ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ನೀಟ್ ಪರೀಕ್ಷಾ ಅಕ್ರಮ, ನಾಲ್ವರ ಬಂಧನ

ನಕಲಿ ವಿದ್ಯಾರ್ಥಿ ಪೂರೈಸಲು ₹20–25 ಲಕ್ಷ ಪಡೆಯುತ್ತಿದ್ದರು ಎಂಬ ಆರೋಪ
Published 18 ಮೇ 2024, 16:05 IST
Last Updated 18 ಮೇ 2024, 16:05 IST
ಅಕ್ಷರ ಗಾತ್ರ

ನವದೆಹಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷಾ (ನೀಟ್) ಅಕ್ರಮದಲ್ಲಿ ತೊಡಗಿದ್ದ ಗುಂಪನ್ನು ಭೇದಿಸಿರುವ ಪೊಲೀಸರು, ಎಂಬಿಬಿಎಸ್‌ನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಬಳಿಯಿದ್ದ ನಾಲ್ಕು ಮೊಬೈಲ್‌ಗಳು ಮತ್ತು ಕಾರನ್ನೂ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

‘ತಿಲಕ್ ಮಾರ್ಗ ಪ್ರದೇಶದಲ್ಲಿರುವ ಭಾರತೀಯ ವಿದ್ಯಾ ಭವನ ಮೆಹತಾ ವಿದ್ಯಾಲಯದಲ್ಲಿ ಮೇ 5ರಂದು ನೀಟ್ ಪರೀಕ್ಷೆ ನಡೆದಿತ್ತು. ಆದರೆ, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಬಯೋಮೆಟ್ರಿಕ್, ನೀಟ್ ವೆಬ್‌ಸೈಟ್‌ನಲ್ಲಿ ಈಗಾಗಲೇ ದಾಖಲಾದ ಬಯೋಮೆಟ್ರಿಕ್‌ನೊಂದಿಗೆ ಹೊಂದಾಣಿಕೆಯಾಗಿರಲಿಲ್ಲ. ಈ ಬಗ್ಗೆ ತನಿಖೆ ಕೈಗೊಂಡಾಗ, ಪರೀಕ್ಷಾ ಕೇಂದ್ರದ ಬಳಿಯಿದ್ದ ನಕಲಿ ವಿದ್ಯಾರ್ಥಿಗಳಾದ ಸುಮಿತ್ ಮಾಂಡೊಲಿಯಾ ಮತ್ತು ಕೃಷ್ಣನ್ ಕೇಸರವಾನಿ ಅವರು ಪೊಲೀಸರ ಬಲೆಗೆ ಬಿದ್ದಿದ್ದರು’ ಎಂದು ಶನಿವಾರ ದೆಹಲಿಯ ಪೊಲೀಸ್ ಉಪ ಆಯುಕ್ತ ದೇವೇಶ್ ಕುಮಾರ್ ಮಹ್ಲಾ ತಿಳಿಸಿದ್ದಾರೆ. 

ಈ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಅವರನ್ನು ನಕಲಿ ವಿದ್ಯಾರ್ಥಿಗಳಾಗಿ ಕಳುಹಿಸಿದ್ದ ಪ್ರಭಾತ್ ಕುಮಾರ್ (27) ಮತ್ತು ಕಿಶೋರ್ ಲಾಲ್ (37) ಎಂಬುವರನ್ನು ಶುಕ್ರವಾರ ಬಂಧಿಸಲಾಗಿದೆ. ಈ ಪ್ರಕರಣದ ಗಂಭೀರತೆಯನ್ನು ಅರ್ಥೈಸಿಕೊಂಡು, ಈ ಪ್ರಕರಣವನ್ನು ದೆಹಲಿ ಜಿಲ್ಲಾ ವಿಶೇಷ ಸಿಬ್ಬಂದಿ ಹಾಗೂ ಇನ್‌ಸ್ಪೆಕ್ಟರ್ ಸಂಜಯ್ ಕುಮಾರ್ ಗುಪ್ತಾ ನೇತೃತ್ವದ ತನಿಖೆಗೆ ವಹಿಸಲಾಗಿದೆ ಎಂದು ಡಿಸಿಪಿ ತಿಳಿಸಿದರು. 

ಕುಮಾರ್ ಮತ್ತು ಲಾಲ್ ಕ್ರಮವಾಗಿ ರಾಜಸ್ಥಾನ ಮತ್ತು ಬಿಹಾರದ ಮೂದವರಾಗಿದ್ದು, ವೈದ್ಯಕೀಯ ಕಾಲೇಜಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಸಮಾಲೋಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಇಬ್ಬರು ನೀಟ್ ಪರೀಕ್ಷೆಗೆ ಅಭ್ಯರ್ಥಿಯ ಪರವಾಗಿ ನಕಲಿ ವಿದ್ಯಾರ್ಥಿ ಕೈಯಲ್ಲಿ ಪರೀಕ್ಷೆ ಬರೆಸಲು ಒಬ್ಬರಿಂದ ತಲಾ ₹20 ಲಕ್ಷದಿಂದ ₹25 ಲಕ್ಷ ಪಡೆಯುತ್ತಿದ್ದರು. ಜತೆಗೆ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಯ ಭಾವಚಿತ್ರದೊಂದಿಗೆ ನಕಲಿ ವಿದ್ಯಾರ್ಥಿಯ ಭಾವಚಿತ್ರವನ್ನು ಸಂಯೋಜಿಸುವ ಮೂಲಕ ಮತ್ತೊಂದು ಹೊಸ ಭಾವಚಿತ್ರವನ್ನು ಬಿಡಿಸಿ, ಅದನ್ನು ನೀಟ್ ಪರೀಕ್ಷೆಯ ಅರ್ಜಿ ಮೇಲೆ ಅಂಟಿಸುತ್ತಿದ್ದರು. ಈ ಮೂಲಕ ಪರೀಕ್ಷಕರ ದಿಕ್ಕು ತಪ್ಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಮಾಂಡೊಲಿಯಾ ಮತ್ತು ಕೇಸರವಾನಿಯು ಕ್ರಮವಾಗಿ ರಾಜಸ್ಥಾನ ಮತ್ತು ಉತ್ತರಪ್ರದೇಶದವರಾಗಿದ್ದು, ಅನ್ಯ ರಾಜ್ಯಗಳಲ್ಲಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಈ ಆರೋಪಿಗಳು ಈ ಹಿಂದೆ ನಡೆದ ಪರೀಕ್ಷೆಗಳಲ್ಲೂ ಭಾಗಿಯಾಗಿದ್ದರೆ, ಎಂಬುದರ ಕುರಿತು ಮಾಹಿತಿ ಬಯಲಿಗೆಳೆಯಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT