ಗುರುವಾರ, 21 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಇಪಿ ರದ್ಧತಿ: ಡಿಕೆಶಿಗೆ ಧರ್ಮೇಂದ್ರ ಪ್ರಧಾನ್‌ 8 ಪ್ರಶ್ನೆ

ಕನ್ನಡ ಮತ್ತು ಇತರ ಭಾರತೀಯ ಭಾಷಾ ಶಿಕ್ಷಣವನ್ನು ವಿರೋಧಿಸುತ್ತದೆಯೇ? ಎಂದ ಕೇಂದ್ರ ಶಿಕ್ಷಣ ಸಚಿವ
Published 22 ಆಗಸ್ಟ್ 2023, 16:32 IST
Last Updated 22 ಆಗಸ್ಟ್ 2023, 16:32 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ರದ್ದುಗೊಳಿಸಿ, ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಸಮಿತಿ ರಚಿಸುವ ತೀರ್ಮಾನ ಕೈಗೊಂಡಿರುವ ರಾಜ್ಯದ ಕ್ರಮವನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಆಕ್ಷೇಪಿಸಿದ್ದಾರೆ. 

ಎನ್‌ಇಪಿ ರದ್ದುಗೊಳಿಸುವ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಸೋಮವಾರ ಪೋಸ್ಟ್‌ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ 8 ಪ್ರಶ್ನೆಗಳಿರುವ ವಿಡಿಯೊ ಹೇಳಿಕೆಯನ್ನು ಧರ್ಮೇಂದ್ರ ಪ್ರಧಾನ್‌ ಬಿಡುಗಡೆ ಮಾಡಿದ್ದಾರೆ.

ಎನ್‌ಇಪಿ ರದ್ದತಿ ಕುರಿತ ಅಸಂಬದ್ಧ ಹೇಳಿಕೆಗಳು ದೆಹಲಿಯಲ್ಲಿರುವ ಅವರ (ರಾಜ್ಯ ಕಾಂಗ್ರೆಸ್‌ ನಾಯಕರ) ರಾಜಕೀಯ ಯಜಮಾನರನ್ನು ಮೆಚ್ಚಿಸಬಹುದು. ಆದರೆ,  ಕರ್ನಾಟಕದ ವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತವೆ ಎಂದು ಎಚ್ಚರಿಸಿದ್ದಾರೆ. 

ಎನ್‌ಇಪಿ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಕರ್ನಾಟಕ. ಸಚಿವ ಪ್ರಧಾನ್ ಆಗಸ್ಟ್ 2021 ರಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಎನ್‌ಇಪಿಯನ್ನು ಅನುಷ್ಠಾನಕ್ಕೆ ತಂದಿದ್ದರು. 

ಏನದು ಪ್ರಶ್ನೆಗಳು?

– ಕರ್ನಾಟಕದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕನ್ನಡ ಮತ್ತು ಇತರ ಭಾರತೀಯ ಭಾಷಾ ಶಿಕ್ಷಣವನ್ನು ವಿರೋಧಿಸುತ್ತದೆಯೇ?   

– ಎನ್‌ಇಪಿಯು ಈ ದೇಶದ ಶಿಕ್ಷಣತಜ್ಞರು ರೂಪಿಸಿದ ದಾರ್ಶನಿಕ, ತಾತ್ವಿಕ ದಾಖಲೆಯಾಗಿದೆ; ಇದು ರಾಜಕೀಯ ದಾಖಲೆಯಲ್ಲ. ಇದನ್ನು ರದ್ದು ಮಾಡಿ ಕಾಂಗ್ರೆಸ್‌ ನಾಯಕರು ದೇಶದ ಯುವ ಜನತೆಗೆ, ಅದರಲ್ಲೂ ಕರ್ನಾಟಕದ ವಿದ್ಯಾರ್ಥಿಗಳಿಗೆ ಏನು ಸಂದೇಶ ನೀಡಲು ಬಯಸಿದ್ದಾರೆ?  

– ಔಪಚಾರಿಕ ಶಿಕ್ಷಣದ ಭಾಗವಾಗಿರುವ ಬಾಲ್ಯದ ಆರೈಕೆ ಮತ್ತು ಶಿಕ್ಷಣವನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆಯೇ? 

– ನಮ್ಮ ಮಕ್ಕಳು 2ನೇ ತರಗತಿ ಪೂರ್ಣಗೊಳಿಸುವ ಹೊತ್ತಿಗೆ ಸಾಕ್ಷರತೆ ಮತ್ತು ಗಣಿತದ ಪರಿಣತಿ ಸಾಧಿಸಬೇಕೆಂದು ಅವರು ಬಯಸುವುದಿಲ್ಲವೇ? 

– ಸ್ಥಳೀಯ ಆಟಿಕೆಗಳು, ಆಟಗಳು ಮತ್ತು ಆಟದ ಆಧಾರಿತ ಕಲಿಕೆಯನ್ನು ಕಾಂಗ್ರೆಸ್‌ ವಿರೋಧಿಸುತ್ತದೆಯೇ?  ಕರ್ನಾಟಕದಲ್ಲಿ ‘ಚೆನ್ನೆಮನೆ’ಯನ್ನು ಕಾಂಗ್ರೆಸ್‌ ನಾಯಕರು ವಿರೋಧಿಸುತ್ತಾರೆಯೇ?  

– ನೀಟ್‌, ಸಿಯುಇಟಿ, ಜೆಇಇ ರೀತಿಯ ಪರೀಕ್ಷೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನಡೆಸುವುದನ್ನು ಅವರು ಬಯಸುವುದಿಲ್ಲವೇ ?  

– ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮೂಲಕ ಕರ್ನಾಟಕದ ಯುವಕರು ವಿಶ್ವದರ್ಜೆಯ ಸಂಶೋಧನಾ ಸೌಲಭ್ಯಗಳನ್ನು ಪಡೆಯುವುದನ್ನು ಶಿವಕುಮಾರ್ ಬಯಸುವುದಿಲ್ಲವೇ ಅಥವಾ ಈ ಶತಮಾನದ ಹೊಸ, ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ವಿದ್ಯಾರ್ಥಿಗಳು ಕಲಿಯಲು ಅವರು ಬಯಸುವುದಿಲ್ಲವೇ? 

–  21ನೇ ಶತಮಾನದ ಶಿಕ್ಷಣಕ್ಕೆ ಸಂಬಂಧಿಸಿದ ಹೊಸ ಪಠ್ಯಪುಸ್ತಕಗಳನ್ನು ಅವರು ಬಯಸುವುದಿಲ್ಲವೇ? 

ಏನು ಹೇಳಿದ್ದರು ಡಿಕೆಶಿ?

ಎನ್‌ಇಪಿ ರದ್ದತಿಗೆ ಸಂಬಂಧಿಸಿದಂತೆ ಸೋಮವಾರ ಎಕ್ಸ್‌ನಲ್ಲಿ ಪೋಸ್ಟ್‌ ಪ್ರಕಟಿಸಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ‘ಕರ್ನಾಟಕದಲ್ಲೇ ಮೊದಲು ಎನ್ಇಪಿ‌ ಜಾರಿ ಮಾಡುವ ತರಾತುರಿ ಏನಿದೆ? ಗುಜರಾತ್, ಉತ್ತರ ಪ್ರದೇಶದಲ್ಲಿ ಏಕೆ ಎನ್ಇಪಿ ಜಾರಿ ಮಾಡಿಲ್ಲ. ಕರ್ನಾಟಕದಲ್ಲಿರುವ ಶಿಕ್ಷಣ ವ್ಯವಸ್ಥೆ ದೇಶಕ್ಕೇ ಮಾದರಿಯಾಗಿದೆ. ಅದರಿಂದಾಗಿಯೇ ಇಂದು ಬೆಂಗಳೂರು ಐಟಿ ರಾಜಧಾನಿಯಾಗಿರುವುದು. ರಾಜ್ಯದಲ್ಲಿನ ಅದೆಷ್ಟೋ ಜನ ವಿದೇಶದಲ್ಲಿ ಒಳ್ಳೆಯ ಸ್ಥಾನದಲ್ಲಿದ್ದಾರೆ. ಅದಕ್ಕೂ ನಮ್ಮ ಶಿಕ್ಷಣ ವ್ಯವಸ್ಥೆಯೇ ಕಾರಣ. ನಮ್ಮ ರಾಜ್ಯದಲ್ಲಿ ಎನ್‌ಇಪಿ ಇನ್ನು ಮುಂದಕ್ಕೆ ಅನ್ವಯಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ನಾವು ಪ್ರತ್ಯೇಕವಾಗಿ ಸಮಿತಿಯನ್ನು ರಚಿಸುತ್ತೇವೆ’ ಎಂದು ಹೇಳಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT