ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದ ಸೋನಭದ್ರದಲ್ಲಿ ಪತ್ತೆಯಾಗಿರುವುದು 3000 ಟನ್‌ ಚಿನ್ನವಲ್ಲ...!

Last Updated 22 ಫೆಬ್ರುವರಿ 2020, 15:00 IST
ಅಕ್ಷರ ಗಾತ್ರ

ಕೋಲ್ಕತ: ಉತ್ತರರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ 3000 ಸಾವಿರ ಟನ್‌ಗಳಷ್ಟು ಚಿನ್ನದ ನಿಕ್ಷೇಪ ಪತ್ತೆಯಾಗಿರುವ ಕುರಿತ ವರದಿಗಳನ್ನು ಭಾರತೀಯ ಭೂ ವಿಜ್ಞಾನ ಇಲಾಖೆ ಶನಿವಾರ ಅಲ್ಲಗೆಳೆದಿದೆ.

‘ಸೋನಭದ್ರ ಜಿಲ್ಲಾ ಭೂ ವಿಜ್ಞಾನ ಇಲಾಖೆ ಅಧಿಕಾರಿ ತಿಳಿಸಿರುವಂತೆ ಅಲ್ಲಿ 3000 ಟನ್‌ ಚಿನ್ನ ಇಲ್ಲ. ಭಾರತೀಯ ಭೂ ವಿಜ್ಞಾನ ಇಲಾಖೆಯಿಂದ ಅಂಥ ಯಾವುದೇ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿಲ್ಲ,’ ಎಂದು ಇಲಾಖೆಯ ಮಹಾ ನಿರ್ದೇಶಕ ಎಂ. ಶ್ರೀಧರ್‌ ಕೋಲ್ಕತದಲ್ಲಿ ಪಿಟಿಐಗೆ ಶನಿವಾರ ತಿಳಿಸಿದ್ದಾರೆ.

‘ಅಲ್ಲಿ ಚಿನ್ನದ ಅದಿರು ಇದೆಯೇ ಎಂಬುದರ ಕುರಿತಾಗಿ ನಾವು ನಡೆಸಿದ ಅಧ್ಯಯನದ ವರದಿಯನ್ನು ರಾಜ್ಯ ಘಟಕಕ್ಕೆ ಹಸ್ತಾಂತರಿಸಿದ್ದೇವೆ. ಭೂ ವಿಜ್ಞಾನ ಇಲಾಖೆಯ ಉತ್ತರ ವಿಭಾಗವು ಸೋನಭದ್ರದಲ್ಲಿ 1998–99 ಮತ್ತು 1999–2000ರ ಅವಧಿಯಲ್ಲಿ ಅಧ್ಯಯನ ನಡೆಸಿತ್ತು. ಇದೇ ಮಾಹಿತಿಯನ್ನು ಉತ್ತರ ಪ್ರದೇಶದ ಭೂ ವಿಜ್ಞಾನ ಇಲಾಖೆಯ ಡಿಜಿಎಂ ಅವರಿಗೆ ನೀಡಿದ್ದೇವೆ. ಅಲ್ಲದೆ, ಮುಂದಿನ ಕ್ರಮ ಕೈಗೊಳ್ಳುವಂತೆ ಹೇಳಿದ್ದೇವೆ,’ ಎಂದು ಶ್ರೀಧರ್‌ ತಿಳಿಸಿದರು.

‘ಅಲ್ಲಿ ನಡೆದ ಚಿನ್ನದ ಶೋಧ ಕಾರ್ಯ ಸಮಾಧಾನಕರವಾಗಿರಲಿಲ್ಲ. ಅಧ್ಯಯನಗಳಿಂದ ತಿಳಿದು ಬಂದ ಅಂಶಗಳು ಮುಂದಿನ ಕ್ರಮಕ್ಕೆ ಪ್ರೋತ್ಸಾಹದಾಯಕವಾಗಿಯೂ ಇರಲಿಲ್ಲ,’ ಎಂದೂ ಅವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

‘ಸೋನಭದ್ರ ಜಿಲ್ಲೆಯ ನಿರ್ದಿಷ್ಟ ಪ್ರದೇಶಗಳಲ್ಲಿ 170 ಮೀಟರ್‌ ಆಳದಲ್ಲಿ ಚಿನ್ನದ ನಿಕ್ಷೇಪ ಹರಡಿಕೊಂಡಿದೆ. 52,806.25 ಟನ್‌ಗಳಷ್ಟು ಅದಿರಿನಲ್ಲಿ ಅದು ಹಂಚಿಹೋಗಿದೆ. ಅಲ್ಲಿನ ಪ್ರತಿ ಟನ್‌ಗೆ 3.3 ಗ್ರಾಂ ಚಿನ್ನ ಲಭ್ಯವಿದೆ. ಒಟ್ಟಾರೆ 160 ಕೆ.ಜಿಯ ನಿಕ್ಷೇಪ ಅಲ್ಲಿದೆ,’ ಎಂದು ಶ್ರೀಧರ್‌ ತಿಳಿಸಿದರು.

ಭಾರತೀಯ ಭೂವಿಜ್ಞಾನ ಇಲಾಖೆಯ ಸೋನಭದ್ರ ಜಿಲ್ಲಾ ಅಧಿಕಾರಿ ಕೆ. ಕೆ ರಾಯ್ ಅವರು ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಸೋನಭದ್ರ ಜಿಲ್ಲೆಯ ಸೋನ್‌ ಪಹಡಿ ಮತ್ತು ಹರ್ದಿ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಚಿನ್ನದ ನಿಕ್ಷೇಪವಿರುವುದಾಗಿ ತಿಳಿಸಿದ್ದರು.

ಸೋನ್‌ ಪಹಡಿಯಲ್ಲಿ 2943 ಟನ್‌ ಚಿನ್ನವಿದ್ದರೆ, ಹರ್ದಿ ಎಂಬಲ್ಲಿ 646 ಕೆ.ಜಿ ಚಿನ್ನ ಪತ್ತೆಯಾಗಿರುವುದಾಗಿ ತಿಳಿಸಿದ್ದರು.

ಸೋನಭದ್ರದಲ್ಲಿ 3000 ಟನ್‌ನಷ್ಟು ಚಿನ್ನ ಪತ್ತೆಯಾಗಿರುವ ಕುರಿತ ಈ ಹಿಂದಿನನ ವರದಿಗಳ ಆಧಾರದಲ್ಲಿ ಮಾತನಾಡಿದ್ದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ, ಈ ಸುದ್ದಿಯೊಂದಿಗೆ ಉತ್ತರ ಪ್ರದೇಶ ಸರ್ಕಾರ ಸಂತೋಷಗೊಂಡಿದೆ. ಈ ನಿಕ್ಷೇಪದಿಂದ ಭಾರತ ಆರ್ಥಿಕವಾಗಿ ಸದೃಢವಾಗಲಿದೆ ಎಂದು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT