ನವದೆಹಲಿ: ಸೆಂಟ್ರಲ್ ಹಾಲ್ ನಮ್ಮ ಭಾವನೆಗಳಿಂದ ತುಂಬಿದ್ದು, ನವ ಭವಿಷ್ಯ ಆರಂಭಿಸಲು ನಾವು ಹೊಸ ಸಂಸತ್ ಭವನದತ್ತ ಹೆಜ್ಜೆ ಇಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ಹಳೆಯ ಸಂಸತ್ ಕಟ್ಟಡದ ಸೆಂಟ್ರಲ್ ಹಾಲ್‌ನಲ್ಲಿ ಅವರು ಮಾತನಾಡಿದರು. ಅವರು ಭಾಷಣದ ಮೂಲಕ ಹಳೆ ಸಂಸತ್ ಭವನದಲ್ಲಿ ಕಲಾಪಕ್ಕೆ ವಿದಾಯ ಹೇಳಿದರು.
ಭಾರತ ಶೀಘ್ರದಲ್ಲಿ ವಿಶ್ವದ 3ನೇ ಆರ್ಥಿಕ ರಾಷ್ಟ್ರವಾಗಲಿದೆ ಎಂದರು. ದೇಶದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿ ಮಾಡಲಾಗಿದೆ. ನಮ್ಮ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ ಎಂದರು.
ಜಾಗತಿಕವಾಗಿ ಭಾರತದ ಸಾಧನೆ ಚರ್ಚೆಯ ವಿಷಯವಾಗಿದೆ. ನಮ್ಮ ವೇಗದ ಅಭಿವೃದ್ಧಿಯನ್ನು ಇಡೀ ವಿಶ್ವ ಬೆರಗುಗಣ್ಣಿನಿಂದ ನೋಡುತ್ತಿದೆ ಎಂದು ಮೋದಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ, ಚಂದ್ರಯಾನ ಯಶಸ್ವಿಯಾಗಿದೆ, ನಮ್ಮ ಆತ್ಮನಿರ್ಭರ್ ಯೋಜನೆಗಳು ಯಶಸ್ವಿಯಾಗಿವೆ, ನಮ್ಮ ಆಲೋಚನೆಗಳು ಹೊಸದನ್ನು ಕಲಿಯಲು ಪ್ರಯತ್ನಿಸುತ್ತಿವೆ ಎಂದು ಮೋದಿ ಹೇಳಿದರು.
ನಿನ್ನೆಯಿಂದ ಸಂಸತ್ತಿನ ವಿಶೇಷ ಅಧಿವೇಶನ ಆರಂಭವಾಗಿದೆ. ಒಟ್ಟು 5 ದಿನಗಳ ವಿಶೇಷ ಅಧಿವೇಶನ ನಡೆಯಲಿದ್ದು ಹಲವು ಮಸೂದೆಗಳು ಮಂಡನೆಯಾಗಲಿವೆ.
ಇಂದು ಮಧ್ಯಾಹ್ನ 1.15ಕ್ಕೆ ಲೋಕಸಭೆಯ ಕಲಾಪ ಆರಂಭವಾಗಲಿದೆ. ರಾಜ್ಯಸಭೆ ಕಲಾಪ ಮಧ್ಯಾಹ್ನ 2.15ಕ್ಕೆ ಶುರುವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.