ್ರೀಂ ಕೋರ್ಟ್

Published : 6 ಆಗಸ್ಟ್ 2024, 15:17 IST
Last Updated : 6 ಆಗಸ್ಟ್ 2024, 15:17 IST
ಫಾಲೋ ಮಾಡಿ
Comments

ನವದೆಹಲಿ: ಮಾವಿನಹಣ್ಣಿಗಾಗಿ 40 ವರ್ಷದ ಹಿಂದೆ ನಡೆದಿದ್ದ ಜಗಳದಲ್ಲಿ ವ್ಯಕ್ತಿಯೊಬ್ಬರ ಸಾವಿಗೆ ಸಂಬಂಧಿಸಿ ಮೂವರ ವಿರುದ್ಧ ದಾಖಲಿಸಲಾಗಿದ್ದ ಕೊಲೆ ಪ್ರಕರಣವನ್ನು ‘ಕೊಲೆ ಉದ್ದೇಶವಿಲ್ಲದ ಹಲ್ಲೆ ಪ್ರಕರಣ’ವಾಗಿ ಪರಿವರ್ತಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ಅಲ್ಲದೆ, ಈ ಪ್ರಕರಣದಲ್ಲಿ ಮನ್‌ ಬಹದ್ದೂರ್ ಸಿಂಗ್, ಭರತ್ ಸಿಂಗ್, ಭಾನುಪ್ರತಾಪ್‌ ಸಿಂಗ್ ಅವರಿಗೆ ವಿಧಿಸಲಾಗಿದ್ದ ಜೀವಾವಧಿ ಸಜೆ ಬದಲಿಗೆ, ಏಳು ವರ್ಷಗಳ ಸೆರೆವಾಸ ಮತ್ತು ತಲಾ ₹25 ಸಾವಿರ ದಂಡ ವಿಧಿಸಿ ಸುಪ್ರೀಂ ಕೋರ್ಟ್‌ ಪೀಠವು ಮಂಗಳವಾರ ಆದೇಶಿಸಿತು.

ದಂಡದ ಒಟ್ಟು ಮೊತ್ತವನ್ನು ಮೃತನ ಕುಟುಂಬದವರಿಗೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅಹಸಾನುದ್ದೀನ್ ಅಮಾನ್‌ಉಲ್ಲಾ ಅವರಿದ್ದ ಪೀಠ ಆದೇಶಿಸಿತು.

ಏಪ್ರಿಲ್‌ 19, 1984ರಂದು ಎರಡು ಕುಟುಂಬಗಳಿಗೆ ಸೇರಿದ್ದ ನಾಲ್ವರು ಬಾಲಕರ ನಡುವೆ ಜಗಳವಾಗಿತ್ತು. ಜಗಳದಲ್ಲಿ ಭಾಗಿಯಾಗಿದ್ದ ಬಾಲಕ ಡಬ್ಬುವಿನ ತಂದೆ ವಿಶ್ವನಾಥ್ ಸಿಂಗ್ ಮೇಲೆ ಹಲ್ಲೆ ನಡೆದಿತ್ತು. 


ಐವರು ಆರೋಪಿಗಳು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಿಸಲಾಗಿತ್ತು. ಅಲಹಾಬಾದ್ ಹೈಕೋರ್ಟ್‌ನಲ್ಲಿ ಮೇಲ್ಮನವಿ ವಿಚಾರಣೆಯಲ್ಲಿ ಇರುವಾಗಲೇ ಇಬ್ಬರು ಆರೋಪಿಗಳು ಮೃತಪಟ್ಟಿದ್ದರು.


‘ಸಾಕ್ಷಿಗಳ ಹೇಳಿಕೆ ಗಮನಿಸಿದರೆ, ಈ ಕೊಲೆಯು ಪೂರ್ವನಿಯೋಜಿತವಲ್ಲ. ಮಾವಿನಹಣ್ಣಿಗಾಗಿ ಮಕ್ಕಳ ನಡುವೆ ಜಗಳ ಆರಂಭವಾಗಿದೆ. ನಂತರ ಜಗಳದಲ್ಲಿ ಹಿರಿಯರೂ ಸೇರಿದ್ದಾರೆ. ಅಂತಿಮವಾಗಿ ವಯಸ್ಕರೊಬ್ಬರ ಸಾವಿನಲ್ಲಿ ಜಗಳ ಅಂತ್ಯವಾಗಿದೆ’ ಎಂದು ಹೇಳಿತು.


‘ಗಾಯದ ಸ್ವರೂಪ, ಅಪರಾಧಲ್ಲಿ ಬಳಕೆಯಾಗಿದ್ದ ಆಯುಧದ (ಲಾಠಿ) ಹಿನ್ನೆಲೆಯಲ್ಲಿ ಇದು, ಕೊಲೆ ಉದ್ದೇಶವಿಲ್ಲದಿದ್ದ ಹಲ್ಲೆ ಪ್ರಕರಣ. ಕೊಲೆ ಪ್ರಕರಣವಲ್ಲ’ ಎಂದು ಹೇಳಿತು. ಕೆಳಹಂತದ ಕೋರ್ಟ್‌ ವಿಧಿಸಿದ್ದ ಶಿಕ್ಷೆಯ ಪ್ರಮಾಣವನ್ನು ತಗ್ಗಿಸಿ, ದಂಡ ವಿಧಿಸಿ ಆದೇಶಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT