ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆ: ಮುಖ್ಯ ಆರೋಪಿಯಿಂದ ತಪ್ಪೊಪ್ಪಿಗೆ

Published 20 ಜೂನ್ 2024, 16:21 IST
Last Updated 20 ಜೂನ್ 2024, 16:21 IST
ಅಕ್ಷರ ಗಾತ್ರ

ಪಟ್ನಾ: ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಪ್ರಮುಖ ಆರೋಪಿ ಸಿಕಂದರ್ ಪ್ರಸಾದ್ ಯದುವೇಂದು, ಪರೀಕ್ಷೆ ಬರೆಯಲಿದ್ದ ನಾಲ್ಕು ಮಂದಿಗೆ ಪರೀಕ್ಷೆಗೆ ಒಂದು ದಿನ ಮೊದಲು ಪ್ರಶ್ನೆಪತ್ರಿಕೆಗಳನ್ನು ಒದಗಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೆ, ಪ್ರಶ್ನೆಪತ್ರಿಕೆ ಒದಗಿಸಲು ‍ಪ್ರತಿ ವಿದ್ಯಾರ್ಥಿಯಿಂದ ₹40 ಲಕ್ಷ ಕೇಳಿದ್ದಾಗಿಯೂ ಹೇಳಿದ್ದಾನೆ.

ಯದುವೇಂದು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ಪ್ರತಿಷ್ಠಿತ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳ ಸೋರಿಕೆಯಿಂದ ಕುಖ್ಯಾತಿ ಗಳಿಸಿರುವ ನಿತೀಶ್ ಕುಮಾರ್ ಮತ್ತು ಅಮಿತ್ ಆನಂದ್ ಜೊತೆ ತಾನು ಹೊಂದಿರುವ ಸಂಪರ್ಕದ ಬಗ್ಗೆಯೂ ಮಾಹಿತಿ ಇದೆ ಎಂದು ಬಿಹಾರ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧಗಳ ಘಟಕದ ಮೂಲಗಳು ಹೇಳಿವೆ.

ಪ್ರಶ್ನೆಪತ್ರಿಕೆಯನ್ನು ಮೇ 4ರಂದೇ ನೀಡಲು ಪರೀಕ್ಷಾರ್ಥಿಗಳಿಂದ ತಲಾ ₹40 ಲಕ್ಷ ಕೇಳಿದ್ದಾಗಿ ಯದುವೇಂದು ಹೇಳಿದ್ದಾನೆ. ಬಿಹಾರದ ದಾನಪುರ ಪುರಸಭೆಯಲ್ಲಿ ಯದುವೇಂದು ಕಿರಿಯ ಎಂಜಿನಿಯರ್ ಆಗಿದ್ದಾನೆ. ‘ನಿತೀಶ್ ಮತ್ತು ಅಮಿತ್‌ ಅವರನ್ನು ಸಂಪರ್ಕಿಸಿ ನಾನು, ಆಯುಷ್ ಕುಮಾರ್, ಅನುರಾಗ್ ಯಾದವ್, ಅಭಿಷೇಕ್ ಕುಮಾರ್ ಮತ್ತು ಶಿವನಂದನ್ ಕುಮಾರ್ ಎಂಬ ನಾಲ್ಕು ಪರೀಕ್ಷಾರ್ಥಿಗಳು ಇದ್ದಾರೆ ಎಂದು ತಿಳಿಸಿದ್ದೆ’ ಎಂದಿದ್ದಾನೆ.

ನಿತೀಶ್ ಮತ್ತು ಅಮಿತ್ ಅವರು ಪ್ರಶ್ನೆಪತ್ರಿಕೆ ಒದಗಿಸಲು ಪ್ರತಿ ಪರೀಕ್ಷಾರ್ಥಿಗೆ ₹32 ಲಕ್ಷ ದರ ನಿಗದಿ ಮಾಡಿದ್ದರು. ಈ ನಾಲ್ಕೂ ಮಂದಿಯನ್ನು ಮೇ 4ರಂದು ಅತಿಥಿ ಗೃಹವೊಂದಕ್ಕೆ ಕರೆಸಿ, ಸೋರಿಕೆಯಾದ ಪ್ರಶ್ನೆಪತ್ರಿಕೆಯನ್ನು ಬಳಸಿ ಪರೀಕ್ಷೆಗೆ ಸಿದ್ಧತೆ ನಡೆಸಲು ನೆರವು ಒದಗಿಸಲಾಯಿತು ಎಂದು ಹೇಳಿದ್ದಾನೆ.

ಮೇ 5ರಂದು ನಡೆದ ಪರೀಕ್ಷೆಯಲ್ಲಿ ಇವೇ ಪ್ರಶ್ನೆಗಳು ಇದ್ದವು ಎಂಬುದನ್ನು ಈ ಪರೀಕ್ಷಾರ್ಥಿಗಳು ಒಪ್ಪಿಕೊಂಡಿದ್ದಾರೆ. ಈ ನಾಲ್ಕು ಮಂದಿ ಪರೀಕ್ಷಾರ್ಥಿಗಳ ಪೈಕಿ ಅನುರಾಗ್ ಯಾದವ್ ರಾಜಸ್ಥಾನದ ಕೋಟಾದಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ.

ಅನುರಾಗ್ ಯಾದವ್ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ, ‘ನನ್ನ ಮಾವ (ಯದುವೇಂದು) ನಾನು ಕೋಟಾದಲ್ಲಿ ಇದ್ದಾಗ ನನ್ನ ಜೊತೆ ಮಾತನಾಡಿದರು. ಪ್ರಶ್ನೆಪತ್ರಿಕೆ ತಮಗೆ ಲಭ್ಯವಿದೆ ಎಂದರು. ನಾನು ಪಟ್ನಾಗೆ ಬಂದೆ. ಮಾವ ನನ್ನನ್ನು ಅಮಿತ್ ಮತ್ತು ನಿತೀಶ್ ಅವರಿಗೆ ಪರಿಚಯಿಸಿದರು. ಅವರು ನನಗೆ ಪ್ರಶ್ನೆಪತ್ರಿಕೆ ಹಾಗೂ ಮಾದರಿ ಉತ್ತರ ಒದಗಿಸಿದರು. ಅವರು ಒದಗಿಸಿದ್ದ ಪ್ರಶ್ನೆಗಳೇ ಮೇ 5ರಂದು ಪರೀಕ್ಷೆಯಲ್ಲೂ ಇದ್ದವು’ ಎಂದು ತಿಳಿಸಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT