ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಭೋಲ್ಕರ್ ಹತ್ಯೆ ಪ್ರಕರಣ: 'ಸನಾತನ ಸಂಸ್ಥಾ' ಉಗ್ರ ಸಂಘಟನೆ ಎಂದ ಕಾಂಗ್ರೆಸ್ ನಾಯಕ

Published 11 ಮೇ 2024, 6:07 IST
Last Updated 11 ಮೇ 2024, 6:07 IST
ಅಕ್ಷರ ಗಾತ್ರ

ಮುಂಬೈ: ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ನೀಡಿರುವ ತೀರ್ಪು ಸಮಾಧಾನ ತಂದಿಲ್ಲ. ಬಲಪಂಥೀಯ ವಿಚಾರಧಾರೆಯುಳ್ಳ 'ಸನಾತನ ಸಂಸ್ಥಾ' ಒಂದು ಉಗ್ರ ಸಂಘಟನೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಪೃಥ್ವಿರಾಜ್‌ ಚೌಹಾಣ್‌ ಶುಕ್ರವಾರ ಹೇಳಿದ್ದಾರೆ.

ವಿಚಾರವಾದಿ ದಾಭೋಲ್ಕರ್‌ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ 'ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ' (ಯುಎಪಿಎ) ವಿಶೇಷ ನ್ಯಾಯಾಲಯ, ಶೂಟರ್‌ಗಳಾದ ಸಚಿನ್ ಅಂದುರೆ ಹಾಗೂ ಶರದ್‌ ಕಳಸ್ಕರ್‌ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹ 5 ಲಕ್ಷ ದಂಡ ವಿಧಿಸಿದೆ. ಆದರೆ, ಸಾಕ್ಷ್ಯಗಳ ಕೊರತೆ ಹಿನ್ನೆಲೆಯಲ್ಲಿ, ಪ್ರಮುಖ ಸಂಚುಕೋರ ವೀರೇಂದ್ರ ಸಿಂಗ್ ತಾವ್ಡೆ, ಸಂಜೀವ್‌ ಪುಣಾಳೇಕರ್ ಮತ್ತು ವಿಕ್ರಮ್ ಭಾವೆ ಅವರನ್ನು ಆರೋಪಮುಕ್ತಗೊಳಿಸಿ ಶುಕ್ರವಾರ ಆದೇಶಿಸಿದೆ.

ಈ ಬಗ್ಗೆ ಚೌಹಾಣ್‌ ಅಸಮಾಧಾನ ಹೊರಹಾಕಿದ್ದಾರೆ.

'ಆದೇಶ ಸಮಾಧಾನ ತಂದಿಲ್ಲ. ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥಾ ಪಾತ್ರವೇನು ಹಾಗೂ ಪ್ರಮುಖ ಸೂತ್ರದಾರಿ ಯಾರು ಎಂಬುದು ಸ್ಪಷ್ಟವಾಗಿಲ್ಲ. ಅದೇರೀತಿ, ದಾಭೋಲ್ಕರ್‌ ಹತ್ಯೆಗೂ, ಗೋವಿಂದ ಪಾನ್ಸರೆ, ಗೌರಿ ಲಂಕೇಶ್‌ ಅವರ ಹತ್ಯೆಗೂ ಏನಾದರೂ ಸಂಬಂಧವಿದೆಯೇ ಎಂಬುದು ಬಹಿರಂಗವಾಗಿಲ್ಲ' ಎಂದು ಹೇಳಿದ್ದಾರೆ.

ತಾವು 2010ರ ನವೆಂಬರ್‌ನಿಂದ 2014ರ ಸೆಪ್ಟೆಂಬರ್‌ವರೆಗೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ, ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಉಮೇಶ್‌ ಸಾರಂಗಿ ಅವರು ಭಯೋತ್ಪಾದನಾ ನಿಗ್ರಹ ದಳದ ವರದಿಯ ಆಧಾರದ ಮೇಲೆ 'ಸನಾತನ ಸಂಸ್ಥಾ'ವನ್ನು ಯುಎಪಿಎ ಅಡಿಯಲ್ಲಿ ನಿಷೇಧಿಸಬೇಕು ಎಂದು ಶಿಫಾರಸು ಮಾಡಿದ್ದರು ಎಂಬುದಾಗಿಯೂ ತಿಳಿಸಿದ್ದಾರೆ.

'ಈ ಸಂಘಟನೆಯನ್ನು ನಿಷೇಧಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಶಿಫಾರಸು ಮಾಡಿ 2014ರಲ್ಲಿ ಸಾವಿರ ಪುಟಗಳ ದಾಖಲೆ ಸಲ್ಲಿಸಿದ್ದೆವು' ಎಂದಿರುವ ಅವರು, 'ಆ ಬೇಡಿಕೆ ಇನ್ನೂ ಇತ್ಯರ್ಥವಾಗಿಲ್ಲ. ಸನಾತನ ಸಂಸ್ಥಾ ಒಂದು ಭಯೋತ್ಪಾದನೆ ಸಂಘಟನೆ' ಎಂದು ಆರೋಪಿಸಿದ್ದಾರೆ.

ಕೋರ್ಟ್‌ ಆದೇಶದ ಬಳಿಕ ಪುಣೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿರುವ ಸನಾತನ ಸಂಸ್ಥಾ ವಕ್ತಾರ ಅಭಯ್‌ ವರ್ತಕ್‌ ಅವರು ಚೌಹಾಣ್ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದ್ದಾರೆ.

'ದಾಭೋಲ್ಕರ್‌ ಅವರ ಹತ್ಯೆ 2013ರ ಆಗಸ್ಟ್‌ 20ರಂದು ಬೆಳಿಗ್ಗೆ 7.20 ಸುಮಾರಿಗೆ ನಡೆದಿತ್ತು. ಅದಾದ ಒಂದೂವರೆ ಗಂಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ಆಗಿನ ಸಿಎಂ ಚೌಹಾಣ್‌, ಹಿಂದುತ್ವವಾದಿಗಳು ಕೊಲೆ ಮಾಡಿರಬಹುದು ಎಂದು ಹೇಳಿದ್ದರು. ಆ ಮೂಲಕ ತನಿಖೆಯ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದರು' ಎಂದು ವರ್ತಕ್‌ ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT