ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂವಿಎಯಲ್ಲಿ ಗೊಂದಲವಿಲ್ಲ: ಶರದ್‌ ಪವಾರ್‌

ಅಜಿತ್‌ ಪವಾರ್‌ ಜೊತೆಗಿನ ರಹಸ್ಯ ಭೇಟಿ ಕುರಿತು ಸ್ಪಷ್ಟನೆ
Published 14 ಆಗಸ್ಟ್ 2023, 23:30 IST
Last Updated 14 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಬಾರಾಮತಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರನ್ನು ಪುಣೆಯಲ್ಲಿ ಭೇಟಿ ಮಾಡಿರುವುದಕ್ಕೆ ರಾಜ್ಯದಲ್ಲಿನ ‘ಮಹಾ ವಿಕಾಸ ಆಘಾಡಿ’ಯಲ್ಲಿ (ಎಂವಿಎ) ಯಾವುದೇ ಗೊಂದಲಗಳು ಇಲ್ಲ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

‘ಎಂವಿಎ ಒಗ್ಗಟ್ಟಿನಿಂದ ಇದೆ ಮತ್ತು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ದ ಮುಂದಿನ ಸಭೆಯನ್ನು ಆಗಸ್ಟ್‌ 31 ಮತ್ತು ಸೆಪ್ಟೆಂಬರ್‌ 1ರಂದು ಮುಂಬೈನಲ್ಲಿ ಯಶಸ್ವಿಯಾಗಿ ಮುನ್ನಡೆಸುವ ಹೊಣೆಯನ್ನು ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ, ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಮತ್ತು ನಾನು ಹೊತ್ತಿದ್ದೇವೆ. ಎಂವಿಎಯಿಂದ ಹೊರಹೋಗಿ ಬಿಜೆಪಿ ಜೊತೆ ಕೈಜೋಡಿಸಿರುವ ಬಣದ ಜೊತೆ ಎನ್‌ಸಿಪಿ ಸಹಯೋಗ ಹೊಂದಿಲ್ಲ’ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಮೇಲಿಂದ ಮೇಲೆ ಶರದ್‌ ಪವಾರ್‌ ಅವರು ತಮ್ಮ ಸಂಬಂಧಿ ಅಜಿತ್‌ ಪವಾರ್‌ ಅವರನ್ನು ಭೇಟಿಯಾಗುತ್ತಿರುವ ಕುರಿತು ಶಿವಸೇನಾ (ಯುಬಿಟಿ) ತನ್ನ ಮುಖವಾಣಿ ಪತ್ರಿಕೆ ಸಾಮ್ನಾದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು.

ಮಹಾರಾಷ್ಟ್ರದ ಎನ್‌ಸಿಪಿ ಮುಖ್ಯಸ್ಥ ಜಯಂತ್‌ ಪಾಟೀಲ್‌ ಅವರು ಬಿಜೆಪಿ ಜೊತೆ ಕೈಜೋಡಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಜಯಂತ್‌ ಅವರ ಸಹೋದರನಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್‌ ನೀಡಿದೆ. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಈ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ನಮ್ಮ ಇತರ ಸಹೋದ್ಯೋಗಿಗಳ ವಿಚಾರದಲ್ಲೂ ಈ ರೀತಿಯ ತಂತ್ರ ಪ್ರಯೋಗಿಸಲಾಗಿತ್ತು. ಹಾಗಾಗಿ ಅವರು ಬಿಜೆಪಿ ಜೊತೆ ಕೈಜೋಡಿಸಿದರು. ಆದರೆ, ಜಯಂತ್‌ ಹಾಗೆ ಮಾಡುವುದಿಲ್ಲ. ಸೈದ್ಧಾಂತಿಕ ಬದ್ಧತೆ ವಿಚಾರದಲ್ಲಿ ಅವರಿಗಿರುವ ಸ್ಪಷ್ಟತೆ ಕುರಿತು ನನಗೆ ವಿಶ್ವಾಸವಿದೆ’ ಎಂದರು.

ಈಚೆಗೆ ಕೊನೆಗೊಂಡ ಸಂಸತ್‌ ಅಧಿವೇಶನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ಆದರೆ, ಮಣಿಪುರದ ವಿಚಾರವಾಗಿ ಕೆಲವೇ ನಿಮಿಷ ಮಾತನಾಡಿದರು. ಮಣಿಪುರ ಜನರಿಗೆ ಭರವಸೆ ನೀಡುವ ನಿಟ್ಟಿನಲ್ಲಿ ಅವರು ಏನನ್ನೂ ಮಾತನಾಡಲಿಲ್ಲ. ಹೀಗಾಗಿ ಯಾವುದೇ ಗುರುತರವಾದ ಫಲಿತಾಂಶವೂ ಸಿಗಲಿಲ್ಲ’ ಎಂದು ಹೇಳಿದರು.

ಶರದ್‌ ಮತ್ತು ಅಜಿತ್‌ ಅವರ ಭೇಟಿಯಿಂದ ರಾಜಕೀಯ ವಲಯದಲ್ಲಿ ಎದ್ದಿರುವ ಗೊಂದಲದ ಬಗ್ಗೆ ಸ್ಪಷ್ಟನೆ ನೀಡುವಂತೆ ಎಂವಿಎ ಅಂಗಪಕ್ಷಗಳಾದ ಕಾಂಗ್ರೆಸ್‌ ಮತ್ತು ಶಿವಸೇನಾ (ಯುಟಿಬಿ) ಶರದ್‌ ಪವಾರ್‌ ಅವರನ್ನು ಆಗ್ರಹಿಸಿದ್ದವು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT