ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕೋರ್ಸ್ ಪೂರೈಸಲು NMC ಅವಕಾಶ

Published 5 ಡಿಸೆಂಬರ್ 2023, 15:24 IST
Last Updated 5 ಡಿಸೆಂಬರ್ 2023, 15:25 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಕೋರ್ಸ್ ವ್ಯಾಸಂಗಕ್ಕೆ ಉಕ್ರೇನ್‌ಗೆ ತೆರಳಿದ್ದ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಕೋರ್ಸ್ ಪೂರ್ಣಗೊಳಿಸಲು ಒಂದು ಬಾರಿ ಅವಕಾಶ ಕಲ್ಪಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗ (NMC) ಅವಕಾಶ ಕಲ್ಪಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯಖಾತೆ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ರಾಜ್ಯಸಭೆಗೆ ಮಂಗಳವಾರ ನೀಡಿದ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

‘ರಷ್ಯಾ–ಉಕ್ರೇನ್ ಯುದ್ಧ ಘೋಷಣೆ ನಂತರ ಕೋರ್ಸ್‌ ಅರ್ಧಕ್ಕೆ ಬಿಟ್ಟು ಭಾರತಕ್ಕೆ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯವನ್ನು ಪರಿಗಣಿಸಿ ಎನ್‌ಎಂಸಿ ಈ ಕ್ರಮ ಕೈಗೊಂಡಿದೆ. ಇದರಲ್ಲಿ ಉಕ್ರೇನ್‌ನಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಯು 2022ರ ಜೂನ್ 30ಕ್ಕೂ ಪೂರ್ವದಲ್ಲಿ ತನ್ನ ಕೊನೆಯ ವರ್ಷದ ವೈದ್ಯಕೀಯ ಕೋರ್ಸ್‌ನಲ್ಲಿದ್ದು, ಪದವಿ ಪೂರ್ಣಗೊಳಿಸಿದ ಪ್ರಮಾಣಪತ್ರ ಪಡೆದಿದ್ದರೆ, ಅಂಥ ವಿದ್ಯಾರ್ಥಿಗಳಿಗೆ ಫಾರಿನ್ ಮೆಡಿಕಲ್ ಗ್ರಾಜುಯೇಟ್ ಎಕ್ಸಾಮ್‌ (ಎಫ್‌ಎಂಜಿ) ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಈ ಪರೀಕ್ಷೆಯಲ್ಲಿ ಪಾಸಾದ ವಿದೇಶದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು 2 ವರ್ಷಗಳ ಕಾಲ ಸಿಆರ್‌ಎಂಐ ಎಂಬ ವೈದ್ಯಕೀಯ ಇಂಟ್ರನ್‌ಶಿಪ್‌ ಅನ್ನು ಪೂರ್ಣಗೊಳಿಸಬೇಕು. ಆಗ ಮಾತ್ರ ವೈದ್ಯಕೀಯ ವೃತ್ತಿಗೆ ಹೆಸರು ನೋಂದಾಯಿಸಲು ಅರ್ಹರಾಗಿರುತ್ತಾರೆ. ಇದು ಉಕ್ರೇನ್‌ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಪಿಲಿಫೀನ್ಸ್‌ನಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೂ ಈ ಅವಕಾಶ ನೀಡಲಾಗಿದೆ’ ಎಂದು ಹೇಳಲಾಗಿದೆ.

‘ಹೀಗೆ ಮಾನ್ಯತೆ ಪಡೆಯಲು ಹಾಗೂ ಇತರ ವಿಶ್ವವಿದ್ಯಾಲಯದಲ್ಲಿ ಕಲಿಯಲು ತಾತ್ಕಾಲಿಕ ಸ್ಥಳಾಂತರಕ್ಕೆ ಅವಕಾಶ ನೀಡಲು ಕೋರಿ ಉಕ್ರೇನ್‌ನಿಂದ ನಿರಪೇಕ್ಷಣಾ ಪತ್ರ ಪಡೆಯುವುದನ್ನು ಎನ್‌ಎಂಸಿ ಕಡ್ಡಾಯಗೊಳಿಸಿದೆ. ಇದರಿಂದಾಗಿ ಉಕ್ರೇನ್‌ನಿಂದ ಮರಳಿದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಒಂದು ಬಾರಿ ಕೋರ್ಸ್ ಪೂರ್ಣಗೊಳಿಸುವ ಅವಕಾಶ ಸಿಗಲಿದೆ. ಹೀಗೆ ಕೋರ್ಸ್ ಪೂರ್ಣಗೊಳಿಸಿದವರಿಗೆ ವಲಸೆ ಬಂದ ವಿಶ್ವವಿದ್ಯಾಲಯವೇ ಪ್ರಮಾಣ ಪತ್ರ ನೀಡಲಿದೆ’ ಎಂದು ಪವಾರ್ ತಿಳಿಸಿದ್ದಾರೆ.

‘ಈ ಆದೇಶ ನ. 22ರಂದು ಹೊರಡಿಸಲಾಗಿದ್ದು, ಮೂರು ತಿಂಗಳ ಕಾಲಾವಧಿ ನೀಡಲಾಗಿದೆ. ಒಟ್ಟು 5,715 ಭಾರತೀಯ ವಿದ್ಯಾರ್ಥಿಗಳು 2023ರ ಸೆಪ್ಟೆಂಬರ್‌ವರೆಗೆ ಉಕ್ರೇನ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗಕ್ಕೆ ನೋಂದಾಯಿಸಿಕೊಂಡಿದ್ದಾರೆ. ಸದ್ಯ 2,510 ವಿದ್ಯಾರ್ಥಿಗಳು ಆಫ್‌ಲೈನ್ ಮೂಲಕ ವಿದ್ಯಾಭ್ಯಾಸ ಮುಂದುವರಿಸಿದ್ದಾರೆ. 2,952 ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಕಲಿಯುತ್ತಿದ್ದಾರೆ. 242 ವಿದ್ಯಾರ್ಥಿಗಳು ಕೋರ್ಸ್ ಪೂರ್ಣಗೊಳಿಸಲು  ಬೇರೆ ರಾಷ್ಟ್ರಗಳಿಗೆ ತೆರಳಿದ್ದಾರೆ’ ಎಂದು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

‘ದೇಶದಲ್ಲಿ ವೈದ್ಯಕೀಯ ಕೋರ್ಸ್‌ಗಳ ಅವಕಾಶ ಹೆಚ್ಚು ಕಲ್ಪಿಸಲು ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹೊಸದಾಗಿ 157 ವೈದ್ಯಕೀಯ ಕಾಲೇಜುಗಳಿಗೆ ಅನಮತಿ ನೀಡಲಾಗಿದೆ. ಇದರಲ್ಲಿ 108 ಕಾಲೇಜುಗಳು ಈಗಾಗಲೇ ಕಾರ್ಯಾರಂಭ ಮಾಡಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT