ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೇತಾಜಿ ಚಿತಾಭಸ್ಮ ತರುವ ಪ್ರಯತ್ನ ಯಾರೂ ಮಾಡಿಲ್ಲ’

ನೆಹರೂರಿಂದ ಮೋದಿವರೆಗಿನ ಸರ್ಕಾರ ವಿಫಲ: ರೇ
Last Updated 24 ಜೂನ್ 2018, 15:49 IST
ಅಕ್ಷರ ಗಾತ್ರ

ಕೋಲ್ಕತ್ತ: ‘ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರಿಂದ ಹಿಡಿದು ಈಗಿನ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಸುಭಾಶ್ಚಂದ್ರ ಬೋಸ್‌ ಕಣ್ಮರೆಯಾಗಿರುವ ಬಗೆಗಿನ ಸತ್ಯ ಗೊತ್ತಿದೆ. ಆದರೆ, ಜಪಾನ್‌ನಿಂದ ಬೋಸ್‌ ಅವರ ಚಿತಾಭಸ್ಮವನ್ನು ತರುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ’ ಎಂದು ಸುಭಾಶ್ಚಂದ್ರ ಬೋಸ್‌ ಅವರ ಮೊಮ್ಮಗ ಹಾಗೂ ಲೇಖಕ ಆಶಿಸ್‌ ರೇ ಹೇಳಿದ್ದಾರೆ.

ಟೋಕಿಯೊದ ರೆಂಕೋಜಿ ದೇಗುಲದಲ್ಲಿರುವ ಬೋಸ್‌ ಅವರ ಚಿತಾಭಸ್ಮವನ್ನು ಮರಳಿ ದೇಶಕ್ಕೆ ತರುವ ಕುರಿತಂತೆ ಅನೇಕ ಸರ್ಕಾರಗಳು ಬೋಸ್‌ ಅವರ ಸಂಬಂಧಿಗಳನ್ನು ಸಂಪರ್ಕಿಸಲು ಸಣ್ಣಪುಟ್ಟ ಪ್ರಯತ್ನ ಮಾಡಿವೆ. ಆದರೆ, ಕೆಲವು ರಾಜಕೀಯ ಪಕ್ಷಗಳು ಈ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿವೆ ಎಂದೂ ರೇ ಹೇಳಿದ್ದಾರೆ.

‘ರೆಂಕೋಜಿ ದೇಗುಲದಲ್ಲಿ ಬೋಸ್‌ ಚಿತಾಭಸ್ಮದ ಸಂರಕ್ಷಣೆಗೆ ಭಾರತ ಸರ್ಕಾರ ಹಣ ಸಂದಾಯ ಮಾಡುತ್ತಿದೆ. ಆದರೆ, ಚಿತಾಭಸ್ಮವನ್ನು ದೇಶಕ್ಕೆ ಮರಳಿ ತರುವ ಬಗ್ಗೆ ಗಂಭೀರ ಪ್ರಯತ್ನ ಮಾಡುತ್ತಿಲ್ಲ. 1995ರಲ್ಲಿ ಆಗಿನ ಪ್ರಧಾನಿ ಪಿ.ವಿ.ನರಸಿಂಹರಾವ್‌, ವಿದೇಶಾಂಗ ಸಚಿವರಾಗಿದ್ದ ಪ್ರಣಬ್‌ ಮುಖರ್ಜಿ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದರೂ, ಅದನ್ನು ಪೂರ್ಣಗೊಳಿಸಲಿಲ್ಲ’ ಎಂದು ಅವರು ಲಂಡನ್‌ನಿಂದ ದೂರವಾಣಿ ಮೂಲಕ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಜಪಾನ್‌ನಿಂದ ಬೋಸ್‌ ಚಿತಾಭಸ್ಮ ತರುವಂತೆ ಅವರ ಪುತ್ರಿ ಅನಿತಾ ಫಾಫ್‌ ಭಾರತ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇದ್ದಾರೆ. ಅವರ ಪ್ರಯತ್ನ ಸಹ ಫಲ ನೀಡಿಲ್ಲ’ ಎಂದಿದ್ದಾರೆ.

ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಭಾಶ್ಚಂದ್ರ ಬೋಸ್‌ ಅವರ ನಿಗೂಢ ಸಾವಿನ ಕುರಿತಂತೆ ಇನ್ನೂ ನಡೆಯುತ್ತಿರುವ ಚರ್ಚೆಗೆ ತಾವು ಬರೆದಿರುವ ‘ಲೇಡ್‌ ಟು ರೆಸ್ಟ್‌: ದಿ ಕಾಂಟ್ರವರ್ಸಿ ಓವರ್ ಸುಭಾಶ್ಚಂದ್ರ ಬೋಸಸ್‌ ಡೆತ್‌’ ಕೃತಿ ಮೂಲಕ ಅಂತ್ಯ ಸಿಗಲಿದೆ ಎಂದು ರೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬೋಸ್‌ ಅವರ ಸಾವು ಕುರಿತಂತೆ ಬೇರೆ ಬೇರೆ ಸಂಸ್ಥೆಗಳು ನಡೆಸಿರುವ 11 ತನಿಖೆಗಳ ವರದಿಯಲ್ಲಿ ಅಂಶಗಳನ್ನು ತಾಳೆ ಹಾಕಿರುವ ರೇ, ಬೋಸ್‌ ಅವರು ತೈಪೆಯಲ್ಲಿ 1945ರ ಆಗಸ್ಟ್‌ 18ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT