ನವದೆಹಲಿ: ‘ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಬಾಬಾ ಸಾಹೇಬ ಅಂಬೇಡ್ಕರ್ ಅವರ ಅಭಿಪ್ರಾಯಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ’ ಎಂದು ಉತ್ತರಾಖಂಡ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ಕಾಂಗ್ರೆಸ್ ನಂಬುತ್ತದೆ. ಅದೇ ದೃಷ್ಟಿಕೋನವನ್ನು ಅಂಬೇಡ್ಕರ್ ಹೊಂದಿದ್ದರು’ ಎಂದು ಹೇಳಿದರು.
ಬಿಜೆಪಿಯನ್ನು ಮೀಸಲಾತಿ ವಿರೋಧಿ ಎಂದು ಟೀಕಿಸಿದ ರಾವತ್, ‘ಬಿಜೆಪಿಯ ಮೂಲಭೂತವಾದಿ ಚಿಂತನೆಯಿಂದ ಮೀಸಲಾತಿಗೆ ಅಪಾಯವಿದೆ’ ಎಂದು ಹೇಳಿದರು.
‘ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಯಾವುದೇ ವೇದಿಕೆಯಲ್ಲಿ ಎದುರುಗೊಳ್ಳುವ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ದೃಢವಾಗಿ ಉತ್ತರಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಮೋದಿ ಪ್ರಶ್ನೆಗಳಿಂದಲೇ ಅಂತರ ಕಾಯ್ದುಕೊಳ್ಳುತ್ತಾರೆ’ ಎಂದರು.
‘ಬಿಜೆಪಿ ಸರ್ಕಾರದ ಅಡಿಯಲ್ಲಿ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರು ಅಸುರಕ್ಷತೆಯಿಂದ ಬದುಕುವಂತಾಗಿದೆ. ಕೋಮುವಾದ ಮತ್ತು ಅಸಹಿಷ್ಣುತೆ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ದೇಶದಲ್ಲಿ ಗುಂಪು ಹತ್ಯೆ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮುಸ್ಲಿಮರು ಗುಂಪು ಹಲ್ಲೆಗೆ ಒಳಗಾಗಿ ಹತ್ಯೆಯಾದರೆ, ದಲಿತ ಹೆಣ್ಣು ಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ಹೆಚ್ಚಿನ ಅತ್ಯಾಚಾರ ಪ್ರಕರಣಗಳಲ್ಲಿ ಬಿಜೆಪಿ ನಾಯಕರೇ ಆರೋಪಿಗಳಾಗಿದ್ದಾರೆ’ ಎಂದು ಕಿಡಿಕಾರಿದರು.