ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಚಾರವಾದಿ ದಾಬೋಲ್ಕರ್ ಹತ್ಯೆ ಪ್ರಕರಣ: ಆರೋಪಿಗಳ ಖುಲಾಸೆ ಪ್ರಶ್ನಿಸಿ HC ಮೊರೆ

Published : 21 ಆಗಸ್ಟ್ 2024, 13:42 IST
Last Updated : 21 ಆಗಸ್ಟ್ 2024, 13:42 IST
ಫಾಲೋ ಮಾಡಿ
Comments

ಮುಂಬೈ: ವಿಚಾರವಾದಿ ನರೇಂದ್ರ ದಾಬೋಲ್ಕರ್ ಹತ್ಯೆಯ ಆರೋಪಿಗಳನ್ನು ಖುಲಾಸೆ ಮಾಡಿದ ಸೆಷನ್ಸ್‌ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ಗೆ ಮುಕ್ತಾ ದಾಬೋಲ್ಕರ್‌ ಅರ್ಜಿ ಸಲ್ಲಿಸಿದ್ದಾರೆ.

ಅಪರಾಧ ಕೃತ್ಯದಲ್ಲಿ ಭಾಗಿಯಾದ ಹಾಗೂ ಕಾನೂನು ಬಾಹಿರ ಚಟುವಟಿಕೆ ಕಾರ್ಯ (ಯುಎಪಿಎ) ಎಸಗಿದ ಆರೋಪಗಳಡಿ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಅವರು ಅರ್ಜಿಯಲ್ಲಿ ಕೋರಿದ್ದಾರೆ.

ತಮ್ಮ ತಂದೆಯ ಹತ್ಯೆಯು ಅತ್ಯಂತ ಯೋಜಿತ ಕೃತ್ಯವಾಗಿದ್ದು, ಇದರ ಹಿಂದೆ ದೊಡ್ಡ ಪಿತೂರಿಯೇ ನಡೆದಿದೆ ಎಂದು ಮುಕ್ತಾ ಅವರು ಆರೋಪಿಸಿದ್ದಾರೆ. ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ರೇವತಿ ಮೋಹಿತೆ ದೆರೆ ಹಾಗೂ ನ್ಯಾ. ಪೃಥ್ವಿರಾಜ್ ಚವ್ಹಾಣ್ ಅವರಿದ್ದ ವಿಭಾಗೀಯ ಪೀಠವು, ಎದುರಗಾರರಿಗೆ ಮತ್ತು ತನಿಖೆ ನಡೆಸಿದ ಕೇಂದ್ರೀಯ ತನಿಖಾ ತಂಡ (ಸಿಬಿಐ)ಕ್ಕೆ ನೋಟಿಸ್ ಜಾರಿ ಮಾಡಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ. 23ಕ್ಕೆ ಮುಂದೂಡಿತು.

‘ಕೃತ್ಯದಲ್ಲಿ ಭಾಗಿಯಾದವರು ಹಾಗೂ ಖುಲಾಸೆಗೊಂಡ ಮೂವರನ್ನು ಒಳಗೊಂಡು ಬಲಪಂಥೀಯ ಸನಾತನ ಸಂಸ್ಥಾದ ಸದಸ್ಯರು ಎಂಬ ಸತ್ಯವನ್ನು ಒಪ್ಪಿಕೊಳ್ಳುವಲ್ಲಿ ಸೆಷನ್ಸ್‌ ನ್ಯಾಯಾಲಯ ವಿಫಲವಾಗಿದೆ’ ಎಂದು ಮುಕ್ತಾ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.

‘ದಾಬೋಲ್ಕರ್ ಅವರು ಸನಾತನ ಸಂಸ್ಥೆ, ಹಿಂದೂ ಜನ ಜಾಗರಣ ಸಮಿತಿ ಹಾಗೂ ಇಂಥದ್ದೇ ಇತರ ಸಂಸ್ಥೆಗಳ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು’ ಎಂದಿದ್ದಾರೆ. 

ನರೇಂದ್ರ ದಾಬೋಲ್ಕರ್ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದ ವೀರೇಂದ್ರ ಸಿಂಗ್‌ ತಾವಡೆ, ಸಂಜೀವ್ ಪುಣಲೇಕರ್ ಹಾಗೂ ವಿಕ್ರಂ ಭಾವೆ ಅವರನ್ನು ಸೆಷನ್ಸ್‌ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಇನ್ನಿಬ್ಬರು ಆರೋಪಿಗಳಾದ ಸಚಿನ್ ಅಂದೂರೆ ಹಾಗೂ ಶಾರದಾ ಕಳಸ್ಕರ್‌ ಅವರನ್ನೂ ಈ ಮೊದಲು ಖುಲಾಸೆಗೊಳಿಸಲಾಗಿತ್ತು.

‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿಯ ಸಂಸ್ಥಾಪಕರಾಗಿದ್ದ ನರೇಂದ್ರ ದಾಬೋಲ್ಕರ್ ಅವರನ್ನು 2013ರ ಆ. 20ರಂದು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆಗೈದಿದ್ದರು. ಅಂದೂರೆ ಹಾಗೂ ಕಳಸ್ಕರ್ (ಶೂಟರ್) ಎಂಬಿಬ್ಬರ ಮೇಲಿನ ಆರೋಪ ಸಾಬೀತಾಗಿದೆ ಎಂದು ಕೆಳಹಂತದ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿ ಕಳೆದ ಮೇ 10ರಂದು ಆದೇಶಿಸಿತ್ತು. ಕಾನೂನು ಬಾಹಿರ ಚಟುವಟಿಕೆ ಕಾರ್ಯ (ಯುಎಪಿಎ) ಅಡಿಯಲ್ಲಿ ಹಾಗೂ ಅಪರಾಧ ಸಂಚಿನ ಆರೋಪದಡಿ ಶಿಕ್ಷೆ ವಿಧಿಸಲು ಸೂಕ್ತ ಪುರಾವೆಗಳಿಲ್ಲ ಎಂಬ ಕಾರಣ ನೀಡಿ ಸೆಷನ್ಸ್‌ ನ್ಯಾಯಾಲಯ ಹೇಳಿದ್ದು ಸರಿಯಲ್ಲ’ ಎಂದು ಅರ್ಜಿಯಲ್ಲಿ ಹೇಳಿದ್ದಾರೆ.

‘ತನಿಖೆ ನಡೆಸಿದ ಸಂಸ್ಥೆಯು ಎಲ್ಲಾ ಅಗತ್ಯ ಹಾಗೂ ಸೂಕ್ತ ದಾಖಲೆಗಳನ್ನು ಒದಗಿಸಿತ್ತು. ಇವು ಯಾವುವೂ ಅನುಮಾನಕ್ಕೆ ಎಡೆಮಾಡಿಕೊಂಡುವಂತಿರಲಿಲ್ಲ. ಡಾ. ನರೇಂದ್ರ ದಾಬೋಲ್ಕರ್ ಹತ್ಯೆಯಲ್ಲಿ ಈ ಎಲ್ಲಾ ಆರೋಪಿಗಳೂ ಪಿತೂರಿ ಮಾಡಿದ್ದರು’ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT