ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರ ಖುಲಾಸೆ

Published 10 ಮೇ 2024, 11:19 IST
Last Updated 10 ಮೇ 2024, 11:19 IST
ಅಕ್ಷರ ಗಾತ್ರ

ಪುಣೆ: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 11 ವರ್ಷಗಳ ಬಳಿಕ ಪುಣೆಯ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ ಜೀವಾವಧಿ ಶಿಕ್ಷೆ ವಿಧಿಸಿದ್ದು, ಮೂವರು ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.

ಸೆಷನ್ಸ್‌ ನ್ಯಾಯಾಧೀಶ ಪಿ.ಪಿ ಜಾಧವ್‌ ಇಂದು ತೀರ್ಪು ಪ್ರಕಟಿಸಿದರು. ದೋಷಿಗಳೆಂದು ಘೋಷಿಸಲ್ಪಟ್ಟ ಸಚಿನ್‌ ಅಂದುರೆ ಹಾಗೂ ಶರದ್‌ ಕಳಸ್ಕರ್‌ಗೆ ಜೀವಾವಧಿ ಶಿಕ್ಷೆ ಜತೆಗೆ ತಲಾ ₹ 5 ಲಕ್ಷ ದಂಡ ವಿಧಿಸಲಾಗಿದೆ. ಇತರ ಮೂವರು ಆರೋಪಿಗಳಾದ ವಿರೇಂದ್ರ ಸಿಂಗ್‌ ತಾವ್ಡೆ, ವಿಕ್ರಮ್‌ ಭಾವೆ ಮತ್ತು ಸಂಜೀವ್‌ ಪುಣಾಳೇಕರ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ.

‘ಈ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ಭಯೋತ್ಪಾದನೆ ನಿಗ್ರಹ ಕಾಯ್ದೆಯ ಕೆಲ ಸೆಕ್ಷನ್‌ಗಳಡಿ ಆರೋಪಗಳನ್ನು ಹೊರಿಸಲಾಗಿತ್ತು. ಆದರೆ, ಸಂಬಂಧಪಟ್ಟ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ ಈ ಆರೋಪಗಳನ್ನು ರುಜುವಾತುಪಡಿಸಲಾಗಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

‘ಈ ಪ್ರಕರಣದಲ್ಲಿ ತಾವ್ಡೆ ಪ್ರಮುಖ ಸಂಚುಕೋರ ಎಂದು ಅರೋಪಿಸಲಾಗಿತ್ತು. ಅವರ ಮೇಲೆ ಸಂಶಯ ಪಡುವುದಕ್ಕೆ ಸಾಕಷ್ಟು ಅವಕಾಶವೂ ಇತ್ತು. ಆದರೆ, ಈ ಸಂಶಯವನ್ನು ಸಾಕ್ಷ್ಯವನ್ನಾಗಿ ಪರಿವರ್ತಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಯಿತು. ಈ ಕಾರಣದಿಂದಲೇ ಅವರನ್ನು ಎಲ್ಲ ಆರೋಪಗಳಿಂದ ಮುಕ್ತರನ್ನಾಗಿ ಮಾಡಲಾಯಿತು’ ಎಂದೂ ಹೇಳಿದೆ.

‘ಭಾವೆ ಮತ್ತು ಪುಣಾಳೇಕರ್‌ ವಿರುದ್ಧ ಸಂಶಯ ಹೊಂದಲು ಅವಕಾಶವಿದ್ದರೂ ಸಾಕ್ಷ್ಯಗಳು ಇರಲಿಲ್ಲ. ಸಾಕ್ಷ್ಯಗಳ ಕೊರತೆ ಕಾರಣದಿಂದಾಗಿ ಅವರನ್ನು ಕೂಡ ಆರೋಪಮುಕ್ತಗೊಳಿಸಲಾಗಿದೆ’ ಎಂದು ನ್ಯಾಯಾಧೀಶ ಜಾಧವ ಹೇಳಿದರು.

‘ಅಂದುರೆ ಹಾಗೂ ಕಳಸ್ಕರ್‌ ವಿರುದ್ಧ ಐಪಿಸಿ ಸೆಕ್ಷನ್‌ 302 (ಕೊಲೆ), 34 (ಒಂದೇ ಉದ್ದೇಶದಿಂದ ಕೃತ್ಯ ಎಸಗಲು ಹಲವರು ಒಟ್ಟುಗೂಡಿರುವುದು) ಅಡಿ ಮಾಡಲಾಗಿದ್ದ ಆರೋಪಗಳನ್ನು ಯಾವುದೇ ಸಂಶಯಕ್ಕೆ ಆಸ್ಪದವಿಲ್ಲದಂತೆ ಸಾಬೀತುಪಡಿಸಲಾಗಿದೆ’ ಎಂದೂ ತಿಳಿಸಿದರು.


ಇದಕ್ಕೂ ಮುನ್ನ, ‘ಈ ಪ್ರಕರಣದಲ್ಲಿ ಅಪರಾಧಿಗಳಿಗೆ ಮರಣದಂಡನೆ ಹಾಗೂ ಜೀವಾವಧಿ ಶಿಕ್ಷೆ ನೀಡುವುದಕ್ಕೆ ಅವಕಾಶ ಇದೆ. ಈ ಕುರಿತು, ಪ್ರಾಸಿಕ್ಯೂಷನ್‌ ಮತ್ತು ಪ್ರತಿವಾದಿಗಳ ಪರ ವಕೀಲರು ವಾದ ಮಂಡಿಸಬಹುದು’ ಎಂದು ನ್ಯಾಯಾಧೀಶರು ಹೇಳಿದರು.


ಆರೋಪಿಗಳ ಪರ ವಾದ ಹಾಜರಿದ್ದ ವಕೀಲ ವೀರೇಂದ್ರ ಈಚಲಕರಂಜಿಕರ್, ‘ಅಪರೂಪದಲ್ಲಿಯೇ ಅಪರೂಪ ಎಂಬ ವರ್ಗದಡಿ ಈ ಪ್ರಕರಣ ಬರುವುದಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.


‘ಅಪರಾಧಿಗಳಿಗೆ ಮರಣದಂಡನೆ ವಿಧಿಸುವಂತೆ ಕೋರುವುದಿಲ್ಲ’ ಎಂದು ಸರ್ಕಾರಿ ವಕೀಲ ಪ್ರಕಾಶ ಸೂರ್ಯವಂಶಿ ಹೇಳಿದರು.


ಎರಡೂ ಕಡೆಯವರ ವಾದಗಳನ್ನು ಆಲಿಸಿದ ನ್ಯಾಯಾಧೀಶರು, ಶಿಕ್ಷೆ ಪ್ರಕಟಿಸಿ ಆದೇಶಿಸಿದರು.

‘ವಿಷಾದನೀಯ’:
‘ಪ್ರಕರಣದ ವಿಚಾರಣೆ ವೇಳೆ, ದಾಭೋಲ್ಕರ್‌ ಅವರ ಹತ್ಯೆಯನ್ನು ಸಮರ್ಥಿಸಿ ಕೆಲ ಹೇಳಿಕೆಗಳನ್ನು ನೀಡಿರುವುದು ವಿಷಾದನೀಯ’ ಎಂದು ನ್ಯಾಯಾಧೀಶರು ಹೇಳಿದರು.

‘ಯಾವುದೇ ವ್ಯಕ್ತಿಯನ್ನು ಕೊಲೆ ಮಾಡುವುದು ದುರದೃಷ್ಟಕರ ಸಂಗತಿ. ಕೊಲೆಯನ್ನು ಸಮರ್ಥಿಸಿ ಪ್ರತಿವಾದಿಗಳ ಪರ ವಕೀಲರೂ ಕೆಲ ಹೇಳಿಕೆ ನೀಡಿದ್ದು ಸಹ ವಿಷಾದನೀಯ. ಈ ಬಗ್ಗೆ ಆರೋಪಿಗಳ ಪರ ವಕೀಲರು ಅವಲೋಕನ ಮಾಡಬೇಕು’ ಎಂದು ಅಭಿಪ್ರಾಯಪಟ್ಟರು.


ಪುತ್ರಿ ಪ್ರತಿಕ್ರಿಯೆ: ತಂದೆಯ ಹತ್ಯೆ ಪ್ರಕರಣ ಕುರಿತ ತೀರ್ಪಿಗೆ ಪ್ರತಿಕ್ರಿಯಿಸಿರುವ ದಾಭೋಲ್ಕರ್‌ ಪುತ್ರಿ ಮುಕ್ತಾ, ‘ಕೊಲೆಯ ಪ್ರಮುಖ ಸಂಚುಕೋರರು ಮುಕ್ತರಾಗಿದ್ದಾರೆ. ಶಿಕ್ಷಿತರು ಈ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು’ ಎಂದರು.


ಪುತ್ರ ಹಾಮಿದ್‌ ದಾಭೋಲ್ಕರ್,‘ಹತ್ಯೆ ಪ್ರಮುಖ ಸಂಚುಕೋರರನ್ನು ಶಿಕ್ಷೆಗೆ ಗುರಿಪಡಿಸದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ’ ಎಂದು ಪ್ರತಿಕ್ರಿಯಿಸಿದರು.


‘ದಾಭೋಲ್ಕರ್‌ ಅವರನ್ನು ಅವರು ತಳೆದಿದ್ದ ವೈಚಾರಿಕ ನಿಲುವುಗಳ ಕಾರಣದಿಂದಾಗಿ ಹತ್ಯೆ ಮಾಡಲಾಗಿದೆ ಎಂಬುದು ಆರೋಪಪಟ್ಟಿಯಿಂದ ಗೊತ್ತಾಗುತ್ತದೆ’ ಎಂದೂ ಹಾಮಿದ್‌ ಹೇಳಿದರು.


ಪ್ರಕರಣದ ವಿಚಾರಣೆ ವೇಳೆ, ಪ್ರಾಸಿಕ್ಯೂಷನ್‌ 20 ಸಾಕ್ಷಿಗಳನ್ನು ಹಾಗೂ ಪ್ರತಿವಾದಿಗಳ ಪರ ವಕೀಲರು ಇಬ್ಬರು ಸಾಕ್ಷಿಗಳನ್ನು ಪ್ರಶ್ನಿಸಿದ್ದರು.

ಮೌಢ್ಯ ವಿರೋಧಿಸಿದ್ದಕ್ಕೆ ಕೊಲೆ
ಮೂಢನಂಬಿಕೆಗಳ ವಿರುದ್ಧ ದನಿ ಎತ್ತುತ್ತಿದ್ದ ವಿಚಾರವಾದಿ ದಾಭೋಲ್ಕರ್‌  ಅವರನ್ನು 2013ರ ಆಗಸ್ಟ್‌ 20ರಂದು ಪುಣೆ ನಗರದ ಓಂಕಾರೇಶ್ವರ ಬ್ರಿಡ್ಜ್‌ ಮೇಲೆ ವಾಯುವಿಹಾರ ಮಾಡುತ್ತಿದ್ದ ವೇಳೆ ಹತ್ಯೆ ಮಾಡಲಾಗಿತ್ತು. ಬೈಕ್‌ಗಳಲ್ಲಿ ಬಂದಿದ್ದ ಇಬ್ಬರು ಗುಂಡಿಕ್ಕಿ ಅವರನ್ನು ಹತ್ಯೆ ಮಾಡಿದ್ದರು.

‘ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನಾ ಸಮಿತಿ’ ಎಂಬ ಸಂಘಟನೆ ಸ್ಥಾಪಿಸಿದ್ದ ದಾಭೋಲ್ಕರ್‌ ಮೂಢನಂಬಿಕೆಗಳ ವಿರುದ್ಧ ದೊಡ್ಡ ಹೋರಾಟ ನಡೆಸುತ್ತಿದ್ದರು. ತಾವ್ಡೆ ಸೇರಿದಂತೆ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಇತರರು ನಂಟು ಹೊಂದಿದ್ದ ‘ಸನಾತನ ಸಂಸ್ಥಾ’ ಎಂಬ ಸಂಸ್ಥೆ ದಾಭೋಲ್ಕರ್‌ ಅವರ ಕಾರ್ಯವನ್ನು ವಿರೋಧಿಸುತ್ತಿತ್ತು ಎಂದು ಪ್ರಾಸಿಕ್ಯೂಷನ್‌ ಹೇಳಿದೆ.

ಪ್ರಕರಣದ ತನಿಖೆ ಕೈಗೊಂಡಿದ್ದ ಸಿಬಿಐ ತಲೆಮರೆಸಿಕೊಂಡಿದ್ದ ಸಾರಂಗ್ ಅಕೋಲಕರ್ ಹಾಗೂ ವಿನಯ್ ಪವಾರ್ ಅವರನ್ನು ಶೂಟರ್‌ಗಳು ಎಂಬುದಾಗಿ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು. ಸಚಿನ್‌ ಅಂದುರೆ ಹಾಗೂ ಶರದ್ ಕಳಸ್ಕರ್‌ ಅವರನ್ನು ಬಂಧಿಸಿದ ನಂತರ ಈ ಇಬ್ಬರು ದಾಭೋಲ್ಕರ್‌ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು ಎಂಬುದಾಗಿ ಪೂರಕ ಆರೋಪಪಟ್ಟಿಯಲ್ಲಿ ಸಿಬಿಐ ಉಲ್ಲೇಖಿಸಿತ್ತು. ಬಳಿಕ ವಕೀಲ ಸಂಜೀವ್‌ ಪುಣಾಳೇಕರ್ ಹಾಗೂ ವಿಕ್ರಮ್‌ ಭಾವೆ ಅವರನ್ನು ಬಂಧಿಸಿದ್ದ ಸಿಬಿಐ ಇಬ್ಬರನ್ನು ಸಹಸಂಚುಕೋರರು ಎಂಬುದಾಗಿ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT